ಲಘು ಲಾಠಿ ಪ್ರಹಾರ, ದರ್ಗಾ ಬೋರ್ಡ್ಗೆ ಮಸಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.16
ದತ್ತಪೀಠದಲ್ಲಿ ಸೋಮವಾರ ನಡೆದ ದತ್ತಜಯಂತಿ ವೇಳೆಯಲ್ಲಿ ದತ್ತಭಕ್ತರಿಂದ ಪ್ರತಿಭಟನೆ, ಗುಂಪನ್ನು ಚದುರಿಸಲು ಪೊಲೀಸರಿಂದ ಲಘು ಲಾಠಿ ಪ್ರಹಾರ, ನೂಕಾಟದಲ್ಲಿ ದೇವರ ಅಡ್ಡೆಗೆ ಹಾನಿ ಘಟನೆಗಳು ಸಂಭವಿಸಿದವು.
ಇವೆಲ್ಲದರ ನಡುವೆ ಧಾರ್ಮಿಕ ಸಭೆ, ವಿಶೇಷ ಪೂಜೆ, ಹವನಗಳು ಜರುಗಿದವು. ಮೂರು ದಿನಗಳ ಕಾಲದ ದತ್ತಜಯಂತಿಗೆ ತೆರೆ ಬಿದ್ದಿತು.
ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ಸೋಮವಾರ ದತ್ತಪೀಠದಲ್ಲಿ ದತ್ತಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮಕ್ಕೆ ಶಾಸಕ ಸಿ.ಟಿ. ರವಿ ಸೇರಿದಂತೆ ರಾಜ್ಯದ ವಿವಿಧೆಡೆಗಳಿಂದ ಬೆಳಿಗ್ಗೆಯಿಂದಲೇ ದತ್ತಪೀಠಕ್ಕೆ ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ನಿಂತು ದತ್ತ ಪಾದುಕೆಗಳ ದರ್ಶನ ಪಡೆದರು.
ಉರ್ದು ಬೋರ್ಡ್ಗೆ ವಿರೋಧ: ಆದರೆ, ಮಂಗಳೂರಿನಿಂದ ಆಗಮಿಸಿದ್ದ ದತ್ತಮಾಲಾಧಾರಿಗಳು, ಗುಹೆಯ ಪ್ರವೇಶ ದ್ವಾರದಲ್ಲಿ ಇಂಗ್ಲಿಷ್, ಕನ್ನಡ ಮತ್ತು ಉರ್ದು ಭಾಷೆಯಲ್ಲಿ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಎಂಬ ನಾಮಫಲಕ ಹಾಕಲಾಗಿದ್ದು, ಉರ್ದುವಿನಲ್ಲಿ ಬರೆದ ನಾಮಫಲಕವನ್ನು ತೆಗೆದು ಹಾಕಬೇಕು. ಇಲ್ಲದೆ ಹೋದರೆ ತಾವು ದತ್ತಪೀಠದ ಗುಹೆಯನ್ನು ಪ್ರವೇಶ ಮಾಡುವುದಿಲ್ಲ ಎಂದು ಬ್ಯಾರಿಕೇಡ್ನಲ್ಲಿಯೇ ನಿಂತರು. ಆಗ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ನಾಮಫಲಕದಲ್ಲಿರುವ ಉರ್ದು ಅಕ್ಷರಗಳನ್ನು ಮುಚ್ಚಿದರು.
ದರ್ಶನದ ಬಳಿಕ ಭಕ್ತರು ಇರುಮುಡಿಯನ್ನು ಧಾರ್ಮಿಕ ಸಭೆ ನಡೆಯುವ ಸ್ಥಳದಲ್ಲಿ ಸಲ್ಲಿಸಿ, ಸಭೆಯಲ್ಲಿ ಪಾಲ್ಗೊಂಡರು. ಆದರೆ, ಕೆಲವು ಯುವಕರು, ಗುಹೆಯ ನಿರ್ಗಮನ ದ್ವಾರದ ಸಮೀಪದಿಂದ ನಿಷೇಧಿತ ಪ್ರದೇಶದೊಳಗೆ ನುಗ್ಗಲು ಯತ್ನಿಸಿದರು. ಆಗ ಅವರನ್ನು ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತರಲು ಲಘು ಲಾಠಿ ಪ್ರಹಾರ ನಡೆಸಿ, ಗುಂಪನ್ನು ಚದುರಿಸಿದರು.
ದತ್ತಾತ್ರೇಯ ಮೂರ್ತಿಯ ಅಡ್ಡೆಯನ್ನು ಹೊತ್ತಿದ್ದ ಯುವಕರು, ಧಾರ್ಮಿಕ ಸಭೆಯ ಸ್ಥಳಕ್ಕೆ ತೆರಳುವಾಗ ಪೊಲೀಸರು ಅವರನ್ನು ತಡೆದರು. ಆಗಲೂ ಸಹ ಭಕ್ತರ ಮತ್ತು ಪೊಲೀಸರ ನಡುವೆ ತಳ್ಳಾಟ- ನೂಕಾಟವಾಯಿತು. ಈ ಸಂದರ್ಭದಲ್ಲಿ ಅಡ್ಡೆಯ ಒಂದು ಬದಿಯ ಕೋಲು ಮುರಿದು ಹೋಯಿತು. ಇದರಿಂದ ಭಕ್ತರು ಆಕ್ರೋಶಗೊಂಡು ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು.
ನಾವೇಕೆ ಉಲ್ಲಂಘಿಸಬಾರದು: ಇದೇ ವೇಳೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಬಿವಿಪಿ ಮುಖಂಡ ಸಂತೋಷ್ ಕೋಟ್ಯಾನ್, ದತ್ತಪೀಠ ಹಿಂದುಗಳ ಶ್ರದ್ಧಾ ಕೇಂದ್ರ. ಚಿಕ್ಕಮಗಳೂರಿನಿಂದ 20 ಕಿ.ಮೀ. ದೂರದಲ್ಲಿರುವ ಈ ಕೇಂದ್ರಕ್ಕೆ ದೇವರ ಮೂರ್ತಿಯನ್ನು ತೆಗೆದುಕೊಂಡು ಹೋಗುವ ವೇಳೆಯಲ್ಲಿ ಪೊಲೀಸರು ತಡೆದಿದ್ದಾರೆ. ದತ್ತಪೀಠದಲ್ಲಿ ಸುಪ್ರೀಂಕೋರ್ಟ್ ಆದೇಶವನ್ನು ಮುಸ್ಲಿಮರು ಪಾಲನೆ ಮಾಡುತ್ತಿಲ್ಲ, ನಾವೇಕೆ ಆದೇಶವನ್ನು ಉಲ್ಲಂಘನೆ ಮಾಡಬಾರದು ಎಂದು ಪ್ರಶ್ನಿಸಿದರು.
ಗುಹೆಯ ಪ್ರವೇಶ ದ್ವಾರದಲ್ಲಿ ಬರೆಯಲಾಗಿರುವ ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದ ನಾಮಫಲಕದಲ್ಲಿ ದರ್ಗಾ ಎಂಬ ಅಕ್ಷರದ ಮೇಲೆ ಮಸಿ ಬಳಿದಿರುವುದು ಕಂಡು ಬಂದಿತು.
ನಿರೀಕ್ಷೆಗೂ ಮೀರಿ ಮಾಲಾಧಾರಿಗಳು: ಕಳೆದ ವರ್ಷ ದತ್ತಪೀಠಕ್ಕೆ ದತ್ತಜಯಂತಿ ದಿನದಂದು 8,712 ಮಂದಿ ಆಗಮಿಸಿದ್ದರು. ಆದರೆ, ಈ ಬಾರಿ ನಿರೀಕ್ಷೆಗೂ ಮೀರಿ ದತ್ತಮಾಲಾಧಾರಿಗಳು ಹಾಗೂ ದತ್ತಭಕ್ತರು ಪೀಠಕ್ಕೆ ಆಗಮಿಸಿದ್ದರು.
ಶಾಸಕರಾದ ಸಿ.ಟಿ. ರವಿ, ಡಿ.ಎನ್. ಜೀವರಾಜ್, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ಎಂ.ಕೆ. ಪ್ರಾಣೇಶ್, ದತ್ತಪೀಠ ಸಂವರ್ಧನಾ ಸಮಿತಿ ಅಧ್ಯಕ್ಷ ಶ್ರೀಕಾಂತ್ ಪೈ, ಬಜರಂಗದಳ ರಾಜ್ಯ ಸಂಚಾಲಕ ಸೂರ್ಯನಾರಾಯಣ್, ವಿಎಚ್ ಪಿ ಮುಖಂಡರಾದ ಕೇಶವ ಹೆಗಡೆ, ಶಿವಶಂಕರ್, ಯೋಗೀಶ್ ರಾಜ್ ಅರಸ್, ಪ್ರೇಮ್ ಕಿರಣ್, ಪ್ರದೀಪ್, ಬಿ. ಗೋಪಾಲ್ ಉತ್ಸವದಲ್ಲಿ ಪಾಲ್ಗೊಂಡಿದ್ದರು.
ಧಾರ್ಮಿಕ ಕಾರ್ಯಕ್ರಮ: ದತ್ತಪೀಠದ ಹೊರ ಭಾಗದಲ್ಲಿ ಜಿಲ್ಲಾಡಳಿತ ಹಾಕಿರುವ ಪೆಂಡಾಲ್ ನಲ್ಲಿ ಗಣಪತಿ ಹೋಮ, ನವಗ್ರಹ ಹೋಮ, ದತ್ತಾತ್ರೇಯ ಹೋಮ ನಡೆಯಿತು. ಈ ಧಾರ್ಮಿಕ ವಿಧಿ ವಿಧಾನಗಳನ್ನು ರಘುನಾಥ್ ಅವದಾನಿ, ಚಂದ್ರು ಅವರು ನಡೆಸಿಕೊಟ್ಟರು.
ಶ್ರೀ ಜಯಬಸವಾನಂದ ಸ್ವಾಮೀಜಿ, ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶ್ರೀ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಶ್ರೀ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಮಾಧವನಂದ ಸ್ವಾಮೀಜಿ, ಚಿತ್ರದುರ್ಗದ ಶ್ರೀ ಮಾದರ ಚೆನ್ನಯ್ಯ ಸ್ವಾಮೀಜಿ, ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರು ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
3 ದಿನಗಳ ಕಾಲ ನಡೆದ ದತ್ತಜಯಂತಿ ಉತ್ಸವದ ಆರಂಭದ ಎರಡು ದಿನಗಳಲ್ಲಿ ನಡೆದ ಅನುಸೂಯ ಜಯಂತಿ, ಶೋಭಾಯಾತ್ರೆ ಕಾರ್ಯಕ್ರಮಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ದತ್ತ ಭಕ್ತರು ಪಾಲ್ಗೊಂಡಿರಲಿಲ್ಲ. ಕೊನೆಯ ದಿನದಂದು ನಿರೀಕ್ಷೆಗೂ ಮೀರಿ ದತ್ತಭಕ್ತರು ದತ್ತಪೀಠಕ್ಕೆ ಆಗಮಿಸಿದ್ದರು.