ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಬೇಡ: ಸಿರಿಗೆರೆಶ್ರೀ
ಕ.ಪ್ರ.ವಾರ್ತೆ, ಬೀರೂರು, ಡಿ.20
ರಾಜ್ಯ ಸರ್ಕಾರ ಮಂಡಿಸಲು ಅಣಿಯಾಗುತ್ತಿರುವ ನೂತನ ಮೂಢನಂಬಿಕೆ ಪ್ರತಿಬಂಧಕ ವಿಧೇಯಕದಲ್ಲಿ ಯಾವುದೇ ಹುರುಳಿಲ್ಲ. ಈಗಿರುವ ಕಾನೂನೇ ಈಗಿನ ವ್ಯವಸ್ಥೆಗೆ ಸಾಕು ಎಂದು ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಿಸಿದರು.
ಬೀರೂರಿನ ತರಳಬಾಳು ಕಲ್ಯಾಣ ಮಂಟಪದಲ್ಲಿ ನಡೆದ ದಾನಿ ದಿ. ಎಲ್.ಎಂ. ನೀಲಕಂಠಪ್ಪ ಅವರ ಶ್ರದ್ಧಾಂಜಲಿ ಹಾಗೂ ಸಂಸ್ಮರಣಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.
ಯಾವ ನಂಬಿಕೆಯಿಂದ ವ್ಯಕ್ತಿಗೆ ಹಾನಿಯಾಗುತ್ತದೆ, ಸಾಮಾಜಿಕ ವ್ಯವಸ್ಥೆಗೆ ಹಾನಿಯಾಗುತ್ತದೆ, ಅದನ್ನು ನಿಷೇಧಿಸಿದರೆ ಸಾಕು. ಈಗಿರುವ ಕರಡು ಮಸೂದೆ ಮಂಡನೆಯಾದರೆ ರಾಜಕೀಯ ಹಿತೈಷಿಗಳಿಗೆ ಅಧಿಕಾರ ಕೊಡಲು ಅನುಕೂಲವಾಗಬಹುದು. ಕಾನೂನಿಂದ ಮೂಢನಂಬಿಕೆ ಹೋಗಲಾಡಿಸಲು ಸಾಧ್ಯವಿಲ್ಲ. ನಂಬಿಕೆಗಳಿಗೆ ಅದರದ್ದೇ ಆದ ಮಹತ್ವವಿದೆ. ಬದುಕಿಗೆ ಭರವಸೆ ಮತ್ತು ನಂಬಿಕೆ ಮುಖ್ಯ ಬದುಕಿನ ರೀತಿ ಮುಖ್ಯ ಎಂದರು.
ಕೌಟುಂಬಿಕ ಸಂಬಂಧ ಶಿಥಿಲಗೊಳ್ಳುತ್ತಿವೆ. ವ್ಯಾವಹಾರಿಕ ರೂಪ ಪಡೆಯುತ್ತಿವೆ. ಇದು ಬದಲಾಗಿ ಜೀವ ಕೊಟ್ಟವರ ಪಾಲನೆ, ಪೋಷಣೆಗೆ ಆದ್ಯತೆ ನೀಡಿದರೆ ಮೋಹ ಆವರಿಸುವುದಿಲ್ಲ ಎಂದರು.
ಎಲ್.ಎಂ. ನೀಲಕಂಠಪ್ಪ ಅವರ ಬದುಕಿನ ಮೌಲ್ಯಗಳು ಕುಟುಂಬ ಹಾಗೂ ಸಮಾಜದ ಪ್ರಗತಿಗೆ ಅವರು ನೀಡಿದ ಕೊಡುಗೆಗಳು, ಕಾಯಕ ಶ್ರದ್ಧೆ ತಿಳಿಸಿ, ಸಾಧನೆ ಮಾತಾಗಬೇಕೇ ಹೊರತು ಮಾತೇ ಸಾಧನೆ ಆಗಬಾರದು ಎಂಬ ಸಂದೇಶಗಳನ್ನು ಸಾರಿದ ಶರಣರ ಬದುಕು ಸಾರ್ಥಕವಾಗಿತ್ತು ಎಂದರು.
ಮಾಜಿ ಶಾಸಕರಾದ ಕೆ.ಬಿ. ಮಲ್ಲಿಕಾರ್ಜುನ್, ಡಾ. ವೈ.ಸಿ. ವಿಶ್ವನಾಥ್, ದಾನಿ ಪತ್ರೆ ಕೆ.ಸದಾಶಿವನ್, ಡಿಸಿಎನ್ ಶೇಖರಪ್ಪ, ಎಲ್.ಎನ್. ಶಶಿಕುಮಾರ್, ನಂಜುಂಡಸ್ವಾಮಿ, ಡಾ. ಎಚ್.ಎಂ.ಬಸವರಾಜ್, ಸಿ.ಎಂ. ವೀರಭದ್ರಪ್ಪ, ಸಿ.ಆರ್. ಚಂದ್ರಶೇಖರ್, ಸೋಮಶೇಖರ್, ಷಡಾಕ್ಷರಪ್ಪ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಮಂಜುಳಾ ಮಹೇಶ್ ಪ್ರಾರ್ಥಿಸಿದರು. ಎಸ್.ಎಲ್. ಲಕ್ಷ್ಮೀದೇವಿ ಸ್ವಾಗತಿಸಿ, ವಸಂತಕುಮಾರ್ ನಿರೂಪಿಸಿದರು. ಶಿವಲಿಂಗಪ್ಪ ವಂದಿಸಿದರು.