ಮೀಟರ್ ಪೂರೈಕೆಗೆ ಗುತ್ತಿಗೆದಾರರ ಆಗ್ರಹ
ಚಿಕ್ಕಮಗಳೂರು: ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್ ಮೀಟರ್ ಪೂರೈಕೆ ಮಾಡುವಲ್ಲಿ ವಿಫಲರಾಗಿರುವ ಎಲ್ ಅಂಡ್, ಕಂಪನಿ ವಿರುದ್ಧ ವಿದ್ಯುತ್ ಗುತ್ತಿಗೆದಾರ ಸಂಘದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ವಿದ್ಯುತ್ ಗುತ್ತಿಗೆದಾರ ಸಂಘದ ಜಿಲ್ಲಾಧ್ಯಕ್ಷ ಟಿ.ಪಿ. ಭೋಜೇಗೌಡ ನೇತೃತ್ವದಲ್ಲಿ ಗ್ರಾಹಕರು ನಗರದ ಮೆಸ್ಕಾಂ ಕಚೇರಿಗೆ ತೆರಳಿ ವಿದ್ಯುತ್ ಮೀಟರ್ ಪೂರೈಕೆ ಮಾಡುವ ದಾಸ್ತಾನು ಕೊಠಡಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಮಾರುಕಟ್ಟೆ ದರಕ್ಕಿಂತ ಹೆಚ್ಚು: ನಂತರ ಟಿ.ಪಿ. ಭೋಜೇಗೌಡ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಗ್ರಾಹಕರಿಗೆ ಸಮರ್ಪಕವಾಗಿ ವಿದ್ಯುತ್ ಮೀಟರ್ ಪೂರೈಕೆ ಮಾಡುವಲ್ಲಿ ಎಲ್ ಅಂಡ್, ಮತ್ತು ಎಲ್ ಅಂಡ್ ಜಿ ಖಾಸಗಿ ಕಂಪನಿಗಳು ಸಂಪೂರ್ಣ ವಿಫಲವಾಗಿದೆ. ಅಲ್ಲದೆ ಮಾರುಕಟ್ಟೆಯಲ್ಲಿ 400 ರು.ಗೆ ಸಿಗುವ ಮೀಟರ್‌ಗಳನ್ನು ಮೂರು ಪಟ್ಟು ಹೆಚ್ಚಿನ ಬೆಲೆಗೆ ಅಂದರೆ 1190 ರು.ಗಳಿಗೆ ಮಾರಾಟ ಮಾಡುತ್ತಿದ್ದಾರೆ. ಆದಾಗ್ಯೂ ಸರಿಯಾಗಿ ಮೀಟರ್‌ಗಳನ್ನು ನೀಡುತ್ತಿಲ್ಲಾ ಎಂದು ದೂರಿದರು.
ಮೆಸ್ಕಾಂನಿಂದ ಖಾಸಗಿಯವರು ಏಜೆನ್ಸಿ ಪಡೆದು ಇವರಿಬ್ಬರ ಒಳ ವ್ಯವಹಾರದ ತೊಡಕಿನ ಸಂಬಂಧ ಗ್ರಾಹಕರಿಗೆ ತೊಂದರೆಯಾಗುತ್ತಿದೆ, ಹೊರಗಡೆಯಿಂದ ಮೀಟರ್ ತಂದು ಅಳವಡಿಸಲು ಮುಂದಾದರೆ ಎಲ್ಲವೂ ಸರಿ ಇದ್ದರೂ ಅದಕ್ಕೆ ಮೆಸ್ಕಾಂನಲ್ಲಿ ಅನುಮತಿ ನಿರಾಕರಿಸುತ್ತಾರೆ ಎಂದು ಆರೋಪಿಸಿದರು.
ಬೇರೆ ಮೀಟರ್‌ಗೆ ಅಡ್ಡಿ: ಮೀಟರ್‌ಗಳು ಸಮರ್ಪಕವಾಗಿ ನ್ಯಾಯಯುತ ಬೆಲೆಯಲ್ಲಿ ಗ್ರಾಹಕರಿಗೆ ಪೂರೈಕೆ ಮಾಡಬೇಕು ಮತ್ತು ಕಚೇರಿಯಲ್ಲಿ ಮೀಟರ್ ಇಲ್ಲದ ಸಂದರ್ಭದಲ್ಲಿ ಹೊರಗಡೆಯಿಂದ ಖರೀದಿ ಮಾಡಿದ ಮೀಟರ್ ಅಳವಡಿಸಲು ಮೆಸ್ಕಾಂನಿಂದ ತಕರಾರು ಮಾಡದಂತೆ ಅನುಮತಿ ನೀಡಬೇಕೆಂದು ಒತ್ತಾಯಿಸಿದರು.
ಸಮಸ್ಯೆ ತಿಳಿದ ಕೆಲ ಹೊತ್ತಿನಲ್ಲೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಖಾಸಗಿ ಕಂಪನಿ ಸಿಬ್ಬಂದಿಗಳು ಮೇಲಾಧಿಕಾರಿಗಳೊಂದಿಗೆ ಚರ್ಚಿಸಿ ಗ್ರಾಹಕರಿಗೆ ತೊಂದರೆ ಯಾಗದಂತೆ ಮೀಟರ್ ಪೂರೈಕೆ ಮಾಡಲಾಗುತ್ತದೆ ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದರು.
ಕಾರ್ಯದರ್ಶಿ ಹರೀಶ್, ಖಜಾಂಚಿ ಹಮೀದ್, ಸಹ ಕಾರ್ಯದರ್ಶಿ ಕರ್ಣ, ಯೋಗೀಶ್ ಸೇರಿದಂತೆ ಸದಸ್ಯರು ಹಾಗೂ ಗ್ರಾಹಕರು ಪಾಲ್ಗೊಂಡಿದ್ದರು.