ಲೆವಿ ಅಕ್ಕಿ: ವಿನಾಯಿತಿಗೆ ಆಗ್ರಹ
ಕೊಪ್ಪ: ಸರ್ಕಾರದ ಲೆವಿ ಅಕ್ಕಿ ಪದ್ಧತಿಯಿಂದ ವಿನಾಯಿತಿ ಕೋರಿ ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 40 ಅಕ್ಕಿ ಗಿರಣಿಗಳು ಸೋಮವಾರ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದವು.
ಇಲ್ಲಿನ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಸಭಾಂಗಣದಲ್ಲಿ ಮಲೆನಾಡು ಅಕ್ಕಿ ಗಿರಣಿ ಕೈಗಾರಿಕಾ ಅಭಿವೃದ್ಧಿ ಸಂಘದ ಅಧ್ಯಕ್ಷ ಎನ್.ಪಿ.ಶಂಕರಪ್ಪ ನಾಯಕ್ ಅಧ್ಯಕ್ಷತೆಯಲ್ಲಿ ಮಿಲ್ ಮಾಲೀಕರು ಸಭೆ ನಡೆಸಿ ರಾಜ್ಯ ಅಕ್ಕಿ ಗಿರಣಿ ಮಾಲೀಕರ ಸಂಘದ ಮುಷ್ಕರದ ಕರೆಗೆ ಬೆಂಬಲಿಸಲು ನಿರ್ಧರಿಸಿದರು. ಸಂಘದ ಪದಾಧಿಕಾರಿಗಳು ಬಾಳಗಡಿಗೆ ತೆರಳಿ ತಹಸೀಲ್ದಾರ್ ಶ್ರೀಧರಮೂರ್ತಿ ಪಂಡಿತ್‌ಗೆ ಮನವಿ ಸಲ್ಲಿಸಿ ಲೆವಿ ಅಕ್ಕಿ ವಿನಾಯಿತಿಗೆ ಒತ್ತಾಯಿಸಿದರು.
ಕ್ಷೇತ್ರದ ಅಕ್ಕಿ ಗಿರಣಿಗಳು ರೈತರ ಬತ್ತವನ್ನು ಅಕ್ಕಿ ಮಾಡುವ ಕಾಯಕದಲ್ಲಿ ತೊಡಗಿದ್ದು, ಯಾವುದೇ ವ್ಯಾಪಾರಿ ಉದ್ದೇಶದಿಂದ ಗಿರಣಿ ನಡೆಸುತ್ತಿಲ್ಲ. ಬತ್ತಕ್ಕೆ ಸೂಕ್ತ ಧಾರಣೆ ಇರುವುದಿಲ್ಲ. ಇಳುವರಿ, ಕಾರ್ಮಿಕರ ಕೊರತೆಯಿಂದ ಕೃಷಿಕರು ಬತ್ತ ಬೇಸಾಯ ಕೈಬಿಟ್ಟು ವಾಣಿಜ್ಯ ಬೆಳೆಗೆ ಆಕರ್ಷಿತವಾಗಿದ್ದು, ಅಕ್ಕಿ ಗಿರಣಿ ನಡೆಸಿಕೊಂಡು ಹೋಗುವುದೇ ದುಸ್ತರವಾಗಿದೆ. ಅಕ್ಕಿ ಗಿರಣಿಗಳು ಬಳಕೆ ಮಾಡುವ ವಿದ್ಯುತ್ ಬಿಲ್ ಆಧಾರದಲ್ಲಿ ಶೇ. 33ರಷ್ಟು ಲೆವಿಯನ್ನು ಸೋನಾ ಮಸೂರಿ ಬತ್ತದ ಸ್ವರೂಪದಲ್ಲಿ ಸಲ್ಲಿಸಲು ಸರ್ಕಾರ ಅದೇಶಿಸಿರುವುದನ್ನು ಅಕ್ಕಿ ಗಿರಣಿಗಳು ಪಾಲಿಸಲಾಗುತ್ತಿಲ್ಲ. ಈ ಎಲ್ಲಾ ಪರಿಸ್ಥಿತಿ ಮನಗಂಡು ಈ ಭಾಗದ ಅಕ್ಕಿ ಗಿರಿಣಿಗಳಿಗೆ ಲೆವಿಯಿಂದ ವಿನಾಯಿತಿ ನೀಡುವಂತೆ ಮನವಿಯಲ್ಲಿ ಒತ್ತಾಯಿಸಿಲಾಯಿತು.
ರೈಸ್ ಮಿಲ್ ಮಾಲೀಕರಾದ ಹೆಗ್ಗಾರು ಕೃಷ್ಣಮೂರ್ತಿ ನಾಯಕ್, ಕೆ.ಎನ್.ಕಾಡಪ್ಪಗೌಡ, ಶೃಂಗೇರಿಯ ಗೋಪಾಲ ಹೆಗ್ಗಡೆ, ಎನ್.ಆರ್. ಪುರದ ಗೋಪಾಲ್, ಕುದುರೆಗುಂಡಿ ಎಚ್.ಎಲ್. ದೀಪಕ್, ಜಯಪುರ ವೆಂಕಟೇಶ್ ಮತ್ತಿತರು ಇದ್ದರು.