ಖಾಸಗಿ ವ್ಯಕ್ತಿಯಿಂದ ಅಡ್ಡಿ: ಕ್ರಮಕ್ಕೆ ಮನವಿ
ಕ.ಪ್ರ.ವಾರ್ತೆ, ನರಸಿಂಹರಾಜಪುರ, ಡಿ.16
ಪಟ್ಟಣದ ಹಳೇ ಮಂಡಗದ್ದೆ ರಸ್ತೆಯ ಕಾಳಮ್ಮ ದೇವಸ್ಥಾನದ ಮುಂಭಾಗದಲ್ಲಿ ಚಪ್ಪರ ನವೀಕರಿಸಲು ಖಾಸಗಿ ವ್ಯಕ್ತಿಯೊಬ್ಬರು ಅಡ್ಡಿಪಡಿಸುತ್ತಿದ್ದು, ಸ್ಥಳ ಪರಿಶೀಲನೆ ನಡೆಸುವಂತೆ ಕಾಳಮ್ಮ ದೇವಸ್ಥಾನದ ಸೇವಾ ಸಮಿತಿ ತಹಸೀಲ್ದಾರ್ ಅವರಿಗೆ ಸೋಮವಾರ ಮನವಿ ಅರ್ಪಿಸಿದೆ.
ಸೋಮವಾರದಿಂದ ಧಾರ್ಮಿಕ ಕಾರ್ಯ ನಡೆಸಬೇಕಾಗಿದೆ. ದೇವಸ್ಥಾನ ಚಿಕ್ಕದಿರುವುದರಿಂದ ಚಪ್ಪರ ಹಾಕಲಾಗುತ್ತಿದೆ. ಆದರೆ, ಇದಕ್ಕೆ ಖಾಸಗಿ ವ್ಯಕ್ತಿಯೊಬ್ಬರಿಂದ ಅಡ್ಡಿಯಾಗುತ್ತಿದೆ. ಜೊತೆಗೆ ದೇವಸ್ಥಾನದ ಕೊಳವೆಬಾವಿ ನೀರನ್ನು ಸಹ ಅವರೊಬ್ಬರೇ ಉಪಯೋಗಿಸುತ್ತಿದ್ದಾರೆ. ದೇವಸ್ಥಾನದ ಸಮಿತಿಯವರ ಮೇಲೆ ಪೊಲೀಸರಿಗೆ ಸುಳ್ಳು ದೂರು ನೀಡಲಾಗಿದೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.
ಈ ಸಂದರ್ಭ ಸಮಿತಿ ಅಧ್ಯಕ್ಷ ಮಂಜುನಾಥ ಆಚಾರ್, ದೇವಸ್ಥಾನದ ಕಲಾ ಸಮಿತಿ ಅದ್ಯಕ್ಷ ಸತೀಶ್ ಆಚಾರ್, ಸಮಿತಿಯ ಪದಾಧಿಕಾರಿಗಳಾದ ಕೃಷ್ಣಯ್ಯ, ಎಂ.ಎನ್. ಪ್ರಕಾಶ್ ಮುಂತಾದವರಿದ್ದರು.
ವಿದ್ಯುತ್ ವ್ಯತ್ಯಯ
ಚಿಕ್ಕಮಗಳೂರು: ಹಿರೇಮಗಳೂರು (ಕರ್ತಿಕೆರೆ) ವಿ.ವಿ. ಕೇಂದ್ರದಲ್ಲಿ ಡಿ.17 ಹಾಗೂ 18ರಂದು ಕಳಸಾಪುರ ವಿ.ವಿ.ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ಹಮ್ಮಿಕೊಂಡಿರುವುದರಿಂದ ಹಿರೇಮಗಳೂರು, ಕರ್ತಿಕೆರೆ ಹಾಗೂ ಕಳಸಾಪುರ ವಿವಿ ಕೇಂದ್ರದ ನಗರ ಮತ್ತು ಗ್ರಾಮೀಣ ಫೀಡರ್‌ಗಳಿಂದ ಹೊರಹೊಮ್ಮುವ ಎಲ್ಲಾ ಪ್ರದೇಶಗಳಲ್ಲಿ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
ಡಿ. 19 ರಂದು ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಚಿಕ್ಕಮಗಳೂರು, ಆಲ್ದೂರು ಮತ್ತು ಬಾಳೆಹೊನ್ನೂರು ವಿವಿ ಕೇಂದ್ರ ಹಾಗೂ ಕೊಪ್ಪ, ಕೊರ್ಡಹಿತ್ಲು, ಕಳಸ, ಶೃಂಗೇರಿ ಮತ್ತು ಜಯಪುರ ವಿವಿ ಕೇಂದ್ರಗಳಿಂದ ಹೊರಹೊಮ್ಮುವ ಎಲ್ಲಾ ನಗರ ಮತ್ತು ಗ್ರಾಮೀಣ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.