ಮೂಲ ಸೌಕರ್ಯ ಅಭಿವೃದ್ಧಿ ಪರಿಶೀಲಿಸಿದ ಪೌರಾಯುಕ್ತ
ಚಿಕ್ಕಮಗಳೂರು: ನಗರಸಭೆ ವ್ಯಾಪ್ತಿಯ ಹಿರೇಮಗಳೂರು ಬಡಾವಣೆಗೆ ಶನಿವಾರ ಭೇಟಿ ನೀಡಿದ್ದ ನಗರಸಭೆಯ ಪೌರಾಯುಕ್ತ ನಾಗಭೂಷಣ್ ಒಳಚರಂಡಿ ನಿರ್ಮಾಣ ಕಾರ್ಯ, ಕುಡಿಯುವ ನೀರು ಸರಬರಾಜು, ನೈರ್ಮಲ್ಯ ವ್ಯವಸ್ಥೆಯನ್ನು ಪರಿಶೀಲಿಸಿ ಜನರಿಂದ ಸಮಸ್ಯೆಗಳನ್ನು ಆಲಿಸಿದರು.
ಲಕ್ಷ್ಮೀಪುರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸಮುದಾಯ ಭವನ ನಿವೇಶನವನ್ನು ವೀಕ್ಷಿಸಿದ ಆಯುಕ್ತರು, ಜನರೊಂದಿಗೆ ಸಮಾಲೋಚನೆ ನಡೆಸಿದರು. ಬಾಕ್ಸ್ ಚರಂಡಿ ಮತ್ತು ರಸ್ತೆ ಅಭಿವೃದ್ಧಿಪಡಿಸುವಂತೆ ಜನರು ಮಾಡಿಕೊಂಡ ಮನವಿಗೆ ಸಕರಾತ್ಮಕವಾಗಿ ಸ್ಪಂದಿಸಿದ ಆಯುಕ್ತರು ಮುಂದಿನ ದಿನಗಳಲ್ಲಿ ಈ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದಾಗಿ ಹೇಳಿದರು.
ಚರಂಡಿ ಪರಿಶೀಲನೆ: ಹಿರೇಮಗಳೂರಿನಲ್ಲಿ ಪಕ್ಕಾ ಮನೆ ಯೋಜನೆಯಡಿ ನಿರ್ಮಿಸಿರುವ ಮನೆಗಳನ್ನು ವೀಕ್ಷಿಸಿದರು. ಗುಂಡಿ ಹಟ್ಟಿಯಲ್ಲಿ ಚರಂಡಿ ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಪರಿಶೀಲಿಸಿದರು. ಲಿಂಗಾಯತರ ಬೀದಿಯಲ್ಲಿ ಪಾದಯಾತ್ರೆಯಲ್ಲಿ ಸಾಗಿದ ಅವರು, ಹಲವರಿಂದ ಸಮಸ್ಯೆಗಳನ್ನು ಆಲಿಸಿದರು. ಒಂದೊಂದು ಮನೆಗೆ ಎರಡು ಮೂರು ನಲ್ಲಿಗಳನ್ನು ಹಾಕಿಸಿಕೊಂಡಿದ್ದಾರೆ ಎಂಬ ದೂರನ್ನು ಆಲಿಸಿದ ಅವರು, ಆ ರೀತಿ ಹಾಕಿದ್ದರೆ ತೆಗೆಯುವಂತೆ ನೀರುಗಂಟಿಗೆ ಸೂಚಿಸಿದರು.
ರಸ್ತೆಗೆ ಡಾಂಬರ್ ಹಾಕಿ: ಹಂಚಿನಮನೆ ಹತ್ತಿರದಲ್ಲಿ ಚರಂಡಿಯಲ್ಲಿ ತ್ಯಾಜ್ಯ ನೀರು ಹರಿಯದೆ ನಿಂತಿರುವುದನ್ನು ಕಂಡ ಅವರು, ಹೊಸದಾಗಿ ಚರಂಡಿ ನಿರ್ಮಾಣ ಆಗುವವರೆಗೆ ಸ್ವಚ್ಛಗೊಳಿಸುವಂತೆ ಆರೋಗ್ಯಾಧಿಕಾರಿ ಆದೀಶ್‌ಗೆ ಸೂಚಿಸಿದರು. ಗುಂಡಿನಮ್ಮ ದೇವಾಲಯಕ್ಕೆ ಸಾಗುವ ರಸ್ತೆಗೆ ಡಾಂಬರ್ ಹಾಕುವಂತೆ ಹಾಗೂ ಚರಂಡಿ ನಿರ್ಮಿಸಿಕೊಡುವಂತೆ ಜನರು ಮನವಿ ಮಾಡಿದರು.
ಶ್ರೀ ಕೋದಂಡರಾಮಚಂದ್ರಸ್ವಾಮಿ ಬೀದಿಯಲ್ಲಿ ಸಾಗಿದ ಅವರು, ಒಳಚರಂಡಿ ಕಾಮಗಾರಿಯನ್ನು ವೀಕ್ಷಿಸಿದರು. ಪರಿಶಿಷ್ಟರ ಕಾಲೋನಿಯ ಮುತ್ತಿನಮ್ಮ ದೇವಾಲಯ ಎದುರಿನಲ್ಲಿರುವ ನಗರಸಭೆ ನಿವೇಶನದಲ್ಲಿ ಪಾರ್ಕ್ ನಿರ್ಮಿಸಿ ಅಭಿವೃದ್ಧಿಪಡಿಸುವಂತೆ ಎಂಜಿನಿಯರ್‌ಗೆ ಸೂಚಿಸಿದರು.
ಕಾಲೋನಿಯ ಚಿಕ್ಕಮ್ಮ ದೇವಾಲಯದ ಪಕ್ಕದಲ್ಲಿ ಜೀರ್ಣಾವಸ್ಥೆಯಲ್ಲಿರುವ ಸಮುದಾಯ ಭವನವನ್ನು ತೆರವುಗೊಳಿಸಿ ಹೊಸದಾಗಿ ನಿರ್ಮಿಸಲು ಉದ್ದೇಶಿಸಿರುವ ಕುರಿತು ನಗರಸಭೆ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ ಆಯುಕ್ತರಿಗೆ ಮಾಹಿತಿಗಳನ್ನು ನೀಡಿದರು.
ಸಮಸ್ಯೆಗಳಿಗೆ ಸ್ಪಂದಿಸಿ: ಕುಡಿಯುವ ನೀರು ಮತ್ತು ನೈರ್ಮಲ್ಯ ವ್ಯವಸ್ಥೆ ಕುರಿತು ಯಾವುದೇ ದೂರುಗಳು ಸಾರ್ವಜನಿಕರಿಂದ ಬಾರದಂತೆ ನೋಡಿಕೊಳ್ಳಬೇಕು. ಈ ಕಾರ್ಯಗಳಿಗೆ ಪ್ರಥಮಾದ್ಯತೆ ನೀಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಜತೆಯಲ್ಲಿದ್ದ ಸಿಬ್ಬಂದಿಗೆ ಆಯುಕ್ತ ನಾಗಭೂಷಣ್ ಸೂಚಿಸಿದರು. ಅಂಬೇಡ್ಕರ್ ಯುವ ಅಭಿವೃದ್ಧಿ ಸಂಘ ಅಧ್ಯಕ್ಷ ಎಚ್.ಸಿ. ಗಂಗಾಧರ್, ಕಾರ್ಯದರ್ಶಿ ಪುಷ್ಪರಾಜ್, ಸುರೇಶ್, ಸಂತೋಷ್, ಸೋಮಶೇಖರ್, ಎಂಜಿನಿಯರ್ ಚಂದನ್ ಹಾಜರಿದ್ದರು.