ಬಸ್ ನಿಲ್ದಾಣ ಕಾಮಗಾರಿ ಚುರುಕು
ಕ.ಪ್ರ.ವಾರ್ತೆ, ಮೂಡಿಗೆರೆ, ಡಿ.20
ಕಳೆದ ಒಂದು ವರ್ಷದಿಂದ ಆಮೇನಡಿಗೆಯಲ್ಲಿ ಸಾಗುತ್ತಿದ್ದ ಪಟ್ಟಣದ ಬಸ್ ನಿಲ್ದಾಣದ ಕಾಮಗಾರಿ ಕಳೆದ ಎರಡು ದಿನಗಳಿಂದ ಚುರುಕುಗೊಂಡಿದ್ದು, ಶಾಸಕ ಬಿ.ಬಿ. ನಿಂಗಯ್ಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಪ್ರವಾಸಿ ಮಂದಿರದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸ್ ನಿಲ್ದಾಣ ಕಾಮಗಾರಿಗೆ ಗುತ್ತಿಗೆದಾರರು ಕಡಿಮೆ. ಟೆಂಡರ್ ಕರೆದು ಕಾಮಗಾರಿ ನಿರ್ವಹಿಸಲು ಸಾಧ್ಯವಾಗದೆ ಅರ್ಧಕ್ಕೆ ಕೈ ಬಿಟ್ಟಿದ್ದು, ಕಳೆದ ಒಂದು ವಾರದ ಹಿಂದೆ ಅಮರನಾಥ್ ಎಂಬುವವರು ಕಾಮಗಾರಿ ಪೂರ್ಣಗೊಳಿಸಲು ಮುಂದೆ ಬಂದಿದ್ದು, ಕಾಮಗಾರಿ ಚುರುಕುಗೊಂಡಿದೆ ಎಂದರು.
ನಷ್ಟದಲ್ಲಿ ಮೂಡಿಗೆರೆ ಘಟಕ: ಕರಾರಸಂಸ್ಥೆಯ ಜಿಲ್ಲೆಯ ಅಧಿಕಾರಿ ವಾಸು ಮಾತನಾಡಿ, ಬಸ್ ನಿಲ್ದಾಣ ಕಾಮಗಾರಿ 2014ರ ಮೇ ಅಂತ್ಯದೊಳಗೆ ಪೂರ್ಣಗೊಳ್ಳಲಿದೆ. ಮೂಡಿಗೆರೆ ಘಟಕ ನಷ್ಟದಲ್ಲಿರುವ ಬಗ್ಗೆ ಮತ್ತು ಹಳೇ ಬಸ್ಸುಗಳ ಬಗ್ಗೆ ಜೆಡಿಎಸ್ ಮತ್ತು ರೈತ ಮುಖಂಡರು ಕೇಳಿದಾಗ, ನಷ್ಟದಲ್ಲಿರುವುದನ್ನು ಒಪ್ಪಿಕೊಂಡ ಅವರು, ಹೊಗೆ ಉಗುಳುವ ಬಸ್ಸುಗಳು ಮತ್ತು ತಳ್ಳೋಗಾಡಿಗಳಿಗೆ ಒಂದು ವಾರದಲ್ಲಿ ದುರಸ್ತಿಯಾಗಲಿದ್ದು, ಇನ್ನು ಮುಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶಗಳಿಗೆ ಸಮಯಕ್ಕೆ ಸರಿಯಾಗಿ ಬಸ್ಸುಗಳ ಓಡಾಟ ಪ್ರಾರಂಭವಾಗಲಿದೆ ಎಂದು ಭರವಸೆ ನೀಡಿದರು.
ಜೆಡಿಎಸ್ ಮುಖಂಡ ಪುಟ್ಟಸ್ವಾಮಿ ಮಾತನಾಡಿ, ಗ್ರಾಮೀಣ ಪ್ರದೇಶದ ಜನರಿಗೆ ಮತ್ತು
ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ನಿಲುಗಡೆ ಸಹಿತ ವಾಹನಗಳನ್ನು ಬಿಟ್ಟಿದ್ದರೂ ಕೆಲವೊಂದು ಪ್ರದೇಶಗಳಲ್ಲಿ ವಾಹನಗಳನ್ನು ನಿಲ್ಲಿಸಲು ಚಾಲಕರು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.
ಕ್ರಮ ಕೈಗೊಳ್ಳಿ: ಶಾಸಕ ಬಿ.ಬಿ. ನಿಂಗಯ್ಯ ಕರಾರಸಂಸ್ಥೆಯ ಜಿಲ್ಲಾಧಿಕಾರಿಗಳಿಗೆ, ಸಾರ್ವಜನಿಕರ ಅನುಕೂಲಕ್ಕಾಗಿ ಮಾರ್ಗಸೂಚಿಗಳಿಗೆ ಅನುಗುಣವಾಗಿ ವಾಹನಗಳು ಸಂಚರಿಸುವಂತೆ ಸಂಜೆ ಗಂಟೆಯ ನಂತರ ಆಲದೂರು- ಮೂಡಿ ಗೆರೆ ಮಾರ್ಗವಾಗಿ ಬಸ್ಸುಗಳು ಇಲ್ಲದೇ ಇರುವುದರಿಂದ ಶೃಂಗೇರಿ, ಬಾಳೆಹೊನ್ನೂರು ಮತ್ತು ಸುತ್ತಮುತ್ತಲ ಹಳ್ಳಿಗಳಿಂದ ಬರುವ ವಿದ್ಯಾರ್ಥಿಗಳು, ಪ್ರಯಾಣಿಕರು, ಅಧಿಕಾರಿಗಳಿಗೆ ತೊಂದರೆಯಾಗುತ್ತಿದ್ದು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಜಿಲ್ಲಾ ಜೆಡಿಎಸ್ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷ ಅಬ್ದುಲ್ ರೆಹೆಮಾನ್, ವಿಜೇಂದ್ರ, ರತನ್, ಬಣಕಲ್ ಚಂದ್ರೇಗೌಡ, ಗಬ್ಬಳ್ಳೀ ಚಂದ್ರೇಗೌಡ, ರೈತಸಂಘದ ಕುಂದೂರು ಚಂದ್ರೇಗೌಡ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.