ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಭದ್ರಾ ಮೇಲ್ದಂಡೆ ಚುರುಕುಗೊಳಿಸಿ

Lingaraj Badiger
Updated On : 20 Dec 2013, 10:57 am

ಕ.ಪ್ರ.ವಾರ್ತೆ  ಕಡೂರು  ಡಿ.19
ತಾವು ನೀರಾವರಿ ಸಚಿವರಾಗಿದ್ದಾಗ ಕಡೂರು ತಾಲೂಕಿನ ಪ್ರಮುಖ ನೀರಾವರಿ ಯೋಜನೆಯಾದ ಹೆಬ್ಬೆ ಯೋಜನೆಗೆ ಶಾಸಕರಾದ ವೈಎಸ್‌ವಿ ದತ್ತ ಹಾಗೂ ಮಾಜಿ ಶಾಸಕ ವೈ.ಸಿ. ವಿಶ್ವನಾಥ್ ಅವರು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ ಆಡಳಿತಾತ್ಮಕ ಅನುಮೋದನೆ ಕೊಡಿಸಲಾಯಿತು ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಕಸಬಾ ಹೋಬಳಿಯ ಜಿ. ತಿಮ್ಮಾಪುರದಲ್ಲಿ ಬುಧವಾರ ಸಂಜೆ ಕಡೂರು ತರಳಬಾಳು ಮಹಿಳಾ ವೇದಿಕೆ ಮತ್ತು ಜಿ. ತಿಮ್ಮಾಪುರ ಗ್ರಾಮಸ್ಥರ ಸಹಕಾರದಿಂದ ಆರಂಭಿಸಿರುವ ತರಳಬಾಳು ಶುದ್ಧ ಗಂಗಾ ಘಟಕ ಉದ್ಘಾಟಿಸಿ ಮಾತನಾಡಿ, ಕಡೂರು ತಾಲೂಕು ತೀವ್ರ ಬರಗಾಲದ ಪ್ರದೇಶವಾಗಿರುವ ಹಿನ್ನೆಲೆ ಹಲವಾರು ನೀರಾವರಿ ಯೋಜನೆ ನೀಡಿದರೂ ಸಮಸ್ಯೆಗಳಿಂದಾಗಿ ಯೋಜನಗಳು ನಿಧಾನಗತಿಯಲ್ಲಿ ಸಾಗುತ್ತಿವೆ.
 ಭದ್ರಾ ಮೇಲ್ದಂಡೆ ಯೋಜನೆಯಿಂದ ಕಡೂರು ತಾಲೂಕಿನ ಯಗಟಿ, ಹಿರೇನಲ್ಲೂರು, ಚೌಳಹಿರಿಯೂರು ಮತ್ತು ಪಂಚನಹಳ್ಳಿ ಹೋಬಳಿಗಳಿಗೆ ನೀರಾವರಿ ಸೌಲಭ್ಯ ದೊರಕಲಿದೆ. ಈ ಯೋಜನೆ ಎರಡು ವರ್ಷಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ತಾಲೂಕಿನ ನೀರಾವರಿ ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ಕರೆದು ಸ್ಥಳೀಯ ಶಾಸಕರಾದ ವೈಎಸ್‌ವಿ ದತ್ತ ಅವರು ಸೇರಿದಂತೆ ಇಲ್ಲಿನ ಪ್ರಮುಖ ರೈತರೊಂದಿಗೆ ಚರ್ಚಿಸಿ ಯೋಜನೆ ವೇಗ ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನೀರಾವರಿ ಯೋಜನೆಗಳಿಗೆ ಹಲವು ಸಮಸ್ಯೆಗಳು ಎದುರಾಗುತ್ತಿದ್ದು, ಸಿರಿಗೆರೆ ಶ್ರೀಗಳು ಇದರ ನೇತೃತ್ವ ವಹಿಸಿ ಕಡೂರು ತಾಲೂಕಿನ ನೀರಾವರಿ ಯೋಜನೆ ಜಾರಿಗೆ ಮಾರ್ಗದರ್ಶನ ನೀಡಿ ಸರ್ಕಾರವನ್ನು ಎಚ್ಚರಿಸಿ ಈ ಭಾಗದ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿ, ಜಿ. ತಿಮ್ಮಾಪುರ ಗ್ರಾಮದಲ್ಲಿ ತರಳಬಾಳು ಶುದ್ಧ ಗಂಗಾ ಕುಡಿಯುವ ನೀರಿನ ಘಟಕದ ಫಿಲ್ಟರ್‌ಗಳ 2 ವರ್ಷ ಕಾಲ ತಾವು ಆರ್ಥಿಕ ನೆರವು ನೀಡುವುದಾಗಿ ಘೋಷಿಸಿದರು.
140 ಕೋಟಿ: ಅಧ್ಯಕ್ಷತೆ ವಹಿಸಿದ್ದ ಶಾಸಕ ವೈಎಸ್‌ವಿ ದತ್ತ ಮಾತನಾಡಿ, ಸರ್ಕಾರದಿಂದ ಮಾಡಲಾಗದ ಕೆಲಸವನ್ನು ಮಹಿಳಾ ಸಂಘಟನೆ ಮಾಡಿರುವುದು ಸಂತೋಷವಾಗಿದ್ದು, ನೀರಾವರಿ ಯೋಜನೆಗಳ ಅನುಷ್ಠಾನದಲ್ಲಿ ಬಸವರಾಜ ಬೊಮ್ಮಾಯಿ ಅವರ ಕೊಡುಗೆ ಅಪಾರವಾಗಿದೆ.
 ಹೆಬ್ಬೆ ತಿರುವು ಯೋಜನೆಗೆ ಅವರ ಅವಧಿಯಲ್ಲಿ ಅನುಮೋದನೆ ಪಡೆದುಕೊಂಡಿದ್ದು, ಸರ್ವೆ ಕಾರ್ಯ ಮುಗಿದು ಯೋಜನೆಗೆ 140 ಕೋಟಿ ಅನುದಾನ ಬಿಡುಗಡೆಯಾಗಿದೆ. ಮಹಿಳಾ ವೇದಿಕೆಯು ಕ್ಷೇತ್ರದ ಇತರೆಡೆಗಳಲ್ಲಿ ತರಳಬಾಳು ಹೆಸರಿನಲ್ಲಿ ಶುದ್ಧ ಗಂಗಾ ಘಟಕ ತೆರೆಯಲು ಮುಂದೆ ಬಂದಲ್ಲಿ ಯಂತ್ರೋಪಕರಣಗಳ ವೆಚ್ಚವನ್ನು ಸರ್ಕಾರದಿಂದ ಭರಿಸುವುದಾಗಿ ಭರವಸೆ ನೀಡಿದರು.
ಮಾಜಿ ಶಾಸಕ ವೈ.ಸಿ. ವಿಶ್ವನಾಥ್ ಮಾತನಾಡಿ, ಶುದ್ಧ ನೀರಿನಿಂದ ಮನುಷ್ಯನ ಆರೋಗ್ಯ ಕಾಪಾಡಿಕೊಳ್ಳಬಹುದು. ಫ್ಲೋರೈಡ್‌ಯುಕ್ತ ನೀರಿನಿಂದ ಗಂಟಲು ಬೇನೆ, ಕೀಲು ನೋವಿನಂತಹ ರೋಗಗಳು ಬರುವುದರಿಂದ ಶುದ್ಧ ನೀರು ಕುಡಿದು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಾನ್ನಿಧ್ಯ ವಹಿಸಿದ್ದ ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ  ಮಾತನಾಡಿ, ಭಾಷಣಗಳಲ್ಲಿ ಕಾಲಹರಣ ಮಾಡುವುದಕ್ಕಿಂತ ಕೆಲಸ ಮಾಡುವ ಮೂಲಕ ಮಾತನಾಡಿದರೆ ಅರ್ಥಪೂರ್ಣ ಬದುಕು ಕಾಣಲು ಸಾಧ್ಯ.
 ತರಳಬಾಳು ಮಹಿಳಾ ಸಂಘಟನೆಯು ಜನೋಪಯೋಗಿ ಕೆಲಸ ಮಾಡಿರುವುದು ಅಭಿನಂದನಾರ್ಹ. ದೇಶದ ಪರಿಸ್ಥಿತಿ ಎತ್ತ ಸಾಗುತ್ತಿದೆ, ದೇಶದ ಪ್ರಾಚೀನ ಇತಿಹಾಸ ಪರಂಪರೆ ಮರೆಯಾಗುತ್ತಿರುವುದನ್ನು ಕಾಪಾಡಲು ಬಗ್ಗೆ ಸಂಘಟನೆಗಳು ಮುಂದಾಗಬೇಕು. ದೇಶದ ಆದಾಯದ ಹೆಚ್ಚಿನ ಪ್ರಮಾಣ ಅಧಿಕಾರಿಗಳ ಸಂಬಳಕ್ಕೆ ವಿನಿಯೋಗವಾಗುತ್ತಿರುವುದು ವಿಷಾದಕರ. ಜನಪ್ರತಿನಿಧಿಗಳಾದವರು ತಮ್ಮ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸದೆ ಹೋದಲ್ಲಿ ಜನರು ತಿರಸ್ಕರಿಸುತ್ತಾರೆ ಎಂದು ಚಿಕ್ಕಮಗಳೂರು ಕ್ಷೇತ್ರದಲ್ಲಿ ಚುನಾವಣಾ ಭ್ರಷ್ಟಾಚಾರದ ಉದಾಹರಣೆ ನೀಡಿ ಮಾತನಾಡಿದರು.
ಜಿಪಂ ಅಧ್ಯಕ್ಷೆ ರೇಖಾ ಹುಲಿಯಪ್ಪಗೌಡ, ಸದಸ್ಯರಾದ ಕಲ್ಮರುಡಪ್ಪ, ಶಶಿರೇಖಾ ಸುರೇಶ್, ಮಾರ್ಗದ ಮಲ್ಲಿಕಾರ್ಜುನಪ್ಪ, ಕವಿತಾ ಬೆಳ್ಳಿಪ್ರಕಾಶ್, ತರಳಬಾಳು ವೇದಿಕೆ ಅಧ್ಯಕ್ಷೆ ಚನ್ನಮ್ಮ ರಂಗಪ್ಪ, ಡಿಸಿ ಎನ್. ಶೇಖರಪ್ಪ, ಗ್ರಾಮದ ಮುಖಂಡ ಪಿ.ಸಿ. ಗಂಗಾಧರ್, ಮಹಿಳಾ ವೇದಿಕೆಯ ಸದಸ್ಯರು, ಓಂಕಾರಪ್ಪ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement