ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಬಿಜೆಪಿಯಿಂದ ರೈತರ ದಾರಿ ತಪ್ಪಿಸುವ ಕೆಲಸ

Lingaraj Badiger
Updated On : 18 Dec 2013, 11:02 am

ಕ.ಪ್ರ. ವಾರ್ತೆ  ಚಿಕ್ಕಮಗಳೂರು  ಡಿ.17
ಅಡಕೆ ನಿಷೇಧ ಇಲ್ಲವೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಹಾಗಿದ್ದರೂ ಕೂಡ ಬಿಜೆಪಿ ರೈತರನ್ನು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಆರೋಪಿಸಿದರು.
ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಶಾಸಕ ಸಿ.ಟಿ. ರವಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರು ಅಡಕೆ ನಿಷೇಧ ಕುರಿತ ಅಪಪ್ರಚಾರದಲ್ಲಿ ತೊಡಗಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ತಿಳಿಸಿದರು.
ಅಡಕೆ ನಿಷೇಧವಿಲ್ಲ: ಅಡಕೆ ಬೆಳೆಗಾರರ ನೆರವಿಗೆ ಬರುವಲ್ಲಿ ಎನ್‌ಡಿಎ ಸರ್ಕಾರ ವಿಫಲವಾಗಿತ್ತು. ಕೇಂದ್ರದಲ್ಲಿ ಯುಪಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸಂಕಷ್ಟದಲ್ಲಿರುವ ಅಡಕೆ ಬೆಳೆಗಾರರಿಗೆ ಬಹಳಷ್ಟು ನೆರವು ನೀಡಿದೆ. ಜತೆಗೆ ಬೆಳೆಗಾರರು ಎದುರಿಸುತ್ತಿದ್ದ ಸಮಸ್ಯೆಗಳಿಗೆ ಸ್ಪಂದಿಸಿದೆ. ಕೇಂದ್ರ ಸರ್ಕಾರ ಅಡಕೆ ನಿಷೇಧಕ್ಕೆ ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ ಎಂಬುದು ಸತ್ಯಕ್ಕೆ ದೂರವಾದ ವಿಷಯ. ಅಡಕೆ ನಿಷೇಧ ಇಲ್ಲ ಎಂದು ಈಗಾಗಲೇ ಕೇಂದ್ರದ ಆರೋಗ್ಯ ಸಚಿವರು ಹಾಗೂ ರಾಜ್ಯದ ಮುಖ್ಯಮಂತ್ರಿಯವರು ಸ್ಪಷ್ಟಪಡಿಸಿದ್ದಾರೆ ಎಂದರು.
ರಾಷ್ಟ್ರೀಯ ತೋಟಗಾರಿಕೆ ಮಿಷನ್, ಅಡಕೆ ಬೆಳೆಗಳ ಪುನಶ್ಚೇತನಕ್ಕೆ ಹೆಕ್ಟೇರ್‌ಗೆ 12 ಸಾವಿರ ನೆರವು ಕೇಂದ್ರ ಸರ್ಕಾರ ನೀಡಿದೆ. ವಿದೇಶದಿಂದ ಬರುತ್ತಿದ್ದ ಅಡಕೆ ಮೇಲೆ ನಿಯಂತ್ರಣ ಹೇರುವ ಉೈದ್ದೇಶದಿಂದ ಅಮದು ತೆರಿಗೆ ಹೆಚ್ಚಳ ಮಾಡಿದ್ದರಿಂದ ಅಡಕೆಗೆ ಉತ್ತಮ ಬೆಲೆ ಸಿಗುತ್ತಿದೆ ಎಂದ ಅವರು, ಅಡಕೆ ನಿಷೇಧಕ್ಕೆ ಕಾಂಗ್ರೆಸ್‌ನ ವಿರೋಧ ಇದೆ ಎಂದು ಹೇಳಿದರು.
ದತ್ತಪೀಠಕ್ಕೆ ಸಂಬಂಧಿಸಿದಂತೆ ಶಾಸಕ ಸಿ.ಟಿ. ರವಿ ಅವರು ನ್ಯಾಯಾಲಯದ ತೀರ್ಪುಗಾರರಂತೆ ಹೇಳಿಕೆ ನೀಡುತ್ತಿದ್ದಾರೆ. ನಾಗೇನಹಳ್ಳಿಯಲ್ಲಿ ದರ್ಗಾ ಇದೆ. ಅಲ್ಲಿ ಮುಸ್ಲಿಮರು ಉರುಸ್ ಮಾಡಲಿ ಎಂಬ ಹೇಳಿಕೆ ನೀಡುವ ಮೂಲಕ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯ ಒತ್ತುವರಿ ಸಮಸ್ಯೆ, ಹಳದಿ ಎಲೆ ರೋಗ, ಕಡೂರು ತಾಲೂಕು ಬರಪೀಡಿತ ಪ್ರದೇಶವೆಂದು ಘೋಷಿಸುವುದು ಹಾಗೂ ಕಳಸದ ಇನಾಂ ಭೂಮಿಯ ವಿವಾದವನ್ನು ಪರಿಹರಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಅವರ ಗಮನ ಸೆಳೆಯಲಾಗಿದೆ ಎಂದು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement