ಕಾಂಗ್ರೆಸ್ ಹಿಂದುತ್ವವನ್ನು ತುಳಿಯುತ್ತಿದೆ: ಆರೋಪ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಡಿ.15
ಹಿಂದುಗಳು ಒಂದಾದರೆ ಪಕ್ಷ ನುಚ್ಚು ನೂರಾಗುವ ಭಯ ಕಾಂಗ್ರೆಸ್ ಅನ್ನು ಕಾಡುತ್ತಿದೆ ಎಂದು ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ್ ಆರೋಪಿಸಿದ್ದಾರೆ.
ಶೋಭಾಯಾತ್ರೆಯ ಅಂಗವಾಗಿ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಭಾನುವಾರ ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಹಿಂದೂ ಓಟ್ ಬ್ಯಾಂಕ್ ನಿರ್ಮಾಣ ಮಾಡಿದರೆ ಮಾತ್ರ ಹಿಂದುಗಳಿಗೆ ಈ ದೇಶದಲ್ಲಿ ಭವಿಷ್ಯ ಇದೆ. ಇದನ್ನು ಪ್ರತಿಯೊಬ್ಬ ಯುವಕರು ಅರ್ಥ ಮಾಡಿಕೊಳ್ಳಬೇಕು ಎಂದರು.
ಹಿಂದೂಗಳ ಕ್ಷೇತ್ರ: ರಕ್ತವನ್ನು ಚೆಲ್ಲುತ್ತೇವೆ, ದತ್ತಪೀಠವನ್ನು ನಮ್ಮದಾಗಿಸುತ್ತೇವೆಂದು ಎಂದು ಘೋಷಣೆ ಹಾಕುವ ಮೂಲಕ ಭಾಷಣ ಆರಂಭಿಸಿದ ಅವರು, ದತ್ತಾತ್ರೇಯ ಕ್ಷೇತ್ರ, ಹಿಂದೂಗಳ ಕ್ಷೇತ್ರ ಎಂಬುದು ಹಲವು ದಾಖಲೆಗಳು ಹೇಳುತ್ತಿವೆ. ಆದರೆ, ಕೆಲವು ಕಿಡಿಗೇಡಿಗಳು, ಈ ವಿಷಯವನ್ನು ಮರೆಮಾಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಇದನ್ನು ಖಂಡಿಸಿ ನಿರಂತರವಾಗಿ ಹೋರಾಟವನ್ನು ಸಂಘಟನೆ ನಡೆಸಿಕೊಂಡು ಬರುತ್ತಿದೆ ಎಂದರು.
ಜನಾಂಗದ ಸಮಾವೇಶ ಮಾಡಿದರೆ ರಾಜಕಾರಣಿಗಳು ಬರುತ್ತಾರೆ. ಇದಕ್ಕೆ ಕಾರಣ ವೋಟ್ ಬ್ಯಾಂಕ್. ಎಲ್ಲಾ ಜಾತಿಯನ್ನು ಮರೆತು ಎಲ್ಲರೂ ಒಂದಾಗಿರುವ ಹಿಂದೂ ಸಮಾವೇಶವನ್ನು ಉದ್ಘಾಟಿಸುವ ಧೈರ್ಯವನ್ನು ಯಾವುದೇ ರಾಜಕೀಯ ಪಕ್ಷದವರು ಮಾಡುವುದಿಲ್ಲ. ಈ ದೇಶವನ್ನು 40 ವರ್ಷ ಆಳಿದ ಕಾಂಗ್ರೆಸ್ ಪಕ್ಷ ಹಿಂದುತ್ವವನ್ನು ತುಳಿಯುತ್ತಾ ಬಂದಿದೆ. ಇತ್ತೀಚೆಗೆ ಎರಡು ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಹಿಂದುಗಳನ್ನು ತುಳಿಯುವ ಕೆಲಸ ಕೇಂದ್ರದಲ್ಲಿರುವ ಸೋನಿಯಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿತ್ತು. ಇದೇ ಪಕ್ಷಕ್ಕೆ ಇನ್ನೂ 10 ವರ್ಷ ಆಡಳಿತ ಮಾಡಲು ಬಿಟ್ಟರೆ ಹಿಂದುಗಳಿಗೆ ಭವಿಷ್ಯ ಇರುವುದಿಲ್ಲ ಎಂದರು.
ಭಯಾನಕ ಕಾನೂನು: ಮುಸ್ಲಿಮರು ಹಿಂದೂಗಳಿಗೆ ಕಿರುಕುಳ ನೀಡುತ್ತಿದ್ದಾರೆ. ಇಂತಹ ಪರಿಸ್ಥಿತಿ ಇದ್ದರೂ ಸಹ ಕೇಂದ್ರ ಸರ್ಕಾರ ಮುಸ್ಲಿಂ ಸಂರಕ್ಷಣಾ ಮಸೂದೆಯನ್ನು ಜಾರಿಗೆ ತರುವ ಮೂಲಕ ಹಿಂದೂಗಳಿಗೆ ಅನ್ಯಾಯ ಮಾಡಲು ಹೊರಟಿದೆ. ಇದೊಂದು ಭಯನಕ ಕಾನೂನು. ಅಲ್ಪಸಂಖ್ಯಾತ ವ್ಯಕ್ತಿಗೆ, ಭಾವನಾತ್ಮಕ ನೋವಾದರೆ, ಆಗ ಹಿಂದೂಗಳನ್ನು ನೇರವಾಗಿ ಜೈಲಿಗೆ ಕಳುಹಿಸುವ ಕಾನೂನು ಜಾರಿಗೆ ತರಲು ಹೊರಟಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಿಎಚ್‌ಪಿ ಮುಖಂಡ ಪ್ರೇಮ್ ಕಿರಣ್, ದತ್ತಪೀಠದ ವಿವಾದ ವಿಚಾರ ನ್ಯಾಯಾಲಯದಲ್ಲಿ ಇದೆ. ಆ ತೀರ್ಪು ಹಿಂದುಗಳ ಪರವಾಗಿ ಬರಲಿದೆ ಎಂಬ ವಿಶ್ವಾಸ ಇದೆ. ಶಾಂತಿ ಮತ್ತು ವಿಶ್ವಾಸದಿಂದ ನ್ಯಾಯಾಯುತವಾದ ಹೋರಾಟವನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ವಿಎಚ್‌ಪಿ ಜಿಲ್ಲಾ ಕಾರ್ಯದರ್ಶಿ ಶಿವಶಂಕರ್ ಸ್ವಾಗತಿಸಿದರು.
ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಬಸವಮಂದಿರದ ಶ್ರೀ ಜಯಬಸವಾನಂದ ಸ್ವಾಮೀಜಿ, ಗಂಗಾವತಿಯ ಮಹರ್ಷಿ ಶ್ರೀ ಋಷಬೇಂದ್ರ ಸ್ವಾಮೀಜಿ, ವಿಎಚಚ್ಪಿ ಮುಖಂಡ ಅತ್ತಿಕಟ್ಟೆ ಜಗನ್ನಾಥ್, ದತ್ತಪೀಠ ಸಂವರ್ಧನಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಪೈ ಉಪಸ್ಥಿತರಿದ್ದರು.