ಪ್ರಾಥಮಿಕ ಆರೋಗ್ಯ ಕೇಂದ್ರ ಮೇಲ್ದರ್ಜೆಗೇರಿಸಲು ಆಗ್ರಹ
ಬಾಳೆಹೊನ್ನೂರು: ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದ ಅವ್ಯವಸ್ಥೆ ಖಂಡಿಸಿ ತಾಲೂಕು ಬಿಜೆಪಿ ಹಾಗೂ ವಿವಿಧ ಸಂಘ- ಸಂಸ್ಥೆಗಳ ವತಿಯಿಂದ ಗುರುವಾರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಯಿತು.
ತಾಲೂಕು ಬಿಜೆಪಿ ಅಧ್ಯಕ್ಷ ಭಾಸ್ಕರ್ ವೆನಿಲ್ಲಾ ಮಾತನಾಡಿ, ಕೂಲಿ ಕಾರ್ಮಿಕರೇ ಹೆಚ್ಚಾಗಿ ವಾಸಿಸುವ ಹೋಬಳಿ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಿಲ್ಲದೆ ಪರದಾಡುವಂತಾಗಿದ್ದು, ಕೂಡಲೇ ಸಿಬ್ಬಂದಿ ನೇಮಕ ಮಾಡಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೆ ಏರಿಸಬೇಕು.
ಪ್ರಸೂತಿ ತಜ್ಞರ ನೇಮಿಸಿ: ಔಷಧಿ ಹಾಗೂ ಇನ್ನಿತರ ಮೂಲ ಸಮಸ್ಯೆಗಳತ್ತ ಸರ್ಕಾರ ಗಮನಹರಿಸಬೇಕು. ಜಿಲ್ಲಾ ವೈದ್ಯಾಧಿಕಾರಿಗಳು ಪ್ರತಿ ತಿಂಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿ, 24 ಗಂಟೆಗಳ ಕಾಲ ವೈದ್ಯರ ಸೇವೆ ಸಿಗುವಂತಾಗಬೇಕು. ಪ್ರಸೂತಿ ತಜ್ಞರನ್ನು ನೇಮಿಸಬೇಕು. ರೋಗಿಗಳು ಆಸ್ಪತ್ರೆಗೆ ಬಂದಾಗ ಸೂಕ್ತವಾಗಿ ಸ್ಪಂದಿಸುವಂತೆ ದಾದಿಯರಿಗೆ ಆದೇಶಿಸಬೇಕು ಮತ್ತು ಸ್ವಚ್ಛತೆ ಬಗ್ಗೆ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಕರವೇ ಹೋಬಳಿ ಅಧ್ಯಕ್ಷ ಮಧು ಕಾನ್ಕೆರೆ ಮಾತನಾಡಿ, ಕಳೆದ ಮೂರು ನಾಲ್ಕು ವರ್ಷಗಳಿಂದ ಆಸ್ಪತ್ರೆಯ ಹಲವು ಸಮಸ್ಯೆಗಳ ವಿರುದ್ಧ ಹೋರಾಟ ಮಾಡಿದ್ದರೂ ಸರ್ಕಾರ ಸರಿಯಾದ ವೈದ್ಯರ ನೇಮಕಾತಿ ಮಾಡಿಲ್ಲ. ಗರ್ಭಿಣಿಯರಿಗೆ ಪ್ರಸೂತಿ ಆರೈಕೆ, ಮಡಿಲು ಕಿಟ್ ಹಾಗೂ ಸರ್ಕಾರದ ಸಹಾಯಧನ ಸರಿಯಾಗಿ ವಿತರಣೆಯಾಗುತ್ತಿಲ್ಲ. ಈ ಸಮಸ್ಯೆಗಳು ಬಗೆಹರಿಯದಿದ್ದಲ್ಲಿ ಗ್ರಾಮಸ್ಥರೊಂದಿಗೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದರು.
ಅನಾರೋಗ್ಯ: ಆಟೋ ಸಂಘದ ಅಧ್ಯಕ್ಷ ಸದಾಶಿವ ಮಾತನಾಡಿ, ಸಾರ್ವಜನಿಕರ ಆರೋಗ್ಯ ಕಾಪಾಡಬೇಕಾದ ಆಸ್ಪತ್ರೆಯೇ ಅನಾರೋಗ್ಯಪೀಡಿತವಾಗಿದ್ದು, ಒಬ್ಬ ಮಹಿಳಾ ವೈದ್ಯರು ಬೆಳಗ್ಗೆ 10.30ಕ್ಕೆ ಬಂದು ಮಧ್ಯಾಹ್ನ 3 ಗಂಟೆಗೆ ವಾಪಸ್ ತೆರಳುತ್ತಾರೆ. ಕುಡಿಯುವ ನೀರು, ಶೌಚಾಲಯ, ಕೊಠಡಿಗಳು ವ್ಯವಸ್ಥಿತವಾಗಿಲ್ಲ. ತುರ್ತು ಚಿಕಿತ್ಸೆಗಾಗಿ ನ.ರಾ.ಪುರ, ಕೊಪ್ಪ ಹಾಗೂ ಚಿಕ್ಕಮಗಳೂರು ಆಸ್ಪತ್ರೆಗೆ ತೆರಳಬೇಕಾಗಿದ್ದು, ಮಹಿಳಾ ವೈದ್ಯರನ್ನು ಕೂಡಲೇ ಬೇರೆಡೆಗೆ ವರ್ಗಾವಣೆ ಮಾಡಿ ಹೊಸ ವೈದ್ಯಾಧಿಕಾರಿಗಳನ್ನು ನೇಮಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಪ್ರಭಾರಿ ಆರೋಗ್ಯ ವೈದ್ಯಾಧಿಕಾರಿ ತೀರ್ಥನಾಥ್ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಮನವಿ ಸ್ವೀಕರಿಸಿ ಮಾತನಾಡಿ, 4 ದಿನದ ಒಳಗೆ ಪ್ರಭಾರಿ ವೈದ್ಯಾಧಿಕಾರಿಗಳನ್ನು ನೇಮಿಸಲಾಗುವುದು ಮತ್ತು ಗ್ರೂಫ್ ಡಿ ನೌಕರರ ಬಗ್ಗೆ ಗಮನಹರಿಸಲಾಗುವುದು. ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಪರಿವರ್ತನೆ ಮಾಡಲು ಶಿಫಾರಸು ಮಾಡಲಾಗುವುದು ಎಂದರು.
ಪ್ರತಿಭಟನಾ ಸ್ಥಳಕ್ಕೆ ಜಿಪಂ ಉಪಾಧ್ಯಕ್ಷೆ ಸುಜಾತ, ಸದಸ್ಯ ಶೃಂಗೇರಿ ಶಿವಣ್ಣ ಆಗಮಿಸಿ ಪ್ರತಿಭಟನಾಕಾರರರ ಮನವಿ ಸ್ವೀಕರಿಸಿದರು.
ಹೋಬಳಿ ಬಿಜೆಪಿ ಅಧ್ಯಕ್ಷ ಕೆ.ಕೆ. ವೆಂಕಟೇಶ್, ತಾಲೂಕು ವಕ್ತಾರ ಬಿ. ಜಗದೀಶ್ಚಂದ್ರ, ಕ್ಷೇತ್ರ ರೈತ ಮೋರ್ಚಾ ಅಧ್ಯಕ್ಷ ಕೆ.ಟಿ. ವೆಂಕಟೇಶ್, ಗ್ಯಾರೇಜ್ ಸಂಘದ ಅಧ್ಯಕ್ಷ ರಮೇಶ್, ಆರ್.ಡಿ. ಮಹೇಂದ್ರ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಪ್ರೇಮೇಶ್ ಮಾಗಲು ಮತ್ತಿತರರು ಭಾಗವಹಿಸಿದ್ದರು.
ಆಟೋ, ಟ್ಯಾಕ್ಸಿ, ಗೂಡ್ಸ್ ಆಟೋ, ಟ್ರ್ಯಾಕ್ಟರ್ ಮಾಲೀಕರ ಹಾಗೂ ಚಾಲಕರ ಸಂಘ, ಸ್ವ ಸಹಾಯ ಸಂಘಗಳು ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದ್ದರು.
ಇದಕ್ಕೂ ಮುನ್ನ ರೋಟರಿ ವೃತ್ತದಿಂದ ಪ್ರತಿಭಟನಾ ಮೆರವಣಿಗೆ ನಡೆಸಿ ಜೇಸಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ರಸ್ತೆ ತಡೆ ನಡೆಸಿದರು.