ಜೆಡಿಎಸ್ನಿಂದ ಸಾಮಾಜಿಕ ನ್ಯಾಯ: ಕೃಷ್ಣಪ್ಪ
ಕ.ಪ್ರ.ವಾರ್ತೆ ಕಡೂರು ಡಿ.17
64 ವರ್ಷದ ಇತಿಹಾಸದಲ್ಲೇ ಅತ್ಯಂತ ಹಿಂದುಳಿದಿರುವ ಗೊಲ್ಲ ಸಮುದಾಯಕ್ಕೆ ಇದೇ ಮೊದಲ ಆದ್ಯತೆ ನೀಡಿ, ತಮನ್ನು ರಾಜ್ಯ ಜೆಡಿಎಸ್ ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಜೆಡಿಎಸ್ ಜಾತ್ಯತೀತ ಪಕ್ಷ ಎಂಬುದನ್ನು ಸಾಬೀತುಪಡಿಸಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಹೇಳಿದರು.
ಅವರು ಕಡೂರು ವಿಧಾನಸಭಾ ಕ್ಷೇತ್ರದ ಕಲ್ಕೆರೆ ಗೊಲ್ಲರಹಟ್ಟಿಯ ರಂಗನಾಥ ಸ್ವಾಮಿ ಕಾರ್ತಿಕ ಮಹೋತ್ಸವ, ಜುಂಜಪ್ಪಸ್ವಾಮಿ ಜಾತ್ರಾ ಮಹೋತ್ಸವದ ನಂತರ ನಡೆದ ಗೊಲ್ಲ ಸಮಾಜದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಮಾಜಿಕ ನ್ಯಾಯ: ರಾಜ್ಯದಲ್ಲಿ ಸುಮಾರು 50 ಲಕ್ಷ ಯಾದವ ಸಮಾಜ ಇದ್ದರೂ, ತಮಗೆ ಕಾಂಗ್ರೆಸ್ನವರು ಮೋಸ ಮಾಡಿ ರಾಜಕೀಯ ಹತ್ಯೆಯ ಸಂಚು ರೂಪಿಸಿದ ಮರುಕ್ಷಣವೇ ದೇವೇಗೌಡರು ಹಾಗೂ ಕುಮಾರಸ್ವಾಮಿಯವರು ನನ್ನನ್ನು ಆಧರಿಸಿ ಪಕ್ಷದ ರಾಜ್ಯಾಧ್ಯಕ್ಷನ ಪಟ್ಟ ನೀಡಿ ನಮ್ಮ ಸಮುದಾಯವನ್ನು ಗುರುತಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೊಲ್ಲ ಸಮುದಾಯಕ್ಕೆ ಜಾಗೃತಿ ಮೂಡಿಸುವ ಸಲುವಾಗಿ ಶಾಸಕರಾದ ದತ್ತರವರು ಸಮಾಜ ಸಂಘಟಿಸಿ ಸಮಾವೇಶ ಏರ್ಪಡಿಸಿ ಸಮುದಾಯಕ್ಕೆ ಸಾಮಾಜಿಕ ನ್ಯಾಯ ನೀಡುತ್ತಿರುವುದು ಸಂತೋಷ ಎಂದರು.
ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಿ, ಯಾದವ ಸಮಾಜ ಎಲ್ಲಾ ಕ್ಷೇತ್ರದಲ್ಲೂ ಮುಂದೆ ಬರಬೇಕೆನ್ನುವ ಮತ್ತು ಜನತಂತ್ರ ವ್ಯವಸ್ಥೆಯಲ್ಲಿ ಎಲ್ಲ ವರ್ಗಕ್ಕೂ ಸಾಮಾಜಿಕ ನ್ಯಾಯ ಸಿಗಬೇಕು ಎನ್ನುವ ಆಶಯಕ್ಕೆ ತಕ್ಕಂತೆ ಯಾದವ ಸಮಾಜದ ಕೃಷ್ಣಪ್ಪನವರನ್ನು ಅಧ್ಯಕ್ಷರನ್ನಾಗಿಸಲಾಗಿದೆ ಎಂದರು.
ಶಾಸಕ ದತ್ತರವರು ಜಾತಿಯಿಲ್ಲದಿದ್ದರೂ ಕೂಡ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ 42 ಸಾವಿರದಷ್ಟು ಮತಗಳ ಅಂತರದಿಂದ ಎಲ್ಲಾ ವರ್ಗಗಳ ಪ್ರೀತಿ ವಿಶ್ವಾಸ ಗಳಿಸಿ, ಗೆದ್ದಿರುವುದಕ್ಕೆ ಈ ಸಮಾವೇಶವೇ ಸಾಕ್ಷಿಯಾಗಿದೆ ಎಂದರು.
ಶಾಸಕ ವೈ.ಎಸ್.ವಿ.ದತ್ತ ಮಾತನಾಡಿ, ಯಾದವ ಸಮುದಾಯಕ್ಕೆ ತನ್ನದೇ ಸ್ಥಾನಮಾನ ಕಲ್ಪಿಸಬೇಕೆಂಬ ನಿಟ್ಟಿನಲ್ಲಿ ಸಮಾಜದವರು ಸಮಾವೇಶ ನಡೆಸುವ ಇರಾದೆ ವ್ಯಕ್ತಪಡಿಸಿದಂತೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಈ ಸಮಾವೇಶವು ಹೊಸ ಸಂದೇಶ ನೀಡಿದೆ ಎಂದರು.
ಸಮಾವೇಶದಲ್ಲಿ ಹಿ.ವ. ಆಯೋಗದ ಮಾಜಿ ಸದಸ್ಯ ಬಿ. ಗುರುಸ್ವಾಮಿ, ಜೆಡಿಎಸ್ ಮುಖಂಡ ಕೆ.ಎಂ. ಮಹೇಶ್ವರಪ್ಪ, ಭಂಡಾರಿ ಶ್ರೀನಿವಾಸ್, ಎನ್. ಇಮಾಮ್, ಸೀಗೇಹಡ್ಲು ಹರೀಶ್, ಡಿ. ಪ್ರಶಾಂತ್, ಎಂ. ಹಾಲಸಿದ್ದಪ್ಪ, ಕೆ.ಎನ್. ಬಸವರಾಜಪ್ಪ, ಪದ್ಮಾ ಚಂದ್ರಪ್ಪ, ಬಿ.ಟಿ. ಗಂಗಾಧರನಾಯ್ಕ, ಸುಜಾತಾ, ಈಶ್ವರಪ್ಪ, ಸುಶೀಲಮ್ಮ ಕೆ.ಸಿ. ಬಸವರಾಜಪ್ಪ, ದಯಾನಂದ, ಮರುಳಪ್ಪ ಮೊದಲಾದವರು ಉಪಸ್ಥಿತರಿದ್ದರು.