ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಸಿಇಟಿ ಕಾಯ್ದೆ ಜಾರಿಯಿಂದ ಕಾನೂನುಬದ್ಧ ಲೂಟಿ

Lingaraj Badiger
Updated On : 19 Dec 2013, 11:21 am

ಚಿಕ್ಕಮಗಳೂರು: ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಿಇಟಿ ಕಾಯ್ದೆಯನ್ನು ವಿರೋಧಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ಸರ್ಕಾರ ಜಾರಿಗೊಳಿಸಲು ಹೊರಟಿರುವ ಈ ಕಾಯ್ದೆಯಿಂದಾಗಿ ಪ್ರಸ್ತುತ ಸರ್ಕಾರಿ ಕೋಟಾದಲ್ಲಿರುವ ಇಂಜಿನಿಯರಿಂಗ್ ಶೇ. 45, ಮೆಡಿಕಲ್ ಶೇ. 40 ಹಾಗೂ ವೈದ್ಯಕೀಯ ಶೇ. 35 ಸೀಟುಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ಪಾಲಾಗಲಿವೆ. ಯಾವುದೇ ಖಾಸಗಿ ಅನುದಾನ ರಹಿತ ಕಾಲೇಜಿನಲ್ಲಿ ಒಂದೂ ಸರ್ಕಾರಿ ಕೋಟಾದ ಸೀಟುಗಳು ಇಲ್ಲದಂತಾಗಿದೆ.
ಕಾಮೆಡ್-ಕೆ ಪಾರುಪತ್ಯ: ತನ್ನ ಪಾಲಿನ ಸೀಟುಗಳಿಗಾಗಿ ಕಾಮೆಡ್- ಕೆ ನಡೆಸುವ ಪ್ರವೇಶ ಪರೀಕ್ಷೆಯ ಬಗ್ಗೆ ಈಗಾಗಲೇ ಹಲವಾರು ದೂರುಗಳಿದ್ದು, ಅಂತಹದರಲ್ಲಿ ಸರ್ಕಾರ ಉಳಿದ ಸೀಟುಗಳಿಗೂ ಪರೀಕ್ಷೆ ನಡೆಸಲು ಕಾಮೆಡ್- ಕೆಗೆ ಬಿಟ್ಟುಕೊಡುತ್ತಿರುವುದು ಖಂಡನೀಯ ಎಂದರು.
ಇದರಿಂದ ಖಾಸಗಿ ಸಂಸ್ಥೆಗಳಿಗೆ ಬೇಕಾಬಿಟ್ಟಿ ಶುಲ್ಕ ವಸೂಲಿ ಮಾಡಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಖಾಸಗಿ ವೈದ್ಯಕೀಯ, ದಂತ, ಇಂಜಿನಿಯರಿಂಗ್, ಯುನಾನಿ, ಆಯುರ್ವೇದ, ಯೋಗ, ನ್ಯಾಚರೋಪತಿ ಕಾಲೇಜುಗಳಲ್ಲಿನ ಸರ್ಕಾರಿ ಸೀಟುಗಳಿಗೆ ಪ್ರವೇಶ ಶುಲ್ಕ ಕುರಿತಂತೆ ಸರ್ಕಾರದ ಸಂಪೂರ್ಣ ನಿಯಂತ್ರಣ ತಪ್ಪಿ, ಖಾಸಗಿ ಆಡಳಿತ ಮಂಡಳಿಗಳಿಗೆ ಪರಮಾಧಿಕಾರ ಕೊಟ್ಟಂತಾಗುತ್ತದೆ ಎಂದು ಹೇಳಿದ್ದಾರೆ.
ಕಾನೂನು ಬದ್ಧ ಲೂಟಿ: ವಾಮ ಮಾರ್ಗಗಳ ಮೂಲಕ ಖಾಸಗಿ ಕಾಲೇಜುಗಳು ಲಕ್ಷಾಂತರ ರುಪಾಯಿಗಳಿಗೆ ಸೀಟು ಮಾರಾಟ ಮಾಡುತ್ತಿದ್ದವು. ಆದರೆ, ಸರ್ಕಾರ ತರಲಿರುವ ಈ ಕಾಯ್ದೆಯಿಂದಾಗಿ ಕಾನೂನು ಬದ್ಧವಾಗಿಯೇ ಹಣ ಕೊಳ್ಳೆ ಹೊಡೆಯಲು ಅನುಕೂಲವಾಗುತ್ತದೆ. ಬಡ, ಪ್ರತಿಭಾವಂತ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಿರುವ, ಸಾಮಾಜಿಕ ನ್ಯಾಯವನ್ನು ಕಿತ್ತುಕೊಳ್ಳುವ ವಿದ್ಯಾರ್ಥಿ ವಿರೋಧಿ ಕಾಯ್ದೆಯನ್ನು ಕೂಡಲೇ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ಎಬಿವಿಪಿ ಜಿಲ್ಲಾ ಪ್ರಮುಖ್ ದಯಾನಂದ ತಿರುಗುಣ, ಸಹ ಕಾರ್ಯದರ್ಶಿ ಕೆ.ಸಿ. ಭರತ್, ಕಿಶೋರ, ದರ್ಶನ್ ಹಿರೇಮಠ್ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement