ನ.ರಾ.ಪುರ: ಬತ್ತ ಬೆಳೆ ಕ್ಷೇತ್ರೋತ್ಸವ
ನರಸಿಂಹರಾಜಪುರ: ಕೃಷಿ ಇಲಾಖೆಯ ಭೂಚೇತನ ಯೋಜನೆಯಡಿ ಬತ್ತದ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವು ಸಂಕ್ಸೆ ಗ್ರಾಮದ ಸುಧಾಕರ ಅವರ ಕೃಷಿ ಕ್ಷೇತ್ರದಲ್ಲಿ ಇತ್ತೀಚಿಗೆ ನಡೆಯಿತು.
ಕಾನೂರು ಗ್ರಾಪಂ ಉಪಾಧ್ಯಕ್ಷ ತಮ್ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರೈತ ಪಾಠ ಶಾಲೆಯಿಂದ ರೈತರಿಗೆ ಅನುಕೂಲವಾಗುತ್ತಿದೆ. ನಾನು ಸಹ ರೈತ ಕ್ಷೇತ್ರ ಪಾಠಶಾಲೆಗೆ ಹೋಗಿದ್ದು, ಬತ್ತದ ಬೆಳೆಯ ಬಗ್ಗೆ ಮಾಹಿತಿ ಪಡೆದು ಕೃಷಿ ಮಾಡಿ ಯಶಸ್ವಿಯಾಗಿದ್ದೇನೆ ಎಂದರು.
ಕೃಷಿ ಇಲಾಖೆಯ ಸಹಾಯ ಅಧಿಕಾರಿ ವಿ.ಎಸ್. ಶಿವಮೂರ್ತಿ ಮಾತನಾಡಿ, ಬತ್ತದ ಬೆಳೆ ಕ್ಷೇತ್ರೋತ್ಸವ ಮಾಡುವುದರಿಂದ ಗ್ರಾಮದ ರೈತರು ವೀಕ್ಷಣೆ ಮಾಡಿ ಉತ್ತೇಜನ ಪಡೆದು ತಮ್ಮ ಜಮೀನಿನಲ್ಲೂ ಹೆಚ್ಚಿನ ತಾಂತ್ರಿಕತೆ ಅಳವಡಿಸಿಕೊಳ್ಳುತ್ತಾರೆ ಎಂಬ ಉದ್ದೇಶದಿಂದ ಬತ್ತದ ಬೆಳೆ ಕ್ಷೇತ್ರೋತ್ಸವ ಹಮ್ಮಿಕೊಳ್ಳುತ್ತಿದ್ದೇವೆ ಎಂದರು.
ಕೃಷಿ ಇಲಾಖೆಯ ಅಧಿಕಾರಿ ಶ್ರೀಧರ್, ರೈತ ಅನುವುಗಾರ ಅರುಣ್, ಗ್ರಾಮದ ರೈತರು ಭಾಗವಹಿಸಿದ್ದರು.