ಅಧ್ಯಯನಕ್ಕೊಂದು ಗುರಿ ಇರಲಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.20
ಉಚಿತ ಸೈಕಲ್ ವಿತರಣೆ, ಕ್ಷೀರ ಭಾಗ್ಯ ಯೋಜನೆ, ಉಚಿತ ಪಠ್ಯ ಪುಸ್ತಕ ವಿತರಣೆಯಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಒಂದು ಗುರಿಯಿಟ್ಟುಕೊಂಡು ಅಧ್ಯಯನ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಗಾಯಿತ್ರಿ ಶಾಂತೇಗೌಡ ಕರೆ ನೀಡಿದ್ದಾರೆ.
ನಗರದ ಬೇಲೂರು ರಸ್ತೆಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲಾ ವಿಭಾಗದಲ್ಲಿ ಗುರುವಾರ ನಡೆದ ತಾಲೂಕು ಮಟ್ಟದ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಳಜಿ ವಹಿಸಿ: ಇದೊಂದು ಸರ್ಕಾರದ ಅತ್ಯುತ್ತಮ ಯೋಜನೆ. ಸರ್ಕಾರದಿಂದ ಕೊಡುವ ಎಲ್ಲಾ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ವಿದ್ಯಾರ್ಥಿಗಳೆಲ್ಲರೂ, ಶಾಲೆಗೆ ಸರಿಯಾದ ವೇಳೆಯಲ್ಲಿ ಬರಬೇಕು. ಇಂದಿನ ವಿದ್ಯಾರ್ಥಿಗಳು ದೃಶ್ಯ ಮಾಧ್ಯಮದ ಆಕರ್ಷಣೆಗೆ ಮಾರು ಹೋಗಿದ್ದು, ಓದಿನ ಬಗ್ಗೆ ಆಸಕ್ತಿ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಪೋಷಕರು ಈ ಬಗ್ಗೆ ಗಮನಹರಿಸಿ, ಮಕ್ಕಳ ಓದಿನ ಕಡೆಗೆ ಕಾಳಜಿ ವಹಿಸಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಿ ಮಾತನಾಡಿದ ಶಾಸಕ ಸಿ.ಟಿ. ರವಿ, ಮಕ್ಕಳು ಸರ್ಕಾರ ನೀಡಿರುವ ಸೈಕಲ್‌ಅನ್ನು ಅನ್ಯ ಉದ್ದೇಶಕ್ಕೆ ಬಳಸಲು ಪೋಷಕರಿಗೆ ನೀಡದೆ, ತಮ್ಮ ಶಿಕ್ಷಣ ಕಲಿಕೆಗೆ ಪೂರಕವಾಗಿ ಬಳಸಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ತರಗತಿಗೆ ಹಾಜರಾಗಬೇಕು ಎಂದು ಸಲಹೆ ನೀಡಿದರು.
ಬಿಳಿ ಹಾಳೆ ಇದ್ದಂತೆ... ತಾಪಂ ಅಧ್ಯಕ್ಷರಾದ ಅಂಬಿಕಾ ಶಿವಕುಮಾರ್ ಮಾತನಾಡಿ, ಮಕ್ಕಳ ಮನಸ್ಸು ಬಿಳಿ ಹಾಳೆ ಇದ್ದಂತೆ. ಭವಿಷ್ಯ ರೂಪಿಸಿಕೊಳ್ಳಲು ಬೇಕಾದ ಉತ್ತಮ ಅಂಶ ಅಳವಡಿಸಿಕೊಂಡು ಸಮಾಜಕ್ಕೆ ಏನಾದರೊಂದು ಕೊಡುಗೆ ನೀಡಿ ಜೀವನ ಸಾರ್ಥಕಪಡಿಸಿಕೊಳ್ಳಬೇಕು ಎಂದರು.
ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳೇ ಸರ್ಕಾರದ ಉನ್ನತ ಹುದ್ದೆಗಳನ್ನು ಹೆಚ್ಚು ಅಲಂಕರಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಕಠಿಣ ಶ್ರಮ ಹಾಕಿದರೆ, ಉತ್ತಮ ಭವಿಷ್ಯ ರೂಪಿಸಿಕೊಳ್ಳಬಹುದು. ಶಾಲಾ ದಿನಗಳನ್ನು ವ್ಯರ್ಥ ಮಾಡದೆ, ಉತ್ತಮ ಕಲಿಕೆಯಿಂದ ಸಮಾಜಕ್ಕೂ ಮತ್ತು ತಮ್ಮ ಪೋಷಕರಿಗೂ ಒಳ್ಳೆಯ ಹೆಸರು ತರಬೇಕು ಎಂದು ಹೇಳಿದರು.
ಶಾಲೆಯ ಉಪ ಪ್ರಾಚಾರ್ಯರಾದ ಡಿ.ಎಸ್. ಪುಟ್ಟಸ್ವಾಮಿಗೌಡ, ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.
ಶಿಕ್ಷಕರಾದ ಎನ್.ಟಿ. ಮಮತ ನಿರೂಪಿಸಿದರು, ಮಂಜುನಾಥ್ ಸ್ವಾಗತಿಸಿದರು, ದೈಹಿಕ ಶಿಕ್ಷಣ ಶಿಕ್ಷಕ ಷಡಕ್ಷರಿ ವಂದಿಸಿದರು.