ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಕಳೆಗುಂದಿದ ದತ್ತ ಜಯಂತಿ ಶೋಭಾಯಾತ್ರೆ

Lingaraj Badiger
Updated On : 16 Dec 2013, 10:36 am

ಕ.ಪ್ರ.ವಾರ್ತೆ  ಚಿಕ್ಕಮಗಳೂರು  ಡಿ.15
ದತ್ತಜಯಂತಿ ಉತ್ಸವದ 2ನೇ ದಿನವಾದ ಭಾನುವಾರ ಚಿಕ್ಕಮಗಳೂರು ನಗರದಲ್ಲಿ ನಡೆದ ಶೋಭಾಯಾತ್ರೆ ಕಳೆಗುಂದಿತ್ತು.
ಇಲ್ಲಿನ ರತ್ನಗಿರಿ ರಸ್ತೆಯಲ್ಲಿರುವ ಶ್ರೀಕಾಮಧೇನು ಗಣಪತಿ ದೇವಾಲಯದಿಂದ ಮಧ್ಯಾಹ್ನ 3.15ರಂದು  ಶೋಭಾಯಾತ್ರೆ ಹೊರಟಿತು. ವಿವಿಧ ಕಲಾ ತಂಡಗಳು, ದೇವರ ಉತ್ಸವಮೂರ್ತಿಗಳ ಸಾಗಿದ ಯಾತ್ರೆ ಕೆಇಬಿ, ಬಸವನಹಳ್ಳಿ ಮುಖ್ಯರಸ್ತೆ, ಹನುಮಂತಪ್ಪ ವೃತ್ತದ ಮೂಲಕ ಆಜಾದ್ ಪಾರ್ಕ್ ವೃತ್ತಕ್ಕೆ ತೆರಳಿ ಸಂಜೆ 6 ಗಂಟೆಗೆ ಸಮಾಪ್ತಿಯಾಯಿತು.
ನಗರದಲ್ಲಿ ಹಿಂದಿನ ವರ್ಷಗಳಲ್ಲಿ ನಡೆದಿರುವ ಶೋಭಾಯಾತ್ರೆಗಳಲ್ಲಿ ಎಲ್ಲಿ ನೋಡಿದರಲ್ಲಿ ದತ್ತಮಾಲಾಧಾರಿಗಳು, ವಿವಿಧ ಕಲಾ ತಂಡಗಳ ನೃತ್ಯ, ಕೈಕೈ ಹಿಡಿದು ಸಾಗುವಂತಿದ್ದ ದೇವರ ಉತ್ಸವ ಮೂರ್ತಿಗಳು, ಎಷ್ಟೇ ಹೊತ್ತು ನಿಂತರೂ ಮುಂದೆ ಸಾಗದಷ್ಟು ಜನಸಾಗರ, ಈ ವೈಭವವನ್ನು ನೋಡಲು ರಸ್ತೆಯ ಉದ್ದಕ್ಕೂ ಸಾವಿರಾರೂ ಸಂಖ್ಯೆಯಲ್ಲಿ ಜನರು ನಿಂತುಕೊಳ್ಳುತ್ತಿದ್ದರು. ದಾರಿಯ ಉದ್ದಕ್ಕೂ ಯುವಕರ ನೃತ್ಯ, ಕಲಾ ತಂಡಗಳ ನೃತ್ಯ, ವೀರಗಾಸೆ, ಡೊಳ್ಳು ಕುಣಿತ, ವಿವಿಧ ವೇಷಗಳನ್ನು ಧರಿಸಿದ ಮಕ್ಕಳು ಹೀಗೆ ನೋಡುಗರನ್ನು ಸೆಳೆಯುತ್ತಿದ್ದವು.
ಕಳೆದ ವರ್ಷ ಸುಮಾರು 4000 ದತ್ತಮಾಲಾಧಾರಿಗಳು ಭಾಗವಹಿಸಿದ್ದರು. ಆದರೆ, ಈ ಬಾರಿ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ದತ್ತಮಾಲಾಧಾರಿಗಳು ಭಾಗವಹಿಸಿರಲಿಲ್ಲ. ಶೋಭಾಯಾತ್ರೆಗಳಲ್ಲಿ ಹೊರ ಜಿಲ್ಲೆಯವರು ಸಹ ಭಾಗವಹಿಸುತ್ತಿದ್ದರು.
 ಈ ಬಾರಿ ಚಿಕ್ಕಮಗಳೂರು ನಗರ ಹಾಗೂ ಆಲ್ದೂರಿನವರು ಶೋಭಾಯಾತ್ರೆಯಲ್ಲಿ ಭಾಗವಹಿಸಿರುವುದು ಕಂಡು ಬಂದಿತು.
ಹಿಂದಿನ ಶೋಭಾಯಾತ್ರೆಗಳಲ್ಲಿ ಯುವಕರು ಕುಣಿಯುವುದು ಕಂಡುಬರುತ್ತಿತ್ತು. ಆದರೆ, ಈ ಬಾರಿ ಮುಖಂಡರು ಕುಣಿದರು. ಇಲ್ಲಿನ ಹನುಮಂತಪ್ಪ ವೃತ್ತದಲ್ಲಿ ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಎಸ್. ಬೋಜೇಗೌಡ, ನಗರಸಭಾ ಮಾಜಿ ಅಧ್ಯಕ್ಷ ಪ್ರೇಮ್‌ಕುಮಾರ್ ಕುಣಿದರು. ಶಾಸಕ ಸಿ.ಟಿ. ರವಿ ಅವರು ದೇವರ ಮೂರ್ತಿಯ ಅಡ್ಡೆ ಹೊತ್ತಿದ್ದರು. ಮಹಿಳೆಯರು ದಾರಿಯುದ್ದಕ್ಕೂ ಭಜನೆ ಮಾಡುತ್ತ ಸಾಗುತ್ತಿದ್ದರು.
ಇಂದು ದತ್ತಜಯಂತಿ:  ಸಂಘ ಪರಿವಾರ ನೇತೃತ್ವದಲ್ಲಿ 3 ದಿನಗಳ ಕಾಲ ನಡೆಯುತ್ತಿರುವ ದತ್ತಜಯಂತಿ ಉತ್ಸವಕ್ಕೆ ಸೋಮವಾರ ತೆರೆ ಬೀಳಲಿದೆ. ದತ್ತಪೀಠದಲ್ಲಿ ಗಣಪತಿ ಹೋಮ, ದತ್ತಹೋಮ ನಡೆಯಲಿದ್ದು, ದತ್ತಪೀಠಕ್ಕೆ ಆಗಮಿಸುವ ಭಕ್ತರು ಹೊನ್ನಮ್ಮನ ಹಳ್ಳದಲ್ಲಿ ಸ್ನಾನ ಮಾಡಿ ಕಾಲ್ನಡಿಗೆಯಲ್ಲಿ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ದರ್ಶನ ಪಡೆದು ಭಿಕ್ಷೆ ಬೇಡಿ ತಂದಿರುವ ಪಡಿಯನ್ನು ದತ್ತಪೀಠದಲ್ಲಿ ಅರ್ಪಿಸಿ ಪ್ರಸಾದ ಸ್ವೀಕರಿಸಿ ಹಿಂದಿರುಗಲಿದ್ದಾರೆ.
ಅನುಮತಿ ಇಲ್ಲದೆ ಧ್ವನಿವರ್ಧಕ ಬಳಕೆ ನಿಷೇಧ:  ದತ್ತ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸುವ ದತ್ತ ಮಾಲಾಧಾರಿಗಳು ತಮ್ಮ ವಾಹನಗಳಲ್ಲಿ ಅನುಮತಿ ಇಲ್ಲದೆ ಧ್ವನಿವರ್ಧಕ ಅಳವಡಿಸಬಾರದು ಎಂದು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಅಧೀಕ್ಷಕರು ತಿಳಿಸಿದ್ದಾರೆ.
ಕಾರ್ಯಕ್ರಮಕ್ಕೆ ಚಿಕ್ಕಮಗಳೂರು ಜಿಲ್ಲೆ ಹಾಗೂ ಇತರೆ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ದತ್ತ ಮಾಲಾಧಾರಿಗಳು ಸೇರುವ ನಿರೀಕ್ಷೆ ಇರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಭಕ್ತಾಧಿಗಳು ಲಾಂಗ್ ಚಾಸಿ ಇರುವ ವಾಹನಗಳನ್ನು ಉಪಯೋಗಿಸದೇ ಲಘುವಾಹನದಲ್ಲಿ ಬರಲು ಮನವಿ ಮಾಡಿರುವ ಅವರು, ಪೀಠದ ಒಳಗೆ ಬಾವುಟ, ಕ್ಯಾಮೆರಾ, ಮೈಕ್, ಮೊಬೈಲ್ ಫೋನ್, ಬೆಂಕಿಪೊಟ್ಟಣ, ಸಿಗರೇಟ್, ಲೈಟರ್ ಮತ್ತು ಇತರ ಯಾವುದೇ ರೀತಿಯ ಆಯುಧಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಯಾವುದೇ ವಾಹನ, ಐ.ಡಿ. ಪೀಠದ ದಾರಿ ಮಧ್ಯೆ ಕೆಟ್ಟು ಹೋದಲ್ಲಿ ಕ್ರೇನ್ ಮತ್ತು ಪ್ರಯಾಣಿಕರಿಗೆ ತಕ್ಷಣದ ಸಹಾಯಕ್ಕೆ ಬರಲು ಪೊಲೀಸ್ ಸಹಾಯ ವಾಹನದ ವ್ಯವಸ್ಥೆ ಮಾಡಲಾಗಿದೆ. ಸಹಾಯಕ್ಕಾಗಿ ಮೊಬೈಲ್ ಸಂಖ್ಯೆ 9480805131 ಅಥವಾ 9480805147 ನ್ನು ಸಂಪರ್ಕಿಸಬಹುದು.

'ಹೊಸ ಆಚರಣೆಗಳಿಗೆ ಅವಕಾಶ ಬೇಡ'
ಚಿಕ್ಕಮಗಳೂರು; ಬಾಬಾಬುಡನ್ ಗಿರಿಯಲ್ಲಿ ಹೊಸ ಆಚರಣೆಗಳಿಗೆ ಅವಕಾಶ ನೀಡಬಾರದು ಎಂದು ಹಜ್ರತ್ ದಾದಾ ಹಯಾತ್ ಮೀರ್ ಖಲಂದರ್ ಬಾಬಾ ಬುಡನ್ ವೆಲ್ ಫೇರ್ ಟ್ರಸ್ಟ್ ಆಗ್ರಹಿಸಿದೆ. ಕಠಾರಿಯಾ ಅವರು ಜಿಲ್ಲಾಧಿಕಾರಿಗಳಾಗಿದ್ದಾಗ ನೂತನ ಪೂಜಾ ಪದ್ಧತಿಗಳಿಗೆ ಕಡಿವಾಣ ಹಾಕಿದ್ದರು. ಈ ಬಾರಿ ಇವೆಲ್ಲದಿಕ್ಕೂ ಅವಕಾಶ ನೀಡಲಾಗಿದೆ ಎಂದು ಟ್ರಸ್ಟ್ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ತಿಳಿಸಿದೆ.
ಜಿಲ್ಲಾಡಳಿತ ಹೊಸ ಆಚರಣೆಗಳನ್ನು ನಿಷೇಧಿಸಬೇಕು. ನ್ಯಾಯಾಲಯದ ಆದೇಶವನ್ನು ಕಟ್ಟು ನಿಟ್ಟಾಗಿ ಪಾಲನೆ ಮಾಡಬೇಕೆಂದು ಆಗ್ರಹಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement