ಆರೋಗ್ಯಪೂರ್ಣ ಸಮಾಜಕ್ಕೆ ಶಿಕ್ಷಣ ಬುನಾದಿ: ಶ್ರೀನಿವಾಸ್
ತರೀಕೆರೆ: ಆರೋಗ್ಯಪೂರ್ಣ ಸಮಾಜಕ್ಕೆ ಶಿಕ್ಷಣ ಮತ್ತು ಶಾಲೆಗಳು ಬುನಾದಿಯಾಗಿದೆ ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಸಂಪನ್ಮೂಲ ಕೇಂದ್ರ, ಸರ್ವ ಶಿಕ್ಷಣ ಅಭಿಯಾನ, ಸ.ಹಿ.ಕಿ ಪ್ರಾ. ಮತ್ತು ಪ್ರೌ.ಶಾಲೆ ಗಡೀಹಳ್ಳಿ ಹಾಗೂ ಗ್ರಾಮಸ್ಥರ ವತಿಯಿಂದ ಸಮೀಪದ ಗಡೀಹಳ್ಳಿಯಲ್ಲಿ ಏರ್ಪಡಿಸಲಾಗಿದ್ದ ಕಿರಿಯ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಕ್ಕಳ ಮಾನಸಿಕ ಆರೋಗ್ಯ ಆಸ್ವಾದಿಸುವ ಶಕ್ತಿ ವೈವಿಧ್ಯತೆಯನ್ನು ಗೌರವಿಸುವ ಭಾವ, ಸೃಜನಾತ್ಮಕ ಸಾಮರ್ಥ್ಯ ವೃದ್ಧಿ, ಆರೋಗ್ಯ ಪೂರ್ಣ ಸ್ಪರ್ಧೆ ಹಾಗೂ ವೈಧಾನಿಕ ಶಕ್ತಿಯನ್ನು ಹಿಗ್ಗಿಸಲು ಪ್ರತಿಭಾ ಕಾರಂಜಿ ಅತ್ಯಂತ ಅಗತ್ಯವಾಗಿದೆ. ಮಕ್ಕಳನ್ನು ಬೌದ್ಧಿಕ ಒತ್ತಡಕ್ಕೆ ಒಳಪಡಿಸಿ, ಪುಸ್ತಕದ ಯಂತ್ರಗಳನ್ನಾಗಿ ಮಾಡದೆ, ಆವರು ಚೇತೋಹಾರಿಯಾಗಿ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಹ ಪಠ್ಯ ಚಟುವಟಿಕೆಗಳು ರಾಜಮಾರ್ಗಗಳಾಗುತ್ತದೆ ಎಂದು ತಿಳಿಸಿದರು.
ಶಿಕ್ಷಕರು ಶ್ರಮಿಸಲಿ: ಗುಣಾತ್ಮಕ ಶಿಕ್ಷಣವನ್ನು ಈ ಎಲ್ಲಾ ಆಯಾಮಗಳಿಂದ ನೀಡಿದಲ್ಲಿ ಕ್ರೀಯಾಶೀಲ ನಾಗರಿಕರನ್ನು ಸೃಷ್ಟಿಸಿದಂತಾಗುತ್ತದೆ. ಇದಕ್ಕಾಗಿ ಶಿಕ್ಷಕರು ಶ್ರಮಿಸಬೇಕು ಎಂದು ತಿಳಿಸಿದರು.
ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಎಂ. ಕೃಷ್ಣಮೂರ್ತಿ ಅವರು ಉದ್ಘಾಟನೆ ನೆರವೇರಿಸಿ ಮಾತನಾಡಿ, ಪ್ರತಿಭಾ ಕಾರಂಜಿ ಸ್ಥಳೀಯ ಸಂಸ್ಕೃತಿಯನ್ನು ಬೀರುವುದಲ್ಲದೆ ಮಕ್ಕಳ ಸೃಜನಾತ್ಮಕ ಅಭಿವ್ಯಕ್ತಿಗೆ ಪ್ರತಿಭಾ ಕಾರಂಜಿ ಒಂದು ಉತ್ತಮ ವೇದಿಕೆ ಎಂದರು.
ತಾಪಂ ಅಧ್ಯಕ್ಷೆ ಶಕುಂತಲ ನಾಗರಾಜ್, ಜಿಪಂ ಸದಸ್ಯರಾದ ಕೆ.ಪಿ. ಕುಮಾರ್, ಕೆ.ಆರ್. ಆನಂದಪ್ಪ, ಎಸ್.ಬಿ. ಆನಂದಪ್ಪ, ಜೆ.ಬಿ. ಕೃಷ್ಣಮೂರ್ತಿ, ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್, ತಾಪಂ ಸದಸ್ಯರು, ಗ್ರಾಪಂ ಸದಸ್ಯರು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮುದಾಯದ ಕಾರ್ಯಕ್ರಮವನ್ನಾಗಿ ಮಾರ್ಪಡಿಸಿ ಊರಿನ ಹಬ್ಬದಂತೆ ಆಚರಿಸಲಾಯಿತು. ಸ್ಥಳಿಯ ಕಲಾ ಮೇಳಗಳು, ಡೊಳ್ಳು ಕುಣಿತಗಳು ಮತ್ತು ವೀರಗಾಸೆಯ ಪ್ರದರ್ಶನದೊಂದಿಗೆ ಮೆರವಣಿಗೆ ಏರ್ಪಡಿಸಲಾಗಿತ್ತು.