ಸಮಾಜಮುಖಿ ಕಾರ್ಯದಲ್ಲಿ ವಿದ್ಯಾರ್ಥಿಗಳು ತೊಡಗಲಿ
ನರಸಿಂಹರಾಜಪುರ: ವಿಶ್ವದಲ್ಲಿ ಭಾರತವು ಪ್ರಥಮ ಸ್ಥಾನದಲ್ಲಿ ನಿಲ್ಲಬೇಕಾದರೆ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ಅಗತ್ಯ ಎಂದು ಶಾಸಕ ಡಿ.ಎನ್.ಜೀವರಾಜ್ ತಿಳಿಸಿದರು.
ತಾಲೂಕಿನ ಮುತ್ತಿನಕೊಪ್ಪ ಗ್ರಾಮದಲ್ಲಿ ಬುಧವಾರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಆಶ್ರಯದಲ್ಲಿ 5 ದಿನಗಳ ಕಾಲ ನಡೆಯುವ ರಾಜ್ಯಮಟ್ಟದ ಸಮಾಜ ಕಾರ್ಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ಸಮಾಜ ಸೇವೆ ಮಾಡಲು ಹೊರಟಾಗ ಟೀಕೆಗಳು ಸಾಮಾನ್ಯ. ಅದನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ರಾಜಕಾರಣ ಸಹ ಸಮಾಜ ಸೇವೆಯ ಒಂದು ಭಾಗವೇ ಆಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ರಾಜಕಾರಣವನ್ನು ವ್ಯಾಖ್ಯಾನಿಸುವ ರೀತಿಯೇ ಬೇರೆಯಾಗಿದೆ. ರಾಜಕಾರಣಿಗಳೆಂದರೆ ಕೆಟ್ಟವರು ಎಂದೇ ಬಿಂಬಿಸಲಾಗುತ್ತಿದೆ ಎಂದರು.
ಕುವೆಂಪು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜ ಕಾರ್ಯ ಮತ್ತು ಸಂಶೋಧನಾ ವಿಭಾಗದ ಮುಖ್ಯಸ್ಥ ಡಾ. ಬಿ.ಎಸ್. ಗುಂಜಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಜಿಪಂ ಉಪಾಧ್ಯಕ್ಷೆ ಸುಜಾತಾ, ಮುತ್ತಿನಕೊಪ್ಪ ಸರ್ಕಾರಿ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ನೀಲೇಶ್, ಸಮಾಜ ಕಾರ್ಯವಿಭಾಗದ ಮುಖ್ಯಸ್ಥ ಡಾ. ಕೆ.ಉಮೇಶ್, ಎಸ್.ಡಬ್ಲೂ.ಎಸ್. ಮುಖ್ಯಸ್ಥ ಫಾ.ಮನೋಜ್ ಓ ಪ್ರೇಮ ಮಾತನಾಡಿದರು.
ಅಧ್ಯಕ್ಷತೆಯನ್ನು ಮುತ್ತಿನಕೊಪ್ಪ ಗ್ರಾಪಂ ಅಧ್ಯಕ್ಷೆ ಸುಜಾತ ವಹಿಸಿದ್ದರು. ಸಭೆಯಲ್ಲಿ ಮುತ್ತಿನಕೊಪ್ಪ ಗ್ರಾಪಂ ಸದಸ್ಯರಾದ ಎಸ್.ಗೋಪಾಲ್, ನಹರಾಬಾನು, ಮಾಜಿ ಸೈನಿಕ ಯತಿರಾಜ್, ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ವೆಂಕಟೇಶ್, ಮುಖ್ಯ ಶಿಕ್ಷಕಿ ರಾಧಾ ಉಪಸ್ಥಿತರಿದ್ದರು. ಆರ್.ಅರುಣ ಪ್ರಾರ್ಥಿಸಿದರು. ರಂಜಿತಾ ಸ್ವಾಗತಿಸಿ, ಪ್ರೀದಾ ನಿರೂಪಿಸಿ, ಎಂ.ಅರುಣ ವಂದಿಸಿದರು.