ಪೂರ್ಣ ಶಾಸ್ತ್ರೀಯ ಸ್ಥಾನ ನೀಡದಿರುವುದು ವಿಷಾದನೀಯ
ನರಸಿಂಹರಾಜಪುರ: ರಾಜ್ಯಕ್ಕೆ 8 ಜ್ಞಾನಪೀಠ ಪ್ರಶಸ್ತಿ ಬಂದಿದ್ದರೂ, ಇನ್ನೂ ಕನ್ನಡ ಭಾಷೆಗೆ ಪೂರ್ಣ ಪ್ರಮಾಣದ ಶಾಸ್ತ್ರೀಯ ಸ್ಥಾನಮಾನ ನೀಡಿಲ್ಲ ಎಂದು ಶಾಸಕ ಡಿ.ಎನ್. ಜೀವರಾಜ್ ವಿಷಾದ ವ್ಯಕ್ತಪಡಿಸಿದರು.
ಅವರು ಸೋಮವಾರ ಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ 2ನೇ ವರ್ಷದ ವಾರ್ಷಿಕೋತ್ಸವ ಹಾಗೂ 58ನೇ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಶತಮಾನಗಳ ಕಾಲ ಭಾರತ ದೇಶ ಪರಕೀಯರ ಆಳ್ವಿಕೆಗೆ ಒಳಪಟ್ಟಿದ್ದರೂ, ಕನ್ನಡ ಭಾಷೆ ಅಳಿಸಿಲ್ಲ. ಕನ್ನಡ ಭಾಷೆ ಸುಂದರ ಭಾಷೆಯಾಗಿದ್ದು, ಕನ್ನಡ ವರ್ಣಮಾಲೆಗಳು ಅಂತರಾಳದಿಂದ ಬರುತ್ತದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಟಿ.ಡಿ. ರಾಜೇಗೌಡ ಮಾತನಾಡಿ, ಭಾರತ ದೇಶವು ವಿವಿಧೆತೆಯಲ್ಲಿ ಏಕತೆ ಹೊಂದಿದೆ. ಕರ್ನಾಟದಲ್ಲಿ ವಾಸ ಮಾಡುವ ಎಲ್ಲರೂ ಕನ್ನಡ ಭಾಷೆಯ ಋಣ ತೀರಿಸಬೇಕಾಗಿದೆ ಎಂದರು.
ಚಾಲಕರ ಪಾತ್ರ ಗಣನೀಯ: ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ ಮಾತನಾಡಿ, ಈ ನಾಡಿನ ಜಲ, ಭಾಷೆ, ಸಂಸ್ಕೃತಿ ಉಳಿಯಬೇಕಾದರೆ ಮಾತೃ ಭಾಷೆ ಉಳಿಯಬೇಕು. ಪ್ರತಿಯೊಬ್ಬರೂ ಕನ್ನಡದಲ್ಲೇ ಮಾತನಾಡಬೇಕು. ಕನ್ನಡ ಭಾಷೆ ಉಳಿಯಲು ಆಟೋ ಚಾಲಕರ ಪಾತ್ರ ಗಣನೀಯವಾಗಿದೆ ಎಂದರು.
ಅಧ್ಯಕ್ಷತೆಯನ್ನು ತಾಲೂಕು ಭುವನೇಶ್ವರಿ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಕೆ. ಅಣ್ಣಪ್ಪ ವಹಿಸಿದ್ದರು.
ಜಿಪಂ ಉಪಾಧ್ಯಕ್ಷೆ ಸುಜಾಟಜ, ಜಿಲ್ಲಾ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಪಿ.ಜೆ. ಆಂಟೋನಿ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್, ವಕೀಲ ಕೆ.ಪಿ. ಸುರೇಶ್ ಕುಮಾರ್, ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಪಿ.ಸಿ. ಮ್ಯಾಥ್ಯೂ ಉಪಸ್ಥಿತರಿದ್ದರು.
ವಿಧಾನ ಪರಿಷತ್ ಸದಸ್ಯ ಎಂ. ಶ್ರೀನಿವಾಸ್ ಆಟೋ ಚಾಲಕರ ಸಂಘದ ಕ್ಷೇಮಾಬಿವೃದ್ಧಿ ನಿಧಿಗೆ ನೀಡಿದ ರು. 50,000ವನ್ನು ಆಟೋ ಚಾಲಕರ ಸಂಘದ ಅಧ್ಯಕ್ಷರಿಗೆ ನೀಡಲಾಯಿತು.
ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಬಾಲಕೃಷ್ಣ, ನಾಟೀ ವೈದ್ಯ ಕೆ.ಯು.ಎ. ಪುದವಾಳ್, ಗೃಹರಕ್ಷಕ ದಳದ ಕೆ. ಪುಟ್ಟಯ್ಯ ಹಾಗೂ ಕಾಸಿ ದಂಪತಿಗಳನ್ನು ಸನ್ಮಾನಿಸಲಾಯಿತು. ಜುಬೇದ ಸ್ವಾಗತಿಸಿದರು. ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.