ಅಡಕೆ ನಿಷೇಧ ಪ್ರಸ್ತಾಪ ವಿರುದ್ಧ ಪ್ರತಿಭಟನೆ
ಕ.ಪ್ರ.ವಾರ್ತೆ, ತರೀಕೆರೆ, ಡಿ.18
ಇಲ್ಲಿನ ಭಾರತೀಯ ಕಿನಾಸ್ ಸಂಘ, ಕರ್ನಾಟಕ ಪ್ರದೇಶ ತಾಲೂಕು ಘಟಕ ವತಿಯಿಂದ ಬುಧವಾರ ಅಡಕೆ ಬೆಳೆ ನಿಷೇಧದ ಪ್ರಸ್ತಾಪ ವಿರುದ್ಧ ಮಹಾತ್ಮ ಗಾಂಧಿ ವೃತ್ತದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನೆ ನಡೆಸಲಾಯಿತು.
ಲಕ್ಷಾಂತರ ಅಡಕೆ ಬೆಳೆಗಾರರ ಜೊತೆಗೆ ವರ್ತಕರು, ಕಾರ್ಮಿಕರ ಬದುಕು ಬೀದಿಗೆಸೆಯುವ ಕೇಂದ್ರ ಸರ್ಕಾರದ ಅಡಕೆ ಬೆಳೆ ನಿಷೇಧದ ಪ್ರಸ್ತಾಪವನ್ನು ತಕ್ಷಣ ನ್ಯಾಯಾಲಯದಿಂದ ಹಿಂಪಡೆಯಬೇಕು. ತಂಬಾಕು ಲಾಬಿ ಹಿತಾಸಕ್ತಿ ಕಾಯಲು ಹೊರಟಿರುವ ರೈತ ವಿರೋಧಿ ಕೇಂದ್ರ ಸರ್ಕಾರ ಪ್ರಾಚೀನ ಕಾಲದಿಂದ ಅಡಕೆ ಭಾರತೀಯ ಪರಂಪರೆ ಜೊತೆಗೆ ಧಾರ್ಮಿಕ ಮತ್ತು ವೈಜ್ಞಾನಿಕವಾಗಿ ಬೆಸೆದಿರುವುದು ಎಲ್ಲರಿಗೂ ತಿಳಿದಿರುವುದೇ ಆಗಿದೆ. ಗುಟ್ಕಾ ನಿಷೇಧದ ಹೆಸರಿನಲ್ಲಿ ಪ್ರಾರಂಭವಾದ ಷಡ್ಯಂತ್ರ ಅಡಕೆ ಬೆಳೆಯನ್ನೇ ನಿಷೇಧ ಮಾಡುವವರೆಗೂ ಕೇಂದ್ರ ಸರ್ಕಾರ ಮುಂದಾಗಿರುವುದು ಖಂಡನೀಯ ಎಂದು ಕಾರ್ಯಕರ್ತರು ಆರೋಪಿಸಿದರು.
ಅಡಕೆ ಬೆಳೆಗಾರರ ಹಿತಕಾಯುವಲ್ಲಿ ನಿರ್ಲಕ್ಷ್ಯ ವಹಿಸಿರುವ ಕರ್ನಾಟಕದ, ಕೇಂದ್ರ ಸಚಿವರನ್ನು ಕೂಡಲೇ ಸಚಿವ ಸ್ಥಾನದಿಂದ ಕೈಬಿಡಬೇಕು. ತಕ್ಷಣವೇ ನ್ಯಾಯಾಲಯಕ್ಕೆ ಸಲ್ಲಿಸಿರುವ ಅಫಿಡವಿಟ್ ಅನ್ನು ಹಿಂಪಡೆಯೇಬೇಕು. ತಪ್ಪಿದಲ್ಲಿ ಯಾವುದೇ ದುಷ್ಪರಿಣಾಮಗಳು ರೈತ ಸಮುದಾಯದ ಮೇಲೆ ಉಂಟಾದಲ್ಲಿ ಕೇಂದ್ರ ಸರ್ಕಾರ ನೇರ ಹೊಣೆ ಎಂದು ಎಚ್ಚರಿಸಿದರು.
ತಹಸೀಲ್ದಾರ್ ಅವರಿಗೆ ಮನವಿ ಅರ್ಪಿಸಲಾಯಿತು. ಸಂಘದ ದಕ್ಷಿಣ ಪ್ರಾಂತ ಕಾರ್ಯದರ್ಶಿ ಮಲ್ಲೇನಹಳ್ಳಿ ಕೆ.ಪರಮೇಶ್ವರಪ್ಪ, ತಾಲೂಕು ಕಾರ್ಯದರ್ಶಿ ಶಿವಣ್ಣ, ಗಿರಿರಾಜ್, ಹರೀಶ್, ಎಸ್.ಪಿ.ಚಂದಪ್ಪ, ಉಮೇಶ್, ಆರ್.ಮೂರ್ತಿ, ಚಂದ್ರಯ್ಯ, ವಿರೂಪಾಕ್ಷಿ, ರೈತರು, ಸಂಘದ ಸದಸ್ಯರು, ಪದಾಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.