ಒತ್ತುವರಿ ತೆರವಿಗೆ ನ್ಯಾಯಾಲಯದ ಮೊರೆಗೆ ನಿರ್ಧಾರ
ಬಾಳೆಹೊನ್ನೂರು: ಒತ್ತುವರಿ ತೆರವು ಕುರಿತು ನ್ಯಾಯಾಲಯದ ನಿರ್ಧಾರ ಪ್ರಶ್ನಿಸಲು ಕಾಫಿ ಬೆಳೆಗಾರರ ಸಂಘಟನೆ ನಿರ್ಧರಿಸಿದೆ ಎಂದು ಕರ್ನಾಟಕ ಕಾಫಿ ಬೆಳೆಗಾರರ ಒಕ್ಕೂಟದ ನೂತನ ಅಧ್ಯಕ್ಷ ಬಿ.ಎಸ್. ಜಯರಾಮ್ ಹೇಳಿದ್ದಾರೆ. ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ನಡೆದ ಕಾಫಿ ಬೆಳೆಗಾರರ ಸಭೆಯಲ್ಲಿ ಮಾತನಾಡಿ, ಈ ತೀರ್ಮಾನವನ್ನು ಸಂಘಟನೆಯು ಒಮ್ಮತದಿಂದ ಕೈಗೊಂಡಿದ್ದು, ಸಮಾಜ ಪರಿವರ್ತನಾ ಸಂಸ್ಥೆಯ ಎಸ್.ಆರ್. ಹಿರೇಮಠ್ ಹೈಕೋರ್ಟ್ನಲ್ಲಿ ಒತ್ತುವರಿ ತೆರವು ಕುರಿತು ಸಲ್ಲಿಸಿರುವ ದೂರಿಗೆ ಪ್ರತಿಯಾಗಿ ಒತ್ತುವರಿದಾರರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಲು ಸೂಕ್ತ ಕ್ರಮ ಕೈಗೊಳ್ಳಲು ಸಭೆ ತೀರ್ಮಾನಿಸಿದೆ ಎಂದರು. ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಎಂ.ಕೆ. ಸುಂದರೇಶ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಬುಲ್ ಕಲಾಂ, ಕೆಜಿಎಫ್ ಕಾರ್ಯದರ್ಶಿ ತೀರ್ಥಮಲ್ಲೇಶ್, ಜಿಲ್ಲಾ ಕೆಜಿಎಫ್ ಸಂಘಟನಾ ಕಾರ್ಯದರ್ಶಿ ವಿಜಯ್ ಉಪಸ್ಥಿತರಿದ್ದರು. ಕೊಪ್ಪ, ಶೃಂಗೇರಿ ಹಾಗೂ ನರಸಿಂಹರಾಜಪುರ ತಾಲೂಕಿನ ಕಾಫಿ ಬೆಳೆಗಾರರು ಸಭೆಯಲ್ಲಿ ಭಾಗವಹಿಸಿದ್ದರು.
ಕೆಜೆಪಿ ಪ್ರತಿಭಟನೆ
ತರೀಕೆರೆ: ಅಡಕೆ ನಿಷೇಧ ಪ್ರಸ್ತಾವ ವಿರೋಧಿಸಿ ರೈತರ ಹಿತ ಕಾಪಾಡಬೇಕೆಂದು ಆಗ್ರಹಿಸಿ ಡಿ. 27ರಂದು ಪಟ್ಟಣದ ಎಪಿಎಂಸಿ ಆವರಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಕೆಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಡಿ.ಎಸ್.ಸುರೇಶ್ ತಿಳಿಸಿದ್ದಾರೆ.