ದೇಶಕ್ಕೆ ಮಗ್ಗಲು ಮುಳ್ಳಾದ ಪಾಕಿಸ್ತಾನ: ಸಿ.ಟಿ. ರವಿ
ಕ.ಪ್ರ. ವಾರ್ತೆ, ಚಿಕ್ಕಮಗಳೂರು, ಡಿ.15
ಈ ದೇಶದ ಪ್ರಪ್ರಥಮ ಪ್ರಧಾನಿಯವರು ಸ್ವಾತಂತ್ರ್ಯ ನಂತರದಲ್ಲಿ ತೆಗೆದುಕೊಂಡ ತಪ್ಪು ನಿರ್ಧಾರದಿಂದಾಗಿ ಪಾಕಿಸ್ತಾನ ಇಂದಿಗೂ ಮಗ್ಗಲು ಮುಳ್ಳಾಗಿದ್ದು ದೇಶವನ್ನು ಕಾಡುವ ಒಂದು ಸಮಸ್ಯೆಯಾಗಿದೆ ಎಂದು ಶಾಸಕ ಸಿ.ಟಿ. ರವಿ ಹೇಳಿದ್ದಾರೆ.
ನಗರದ ಹಳೇ ತಾಲೂಕು ಕಚೇರಿಯಿಂದ ಹೊರಟ ಭಾರತ್ ನಿರ್ಮಾಣ್ ಏಕತಾ ಓಟ ಎಂ.ಜಿ. ರಸ್ತೆಯ ಮೂಲಕ ಹಾದು ಆಜಾದ್ ಪಾರ್ಕ್ ವೃತ್ತದಲ್ಲಿ ಮುಕ್ತಾಯಗೊಂಡ ಸಂದರ್ಭದಲ್ಲಿ ಮಾತನಾಡಿದ ಅವರು, ಕಾಶ್ಮೀರವೂ ಸಹ ವಿವಾದಸ್ಪದ ಸಮಸ್ಯೆಯಾಗಲು ಪ್ರಥಮ ಪ್ರಧಾನಿಯವರೇ ಕಾರಣ. ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ದೇಶದ ಪ್ರಥಮ ಪ್ರಧಾನಿಯಾಗಿದ್ದರೆ, ಈ ಎರಡೂ ಸಮಸ್ಯೆಗಳು ಉದ್ಭವವಾಗಲು ಬಿಡುತ್ತಿರಲಿಲ್ಲ ಎಂದರು.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಹೈದ್ರಾಬಾದ್ ಭಾರತದ ಗಣ ರಾಜ್ಯಕ್ಕೆ ಸೇರಲು ತೆಗೆದುಕೊಂಡ ದಿಟ್ಟ ಕ್ರಮ ಇಂದಿಗೂ ಸ್ಮರಣೀಯ. ಅಂದು ದೃಢವಾದ ತೀರ್ಮಾನವನ್ನು ತೆಗೆದುಕೊಳ್ಳದೆ ಹೋಗಿದ್ದರೆ, ಹೈದ್ರಾಬಾದ್, ಪಾಕಿಸ್ತಾನದಂತೆ ನಮ್ಮ ದೇಶದ ಆಂತರಿಕ ಭದ್ರತೆಗೆ ಮಗ್ಗಲು ಮುಳ್ಳಾಗಿ ಕಾಡುತ್ತಿತ್ತು ಎಂದು ಹೇಳಿದರು.
ರಾಜಕೀಯದ ಲಾಭಕ್ಕಾಗಿ ದೇಶವನ್ನು ವಿಭಜನೆ ಮಾಡುವ ಕೆಲಸ ನಡೆಯುತ್ತಿದೆ. ಭಾರತ ಏಕತೆಯಿಂದ ಇರಬೇಕು. ಭ್ರಷ್ಟಾಚಾರ, ಬೆಲೆ ಏರಿಕೆ, ನಿರುದ್ಯೋಗ ಸಮಸ್ಯೆಯಿಂದ ದೇಶ ಉದ್ದಾರ ಸಾಧ್ಯವಿಲ್ಲ. ಜ್ಞಾನ ಸಂಪಾದನೆ ಮಾಡಬೇಕು. ಜಗತ್ತಿಗೆ ಮಾರ್ಗದರ್ಶನ ನೀಡುವ ರೀತಿಯಲ್ಲಿ ಭಾರತ್ ನಿರ್ಮಾಣವಾಗಬೇಕು ಎಂದು ಕರೆ ನೀಡಿದರು.
ಭಾರತ್ ನಿರ್ಮಾಣ್ ಏಕತಾ ಓಟದಲ್ಲಿ ಬಿಜೆಪಿ ಮುಖಂಡರಾದ ಎಂ.ಕೆ. ಪ್ರಾಣೇಶ್, ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಎಚ್.ಡಿ.ತಮ್ಮಯ್ಯ, ದೇವರಾಜ್ ಶೆಟ್ಟಿ, ಕೋಟೆ ಕೃಷ್ಣ, ಬೆಳವಾಡಿ ರವೀಂದ್ರ ಹಾಗೂ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.