ಜನಸೇವೆಯೇ ಲಯನ್ಸ್ ಸಂಸ್ಥೆ ಗುರಿ
ಕ.ಪ್ರ.ವಾರ್ತೆ, ಮೂಡಿಗೆರೆ, ಡಿ.16
ಮೂಡಿಗೆರೆ ಲಯನ್ಸ್ ಸಂಸ್ಥೆಯು ಸಾರ್ವಜನಿಕರಿಗೆ ಉತ್ತಮ ಸೇವೆಗಳನ್ನು ಒದಗಿಸಿ, ಗುರುತರ ಜವಾಬ್ದಾರಿ ನಿರ್ವಹಿಸುತ್ತಿದೆ ಎಂದು ಜಿಲ್ಲೆ -317ರ ಜಿಲ್ಲಾ ಪ್ರಥಮ ಲಯನೆಸ್ ಮಹಿಳೆ ಶಾಂತೇರಿ ಪ್ರಭು ಅಭಿಪ್ರಾಯಿಸಿದರು.
ಪಟ್ಟಣದ ಜೇಸಿ ಭವನದಲ್ಲಿ 317-ಡಿ, ಪ್ರಾಂತ್ಯ 4, ವಲಯ 1ರ ಮೂಡಿಗೆರೆ ಲಯನ್ಸ್ ಮತ್ತು ಲಯನೆಸ್ ಸಂಸ್ಥೆಯ 36ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು. ಲಯನ್ಸ್ ಸೇವಾ ಸಂಸ್ಥೆ ಒಂದು ಬೌದ್ಧಿಕ ಸೇವಾ ಸಂಸ್ಥೆ. ಯಾವುದೇ ಕೆಲಸ ನಿರ್ವಹಿಸಿದರೂ ಅದರಿಂದ ಸಾರ್ವಜನಿಕರಿಗೆ ಉಪಕಾರವಾಗಬೇಕು ಎನ್ನುವುದೇ ಲಯನ್ಸ್ ಗುರಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ 317-ಡಿ ಕೆ.ಸಿ.ಪ್ರಭು ಮಾತನಾಡಿ, ಮೂಡಿಗೆರೆ ಲಯನ್ಸ್ ಸಂಸ್ಥೆಯು, ನೇತ್ರ ತಪಾಸಣೆ, ದಂತ ತಪಾಸಣಾ ಶಿಬಿರಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಸಾರ್ವಜನಿಕ ಕ್ಷೇತ್ರದಲ್ಲಿ ಉತ್ತಮ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಸಂಗತಿ ಎಂದರು.
ಲಯನ್ಸ್ ಅಧ್ಯಕ್ಷ ಡಿ.ಎಲ್.ಅಶೋಕ್ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕೃಷಿಯಲ್ಲಿ ಸಾಧನೆಗೈದ ಆಲ್ದೂರಿನ ರೋಹಿಣಿ, ಶಿಕ್ಷಣ ಮತ್ತು ಗುಡಿಗಾರಿಕೆಯ ಬಿಳಗುಳದ ಕೆ.ಲಕ್ಷ್ಮಣ ಗೌಡ, ಶಿಕ್ಷಣ ಬಿಳುಗುಳದ ಕೆ.ಮಂಜು, ರಕ್ಷಣಾ ಸಚಿವಾಲಯ, ಎನ್ಸಿಸಿ ವಿಭಾಗದ ಪಟ್ಟದೂರಿನ ಕ್ಯಾಪ್ಟನ್ ಸಂಗೀತ, ಸಹಕಾರ ಕ್ಷೇತ್ರದ ಗೋಣಿಬೀಡಿನ ಮಂಡಿ ಜಯರಾಮ್, ಸಾರ್ವಜನಿಕರ ಸೇವೆಯಲ್ಲಿ ತೊಡಗಿರುವ ರಿಕ್ಷಾ ಚಾಲಕ ಬಿಳ್ಳುರು ರವಿ, ವಲಯ ಕೃಷಿ ಸಂಶೋಧನಾ ಕೇಂದ್ರದ ಮೀನುಗಾರಿಕೆ ವಿಭಾಗದ ಡಾ. ಸ್ವಾಮಿ, ಪ್ರತಿಭಾವಂತ ವಿದ್ಯಾರ್ಥಿನಿ ಯು.ಹೊಸಳ್ಳಿಯ ಕು.ಅಕ್ಷತ, ಕೃಷಿ ಕ್ಷೇತ್ರ ಮೆಣಸಿನ ಬೆಳೆ ಉತ್ಪಾದನೆಯಲ್ಲಿ ಕೆಂಜಿಗೆಯ ಕೆ.ಆರ್.ಕೇಶವ, ಕನ್ನಡ ಇನಿದನಿ ಸಮ್ಮೇಳನ ಸಮ್ಮಳನಾಧ್ಯಕ್ಷ ಸಾಹಿತಿ ಹಳೆಕೋಟೆ ರಮೇಶ್ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಮಾಜಿ ಜಿಲ್ಲಾ ರಾಜ್ಯಪಾಲ ಎನ್.ಎಲ್. ಸುಂದರೇಶ್ವರ್, ಲಯನೆಸ್ ಅಧ್ಯಕ್ಷೆ ಪೂರ್ಣೇಶ್ವರಿ ಲಕ್ಷ್ಮಣಗೌಡ, ಕಾರ್ಯದರ್ಶಿಗಳಾದ ಎಂ.ಜಿ. ಭರತ್, ವನಪೂರ್ಣೇಶ್, ಖಜಾಂಚಿಗಳಾದ ವಿ.ಎಲ್.ಗುರುಮೂರ್ತಿ, ಪ್ರಣತಿ ಪ್ರದೀಪ್ ಉಪಸ್ಥಿತರಿದ್ದರು.
--
ಇಂದು ವಿಶ್ವ ಏಡ್ಸ್ ದಿನಾಚರಣೆ
ಚಿಕ್ಕಮಗಳೂರು: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಮಂಗಳವಾರ ವಿಶ್ವ ಏಡ್ಸ್ ದಿನಾಚರಣೆಯನ್ನು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ 10 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ನಂತರ 11 ಗಂಟೆಗೆ ಸೈಕಲ್ ಜಾಥಾ ರಾಷ್ಟ್ರೀಯ ಕ್ರೀಡಾಪಟು ಉಮಾಪತಿ ಮೊದಲಿಯಾರ್ ನೇತೃತ್ವದಲ್ಲಿ ಜಿಲ್ಲಾ ಮೈದಾನದಿಂದ ಬೋಳರಾಮೇಶ್ವರ ದೇವಸ್ಥಾನ, ಹನುಮಂತಪ್ಪ ವೃತ್ತ, ಎಂ.ಜಿ. ರಸ್ತೆ, ಆಜಾದ್ ಪಾರ್ಕ್ ಮಾರ್ಗವಾಗಿ ಜಿಲ್ಲಾ ಮೈದಾನದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.