ಸಮಗ್ರ ಅಭಿವೃದ್ಧಿ ಕನಸು ಕಂಡ ಒಡೆಯರ್
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.16
ಕನ್ನಡ ನಾಡು- ನುಡಿ, ನೆಲ- ಜಲದ ರಕ್ಷಣೆಗೆ ಮೈಸೂರು ಒಡೆಯರ್ ವಂಶಸ್ಥರ ಕೊಡುಗೆ ಅಪಾರ. ಕನ್ನಂಬಾಡಿ ಅಣೆಕಟ್ಟೆ ನಿರ್ಮಿಸುವಾಗ ಆರ್ಥಿಕ ಸಂಕಷ್ಟ ನಿವಾರಿಸಲು ತಮ್ಮ ಕುಟುಂಬದ ಆಭರಣ ಬಳಕೆ ಮಾಡಿದ್ದರೆಂದು ನಗರಸಭಾ ಸದಸ್ಯ ಎಚ್.ಎಸ್. ಪುಟ್ಟಸ್ವಾಮಿ ಹೇಳಿದ್ದಾರೆ.
ಜಿಲ್ಲಾ ಕನ್ನಡಾಭಿಮಾನಿಗಳ ಸಂಘ ಕದ್ರಿಮಿದ್ರಿಯ ಜೀವನಸಂಧ್ಯಾ ವೃದ್ಧಾಶ್ರಮದಲ್ಲಿ ಹಿರಿಯ ನಾಗರಿಕರೊಂದಿಗೆ ಅಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕದ ಹೆಮ್ಮೆಯ ಯದುವಂಶದ ಕೊನೆಯ ಕೊಂಡಿಯಾಗಿದ್ದ ಶ್ರೀಕಂಠದತ್ತರು, ಚಿಕ್ಕಮಗಳೂರು ಜಿಲ್ಲೆಯೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಕೆಮ್ಮಣ್ಣಗುಂಡಿ ಗಿರಿಧಾಮ ಅಭಿವೃದ್ಧಿಪಡಿಸಿ ಬೇಸಿಗೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು.
ಐ.ಡಿ. ಪೀಠ ಬಾಬಾಬುಡನ್ಗಿರಿಯಲ್ಲೂ ಬೇಸಿಗೆ ಅರಮನೆ ನಿರ್ಮಿಸಿದ್ದು, ಅದು ಅವನತಿಯತ್ತ ಸಾಗಿದೆ ಎಂದು ಪುಟ್ಟಸ್ವಾಮಿ ವಿಷಾದಿಸಿದರು.
ಅಭಿಮಾನ ಸಂಗತಿ: ಅಪ್ರತಿಮ ಕ್ರೀಡಾಪಟುವಾಗಿದ್ದ ಅವರು ಕರ್ನಾಟಕದ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ, ಬ್ಯಾಂಕಿಂಗ್ ಸೇರಿದಂತೆ ಸಮಗ್ರ ಅಭಿವೃದ್ಧಿಯ ಕನಸು ಕಂಡವರು. ನಾಲ್ಕು ಬಾರಿ ಸಂಸದರಾಗಿ ಜನಾಧರಣೆಗೆ ಪಾತ್ರರಾಗಿದ್ದು, ಎರಡು ಬಾರಿ ಚುನಾವಣೆಯಲ್ಲಿ ಸೋಲಪ್ಪಿದರೂ ಕುಗ್ಗದ ಶ್ರೀಕಂಠದತ್ತರು, ರಾಜವಂಶದ ಸಂಪ್ರದಾಯ ಚಾಚೂ ತಪ್ಪದೇ ಕೊನೆಯ ದಿನಗಳವರೆಗೂ ಪಾಲಿಸಿಕೊಂಡು ಬಂದದ್ದು ಅಭಿಮಾನ ಸಂಗತಿ ಎಂದು ಹೇಳಿದರು.
ಜೀವನ ಸಂಧ್ಯಾ ಅಧ್ಯಕ್ಷ ಎಂ.ಆರ್. ಗುರುಮೂರ್ತಿ ಮಾತನಾಡಿ, ಮೈಸೂರು ಸಂಸ್ಥಾನದ ಒಡೆಯರ್ ಅರಸರು ದೂರದರ್ಶಿತ್ವಕ್ಕೆ ಪ್ರತೀಕ. ಭಾರತದಲ್ಲೆ ವಿಶಿಷ್ಟವಾದ ಸುಂದರ ಮೈಸೂರು ಅರಮನೆ ನಿರ್ಮಿಸಿದರು. ಅಂದೇ ಕಾವೇರಿ ನೀರನ್ನು ಕನ್ನಡಿಗರು ಬಳಸಿಕೊಳ್ಳಲು ಸಾಧ್ಯವಾಗುವಂತೆ ಕೆಆರ್ಎಸ್ ನಿರ್ಮಿಸಿ ಜೊತೆಗೆ ವಿಶ್ವವಿಖ್ಯಾತ ಬೃಂದಾವನ ನಿರ್ಮಿಸಿ ಗಮನ ಸೆಳೆದರು. ಬಹುಮುಖಿ ಆಸಕ್ತಿಯ ಶ್ರೀಕಂಠದತ್ತ ಒಡೆಯರ್ ಸ್ವಾಭಿಮಾನದ ಸಂಕೇತವಾಗಿದ್ದರು ಎಂದರು.
ಜಿಲ್ಲಾ ಕನ್ನಡಾಭಿಮಾನಿಗಳ ಸಂಘದ ಅಧ್ಯಕ್ಷ ಎಲ್.ವಿ. ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕನ್ನಡ ಹಾಗೂ ಮೈಸೂರು ಅರಸರ ನಡುವೆ ಅವಿನಾಭಾವ ಸಂಬಂಧವಿದೆ. ನಾಡು- ನುಡಿಯ ಏಳಿಗೆಗಾಗಿ ಒಡೆಯರ್ ಕೊಡುಗೆ ಅಪಾರ. ಅಭಿಮಾನಿ ಸಂಘದ ವತಿಯಿಂದ ತಾವೂ ಸೇರಿದಂತೆ ಸದಸ್ಯರಾದ ಸಿ.ಸಿ. ಪ್ರಭಾಕರ, ಸಿ.ಎಸ್. ಕುಬೇರ, ವಿಠಲ್ ತಲಾ 15 ಸಾವಿರದಂತೆ ಒಟ್ಟು 60 ಸಾವಿರ ಕೊಡುಗೆಯನ್ನು ಜೀವನಸಂಧ್ಯಾಕ್ಕೆ ನೀಡುವುದಾಗಿ ತಿಳಿಸಿದರು.
ನಗರಸಭಾ ಸದಸ್ಯ ಭುಜೇಂದ್ರರಾಜ ಅರಸ್ ಮಾತನಾಡಿದರು. ದಾನಿ ಸಿ.ಸಿ. ಪ್ರಭಾಕರ ಹಿರಿಯ ನಾಗರಿಕರಿಗೆ ಹಣ್ಣು ಹಾಗೂ ಭೋಜನ ವಿತರಿಸಿದರು. ವ್ಯವಸ್ಥಾಪಕ ಹರಿಸಿಂಗ್ ಇದ್ದರು. ಜಿಲ್ಲಾ ಕಾರ್ಯದರ್ಶಿ ಬಿ.ಎಂ. ಕುಮಾರ್ ಸ್ವಾಗತಿಸಿ, ನಿರೂಪಿಸಿದರು, ರವೀಶ್ ವಂದಿಸಿದರು.