ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಿಗ್ನಲ್ ಲೈಟ್ ಅಗತ್ಯ

Lingaraj Badiger
Updated On : 16 Dec 2013, 10:37 am

ತರೀಕೆರೆ: ಪಟ್ಟಣದ ಹೃದಯ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿದೆ. ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ಜನ ಮತ್ತು ವಾಹನ ಸಂಚಾರದಿಂದ ಕೂಡಿರುತ್ತದೆ. ಪಟ್ಟಣದ ಓಂ ವೃತ್ತದಿಂದ, ಎಂಜಿ ರಸ್ತೆಯ ತಿರುವು ವೃತ್ತ, ಹಾದಿಕೆರೆ ತಿರುವು ವೃತ್ತ, ಹಳೆ ಪೋಸ್ಟ್ ಆಫೀಸ್ ತಿರುವು ವೃತ್ತ ಮತ್ತು ಹಳೆ ಬಸ್ ಸ್ಟ್ಯಾಂಡ್ ಬಳಿಯ ಮಹಾತ್ಮ ಗಾಂಧಿ
ವೃತ್ತಗಳಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತವೆ. ಪಾದಚಾರಿಗಳು ಸುರಕ್ಷಿತವಾಗಿ ಬಿ.ಎಚ್. ರಸ್ತೆಯ ಒಂದು ಬದಿಯಿಂದ ಮತ್ತೊಂದು ಕಡೆಗೆ ಹಾದುಹೋಗಲು ತುಂಬಾ ತೊಂದರೆಯಾಗುತ್ತಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳು, ನಾಗರಿಕರು ರಸ್ತೆ ಬದಿಯಲ್ಲೇ ಕಾದು ಹೋಗಬೇಕಾದ ಪರಿಸ್ಥಿತಿ ಇದೆ.
ರಸ್ತೆ ಸುರಕ್ಷತಾ ದೃಷ್ಟಿಯಿಂದ ತರೀಕೆರೆ ಪಟ್ಟಣದ ಮುಖ್ಯ ವೃತ್ತಗಳಲ್ಲಿ ಸಿಗ್ನಲ್ ಲೈಟ್ ಮತ್ತು ಟ್ರಾಫಿಕ್ ಪೊಲೀಸರನ್ನು ನೇಮಕ ಮಾಡಬೇಕೆಂದು ಮನವಿ ಮಾಡುತ್ತೇನೆ.
 
                         - ವಿನಾಯಕ, ತರೀಕೆರೆ ನಿವಾಸಿ

ಮಣ್ಣು ತೆರವುಗೊಳಿಸಲು ಆಗ್ರಹ
ಚಿಕ್ಕಮಗಳೂರು: ನಗರದ ಐ.ಜಿ. ರಸ್ತೆ, ಎಂ.ಜಿ. ರಸ್ತೆ, ಮಲ್ಲಂದೂರು ರಸ್ತೆ ಸೇರಿದಂತೆ ಕೆಲವು ಪ್ರಮುಖ ರಸ್ತೆಗಳ ಬದಿಯಲ್ಲಿ ವಾಹನಗಳ ಸಂಚಾರದಿಂದ ಮಣ್ಣು ಸಂಗ್ರಹವಾಗುತ್ತಿದೆ. ಇದರಿಂದ ತೀವ್ರ ತೊಂದರೆಯಾಗುತ್ತಿದೆ.
ನಗರದ ಪ್ರಮುಖ ರಸ್ತೆಗಳಲ್ಲಿ ದಿನಗಟ್ಟಲೇ ಸಾವಿರಾರು ವಾಹನಗಳು ಸಂಚರಿಸುತ್ತಿವೆ. ಇದರಿಂದ ರಸ್ತೆ ಬದಿಯಲ್ಲಿ ಮಣ್ಣು ಸಂಗ್ರಹವಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು, ಪಾದಚಾರಿಗಳು ಹೋಗುವಾಗ ವಾಹನ ಸಂಚರಿಸಿ ಕೂಡಲೇ ಧೂಳು ಎದ್ದು ಕಣ್ಣಿಗೆ ಹಾರುತ್ತಿದೆ. ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ.
ಇದೇ ರಸ್ತೆಗಳಲ್ಲಿ ತಿಂಡಿ ಗಾಡಿಗಳು ನಿಲ್ಲಿಸಲಾಗುತ್ತದೆ. ಅದೇ ಧೂಳು ನಾವು ಸೇವಿಸುವ ಆಹಾರದಲ್ಲೂ ಸೇರಬಹುದು ಹಾಗೂ ಕಣ್ಣಿಗೆ ಧೂಳು ಬೀಳುವುದರಿಂದ ದೃಷ್ಟಿದೋಷ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು.
ಈ ರಸ್ತೆಗಳಲ್ಲಿ ವಯಸ್ಸಾದವರು, ಪಾದಚಾರಿಗಳು, ವಿದ್ಯಾರ್ಥಿಗಳು ಸಂಚರಿಸಿ ರೋಗಗಳಿಂದ ಬಳಲುವ ಪರಿಸ್ಥಿತಿ ಎದುರಾಗಿದೆ. ಆರೋಗ್ಯ ದೃಷ್ಟಿಯಿಂದ ಇದನ್ನು ತೆರವುಗೊಳಿಸಬೇಕು. ಈ ಸಂಬಂಧ ಜಿಲ್ಲಾಡಳಿತಕ್ಕೆ ಹಲವು ಸಂಘ-ಸಂಸ್ಥೆಗಳು, ಸಂಘಟನೆಗಳು ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಆದಷ್ಟು ಬೇಗ ರಸ್ತೆ ಬದಿಗಳಲ್ಲಿರುವ ಮಣ್ಣನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
 - ಸಾರ್ವಜನಿಕರು, ಚಿಕ್ಕಮಗಳೂರು.

ಹೆಚ್ಚುತ್ತಿರುವ ಭಿಕ್ಷುಕರ ಉಪಟಳ
ಚಿಕ್ಕಮಗಳೂರು ನಗರದಲ್ಲಿ ಇತ್ತೀಚೆಗೆ ಭಿಕ್ಷುಕರ ಸಂಖ್ಯೆ ಹೆಚ್ಚಳವಾಗುತ್ತಿದೆ. ಕೆಲವರು ಕುಟುಂಬ ಸಮೇತರಾಗಿ ಭಿಕ್ಷೆ ಬೇಡುವ ಕೆಲಸಕ್ಕೆ ಇಳಿದಿದ್ದಾರೆ. ನಗರದ ಪ್ರಮುಖ ಹೊಟೇಲ್‌ಗಳ ಮೇಲೆ ಸ್ಥಳೀಯರಿಗೆ ಮಾತ್ರವಲ್ಲ ಹೊರ ಊರುಗಳಿಂದ ನಗರಕ್ಕೆ ಬರುತ್ತಿರುವ ಪ್ರವಾಸಿಗರಿಗೆ ಹಣಕ್ಕಾಗಿ ಪೀಡಿಸುತ್ತಿದ್ದಾರೆ.
 ಇದಕ್ಕೆ ಕಡಿವಾಣ ಹಾಕದೆ ಹೋದರೆ ಚಿಕ್ಕಮಗಳೂರು ನಗರದ ಬಗ್ಗೆ ಹೊರ ಜಿಲ್ಲೆಯವರು ತಪ್ಪಾಗಿ ತಿಳಿದುಕೊಳ್ಳಲಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಭಿಕ್ಷುಕರ ಉಪಟಳಕ್ಕೆ ಕಡಿವಾಣ ಹಾಕಬೇಕು.
          - ಮಂಜುನಾಥ್, ಚಿಕ್ಕಮಗಳೂರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement