ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

20ನಿಮಿಷ 20ಸುದ್ದಿ

Mainashree
Updated On : 22 Dec 2013, 10:57 am

ಬದುಕು ನಾಟಕೀಯವಾಗಬಾರದು
ಕೊಪ್ಪ: ಪ್ರವಚನಗಳು ಪ್ರಭುದ್ದ ಮನುಷ್ಯನನ್ನಾಗಿ ಪರಿವರ್ತನೆ ಮಾಡುವಂತಹದ್ದು ಆಗಬೇಕು ವಿನಃ ಪ್ರಚಾರದ ಭಾಷಣವಾಗಬಾರದು ಎಂದು ಗೌರಿಗದ್ದೆ  ಸ್ವರ್ಣ ಪೀಠಿಕಾಪುರದ ಅವದೂತ ವಿನಯ್ ಗುರೂಜಿಯವರು ಹೇಳಿದರು. ತಾಲೂಕಿನ ಶಿವಪುರ ಗುರು ದತ್ತಾತ್ರೇಯ ಸೇವಾ ಸಮಿತಿ ಹಮ್ಮಿಕೊಂಡಿದ್ದ ದತ್ತ ಜಯಂತಿಯ ಅಂಗವಾಗಿ ದತ್ತೋತ್ಸವದ ಧಾರ್ಮಿಕ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ನುಡಿದಂತೆ ನಡೆಯುವರ ಸಂಖೆ ಕಡಿಮೆ ಅಗಿದ್ದು, ಮನುಷ್ಯ ತನ್ನ ಸ್ವಂತ ಬುದ್ದಿ ಶಕ್ತಿಯಿಂದ ಬದುಕು ನಡೆಸದೇ ಬೇರೆಯವರನ್ನು ಅನುಕರಣಿಸಿ ಇನ್ನಿತರನ್ನು ಮೇಚ್ಚಿಸುವುದಕ್ಕಾಗಿ ನಾಟಕೀಯ ಜೀವನ ನೆಡೆಸುತ್ತಿರುವುದು ವಿಷಾದನೀಯ ಎಂದರು. ಕಾರ್ಯಕ್ರಮದಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ಹಿಂದೂ ಧರ್ಮ ಎಂದರೇ ಸಂಘಟನೆಯ ಸಂಕೇತವಾಗಿದೆ. ಅದರೆ ಇತ್ತೀಚಿನ ದಿನಗಳಲ್ಲಿ ಹಿಂದೂ ಎಂದರೇ ಜಾತಿವಾದ, ಕೋಮುವಾದಿಗಳೆಂದು ಉಗ್ರಗಾಮಿಗಳನ್ನು ಬೆಂಬಲಿಸುವರು ಬಿಂಬಿಸುತ್ತಿದ್ದಾರೆ ಎಂದರು. ಸಮಿತಿಯಿಂದ ದತ್ತಾತ್ರೇಯ ಸ್ವಾಮಿಯ ಪ್ರತಿಷ್ಠಾಪನೆ, ದತ್ತಹೋಮವನ್ನು ನೇರವೇರಿಸಲಾಯಿತು. ದಿವ್ಯ ಸಾನ್ನಿಧ್ಯವನ್ನು ಕವಲೇದುರ್ಗದ ಕೆಳದಿ ಆಶ್ರಮ ಮಠ ಸಿದ್ಧಲಿಂಗ ಶಿವಾಚಾಶ್ರೀ ವಹಿಸಿದ್ದರು. ಶ್ರೀರಾಮ ಸೇನೆ ರಾಜ್ಯಧ್ಯಕ್ಷ ಮಹೇಶ್ ಕಟ್ಟಿನ, ಪಟ್ಟಣದ ಮಕ್ಕಳ ತಜ್ಞ ರವೀಶ್ ಕಾಮತ್, ಸೂರ್ಯದೇವಸ್ಥಾನದ ಧರ್ಮದರ್ಶಿ ಶ್ರೀಧರ ಶೇಟ್ಟಿ, ದಾನಿಗಳಾದ ಕೌರಿ ಪ್ರಕಾಶ್ ಇತರರಿದ್ದರು.

ವ್ಯಕ್ತಿ ಮೇಲೆ ಹಲ್ಲೆ: ಅಪರಾಧಿಗೆ ಶಿಕ್ಷೆ
ಚಿಕ್ಕಮಗಳೂರು: ಹಳೆ ದ್ವೇಷದಿಂದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಅಪರಾಧಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 4 ವರ್ಷ ಜೈಲು ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದೆ. 2012 ಜನವರಿ 13 ರಂದು ಸಿಂಗಟಗೆರೆ ಠಾಣಾ ವ್ಯಾಪ್ತಿಯ ಆಲಘಟ್ಟ ಗ್ರಾಮದ ಹಾಲಿನ ಡೈರಿಯ ಮುಂಭಾಗ ಸತೀಶನು ಡೈರಿಗೆ ಹಾಲನ್ನು ಹಾಕಲು ಹೋಗುತ್ತಿದ್ದಾಗ ಜಮೀನಿನ ವಿಚಾರದಲ್ಲಿ ಹಳೆಯ ದ್ವೇಷದಿಂದ ಆರೋಪಿ ಎಂ.ಎಂ. ಸ್ವಾಮಿ ಬೈಕಿನಲ್ಲಿ ಬಂದ ಸತೀಶರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿದ್ದರು. ಸಿಂಗಟಗೆರೆ ಪೊಲೀಸರು ಪ್ರಕರಣ ದಾಖಲಿದ್ದರು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್.ಬಿ. ವಸ್ತ್ರಮಠ ಅವರು, ಪ್ರಕರಣ ಸಾಬೀತಾಗಿದ್ದರಿಂದ ಆರೋಪಿ ಎಂ.ಎಂ. ಸ್ವಾಮಿಗೆ 4 ವರ್ಷ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಕೆ.ಕೆ. ಕುಲಕರ್ಣಿ ಪ್ರಕರಣ ನಡೆಸಿದ್ದರು.
ಕಳವಾಗಿದ್ದ ಅಡಕೆ ವಶಕ್ಕೆ: ಶೃಂಗೇರಿ ತಾಲೂಕಿನ ಸಿಂದುವಳ್ಳಿ ರೈತರೊಬ್ಬರ ಅಡಕೆ ತೋಟದಿಂದ ಕಳವಾಗಿದ್ದ 1 ಲಕ್ಷ ಮೌಲ್ಯದ ಅಡಕೆ ಗೊನೆಗಳನ್ನು ಕೊಪ್ಪ ತಾಲೂಕಿನ ಭಂಡಿಗಡಿ ಬಳಿ ವ್ಯಾಪಾರಿಯೊಬ್ಬರಿಂದ ವಶಕ್ಕೆ ಪಡೆದಿದ್ದಾರೆ. ಆರೋಪಿಗಳಾದ ವೆಂಕಟೇಶ, ನಾಗೇಶ್, ಸುಧಾಕರ, ಪ್ರದೀಪ ಭಂಡಿಗಡಿ ಎಂಬವರನ್ನು ವಶಕ್ಕೆ ಪಡೆದಿದ್ದಾರೆ.

ದಿ ವಿಲೇಜ್ ಕ್ಲಬ್‌ಗೆ ಚಾಲನೆ
ಚಿಕ್ಕಮಗಳೂರು: ನಗರದ ಹೊರವಲಯದ ಸೆರಾಯ್ ರೆಸಾರ್ಟ್ ಸಮೀಪ ನಗರದ ವಕೀಲರು ನೂತನವಾಗಿ ಸ್ಥಾಪಿಸಿರುವ ದಿ ವಿಲೇಜ್ ಕ್ಲಬ್‌ಗೆ ರಾಷ್ಟ್ರೀಯ ವಕೀಲರ ಪರಿಷತ್ ಸದಸ್ಯ ಎಸ್.ಎಲ್. ಬೋಜೇಗೌಡ ಶುಕ್ರವಾರ ಚಾಲನೆ ನೀಡಿದರು. ಕ್ಲಬ್ ಉದ್ಘಾಟಿಸಿ ಮಾತನಾಡಿ, ಈ ಕ್ಲಬ್ ಕೇವಲ ಮನರಂಜನೆ ಮತ್ತು ಕ್ರೀಡೆಗೆ ಸೀಮಿತವಾಗದೆ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಲಿದೆ ಮತ್ತು ಸಮಾಜದ ಏಳಿಗೆಗೆ ಶ್ರಮಿಸಲಿದೆ ಎಂದರು. ಆಧುನಿಕ ಜೀವನದ ಒತ್ತಡಗಳ ನಡುವೆ ಕ್ರೀಡೆ ಮತ್ತು ಮನರಂಜನೆ ಇಲ್ಲದಿದ್ದಲ್ಲಿ ಆರೋಗ್ಯ ಹದಗೆಡುತ್ತದೆ. ಹಾಗಾಗಿ ಉತ್ತಮ ಆರೋಗ್ಯ ಹೊಂದಲು ಇಂತಹ ಕ್ಲಬ್‌ಗಳ ಅಗತ್ಯವಿದೆ ಎಂದ ಅವರು, ಕ್ಲಬ್ ಸದಸ್ಯರು ದುಡಿಮೆಯ ಹಿಂದೆ ಬಿದ್ದು ಸಂಸ್ಥೆಯ ಬೆಳವಣಿಗೆಗೆ ಹಿನ್ನಡೆಯಾಗದಂತೆ ನೋಡಿಕೊಂಡು ಉತ್ತಮ ಸಮಾಜ ಸೇವೆ ಮಾಡಬೇಕೆಂದರು. ಕ್ಲಬ್‌ನ ಕಾರ್ಯದರ್ಶಿ ಶರಶ್ಚಂದ್ರ ಮಾತನಾಡಿ, ಕ್ಲಬ್ ಮನರಂಜನೆಗೆ ಸೀಮಿತವಾಗಿರದೆ ಕ್ರೀಡೆಗೆ ಒತ್ತು ನೀಡಿದ್ದು, ಹೊಸ ಪ್ರತಿಭೆಗಳನ್ನು ಸಮಾಜಕ್ಕೆ ನೀಡಲಿದೆ, ಇಲ್ಲಿ ಸ್ನೂಕರ್, ಷಟಲ್ ಬ್ಯಾಡ್ಮಿಂಟನ್, ಜೊತೆಗೆ ಉತ್ತಮ ಗ್ರಂಥಾಲಯದ ವ್ಯವಸ್ಥೆ ಇದ್ದು, ಸದಸ್ಯರು ಇದರ ಸದ್ಬಳಕೆ ಮಾಡಿಕೊಳ್ಳಬೇಕೆಂದರು. ಕ್ಲಬ್‌ನ ಅಧ್ಯಕ್ಷ ಎನ್.ಆರ್. ತೇಜಸ್ವಿ ಸ್ವಾಗತಿಸಿ, ನಿರೂಪಿಸಿದರು. ಬಿ.ಎಸ್. ಪ್ರಶಾಂತ್ ವಂದಿಸಿದರು. ಸಹ ಕಾರ್ಯದರ್ಶಿ ಶಾಂತಿಪ್ರಕಾಶ್, ವಿಜೇಂದ್ರ, ನಂದೀಶ್ ಉಪಸ್ಥಿತರಿದ್ದರು.

ನಿಸ್ವಾರ್ಥದಿಂದ ಸೇವೆ ಸಲ್ಲಿಸಿ
ಚಿಕ್ಕಮಗಳೂರು: ಛಲದೊಂದಿಗೆ ನಿರ್ದಿಷ್ಟ ಗುರಿ ಮುಟ್ಟುವ ಮೂಲಕ ಸಾಧನೆ ಮಾಡಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಮಲೆನಾಡು ವಿದ್ಯಾ ಸಂಸ್ಥೆ ಉಪಾಧ್ಯಕ್ಷ ಡಾ. ಜೆ.ಪಿ. ಕೃಷ್ಣೇಗೌಡ ಸಲಹೆ ಮಾಡಿದರು. ನಗರದ ನರಿಗುಡ್ಡೇನಹಳ್ಳಿಯ ಸೀತಮ್ಮ ಸರಾಫ್ ರಾಮಚಂದ್ರರಾವ್ ಪ್ರಾಯೋಗಿಕ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ಶಾಲಾ ವಾರ್ಷಿಕ ಕ್ರೀಡಾ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್, ಗಾಂಧಿ ಅವರು ನಮ್ಮ ಜತೆ ಇಂದು ಬದುಕಿಲ್ಲದಿದ್ದರೂ ಅವರ ಹೆಸರುಗಳು ಇಂದು ಜೀವಂತವಾಗಿವೆ. ಅದಕ್ಕೆ ಕಾರಣ ಅವರು ನಿಸ್ವಾರ್ಥದಿಂದ ಈ ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಂಡದ್ದು. ಹಾಗೆ ಎಲ್ಲರೂ ನಿಸ್ವಾರ್ಥದಿಂದ ಕೆಲಸ ಮಾಡಿದಲ್ಲಿ ಮಡಿದರು ಜೀವಂತವಾಗಿರಲು ಸಾಧ್ಯ ಎಂದರು. ಗುಂಡು ಎಸೆಯುವ ಮೂಲಕ ಕ್ರೀಡಾಕೂಟ ಉದ್ಘಾಟಿಸಿ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದ ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ ಮಾತನಾಡಿದರು. ವಿದ್ಯಾರ್ಥಿಗಳು ತಂದ ಕ್ರೀಡಾ ಜ್ಯೋತಿಯನ್ನು ಡಾ. ಜೆ.ಪಿ. ಕೃಷ್ಣೇಗೌಡ ಸ್ವೀಕರಿಸಿದರು. ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ಮತ್ತು ಅಕ್ರೋಬ್ಯಾಟ್ ಸಾಮೂಹಿಕ ನೃತ್ಯ ಗಮನ ಸೆಳೆಯಿತು.  ಮುಖ್ಯೋಪಾದ್ಯಾಯ ಸಿ.ಕೆ. ಶ್ರೀಧರ್ ಸ್ವಾಗತಿಸಿದರು. ಶಿಕ್ಷಕ ಸದಾಶಿವಮೂರ್ತಿ ನಿರೂಪಿಸಿದರು, ಬಿ.ಎಂ. ಸುರೇಶ್ ವಂದಿಸಿದರು.


ಜ.10ರಂದು ಜೈಲ್ ಭರೋ
ತರೀಕೆರೆ:  ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರನ್ನು ಕ್ರಮವಾಗಿ 'ಸಿ' ಮತ್ತು 'ಡಿ' ಗ್ರೂಪ್ ನೌಕರರೆಂದು ಕಾಯಂಗೊಳಿಸಿ ಸರ್ಕಾರದ ಎಲ್ಲ ಸೌಲಭ್ಯಗಳನ್ನು ಕೊಡಬೇಕೆಂದು ತರೀಕೆರೆ ಎಐಟಿಯುಸಿ ಅಧ್ಯಕ್ಷೆ ಮತ್ತು ರಾಷ್ಟ್ರೀಯ ಮಂಡಳಿ ವಿಶೇಷ ಆಹ್ವಾನಿತರಾದ ಕೆ.ಸಿ. ವಿಜಯಕುಮಾರಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಶನಿವಾರ ಸುದ್ದಿಗಾರರೊಡನೆ ಮಾತನಾಡಿದ ಅವರು, ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜ.10ರಂದು  ಜೈಲ್ ಭರೋ ಮತ್ತು ಫೆ.10 ರಂದು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ತಿಂಗಳಿಗೆ 12,500 ವೇತನ ನೀಡಬೇಕು. ಸೇವಾ ಅವಧಿಯ ಆಧಾರದಲ್ಲಿ ಹೆಚ್ಚುವರಿಯಾಗಿ 1 ವರ್ಷಕ್ಕೆ 200 ಗಳಂತೆ ಕೊಡಬೇಕು. ಅಂಗನವಾಡಿ ಕೇಂದ್ರಗಳು ಸಂಜೆ 4 ರವರೆಗೆ ನಡೆಸುತ್ತಿರುವುದರಿಂದ ಮಕ್ಕಳಿಗೆ ಕೊಡುವ ಪೌಷ್ಟಿಕ ಆಹಾರದ ಪ್ರಮಾಣ ಹೆಚ್ಚಿಸಬೇಕು ಹಾಗು ಮಕ್ಕಳಿಗೆ 1 ಜೊತೆ ಸಮವಸ್ತ್ರ ಕೊಡಬೇಕು. ಕಾರ್ಯಕರ್ತೆಯರಿಗೆ ಐಸಿಡಿಎಸ್‌ಗೆ ಸಂಬಂಧಿಸಿದ ಕೆಲಸಗಳನ್ನು ಬಿಟ್ಟು ಬೇರೆ ಇಲಾಖೆ ಕೆಲಸಗಳನ್ನು ವಹಿಸಬಾರದು ಎಂದು ಅವರು ತಿಳಿಸಿದರು. ಎಐಟಿಯುಸಿ ಕಾರ್ಯದರ್ಶಿ  ಎನ್ ನಳಿನ, ಖಚಾಂಚಿ ಸರೋಜಮ್ಮ ಭಾಗವಹಿಸಿದ್ದರು.

ಮಾನಸಿಕ ಕಿರುಕುಳವೂ ದೌರ್ಜನ್ಯ
ನರಸಿಂಹರಾಜಪುರ: ಮಹಿಳೆಯರ ಮೇಲೆ ದೌರ್ಜನ್ಯ ಎಂದಾಕ್ಷಣ ಪುರುಷರು ಮಾತ್ರ ನೆನಪಾಗುತ್ತಾರೆ. ಆದರೆ, ಮಹಿಳೆಯರ ಮೇಲೆ ದೌರ್ಜನ್ಯವು ಮತ್ತೊಬ್ಬ ಮಹಿಳೆಯರಿಂದಲೂ ನಡೆಯುತ್ತಿದೆ ಎಂದು ಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಶ್ರೀಪತಿ ಹಳಗುಂದ ಅಭಿಪ್ರಾಯಪಟ್ಟರು. ಶುಕ್ರವಾರ ಮುತ್ತಿನಕೊಪ್ಪ ಗ್ರಾಮದಲ್ಲಿ ನಡೆಯುತ್ತಿರುವ ನ.ರಾ. ಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ರಾಜ್ಯ ಮಟ್ಟದ ಪ್ರಥಮ ಸಮಾಜಕಾರ್ಯ ಶಿಬಿರದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಯವಲ್ಲಿ ಯುವಜನರ ಪಾತ್ರ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಲಿಂಗರಾಜು ವಹಿಸಿದ್ದರು. ಅತಿಥಿಗಳಾಗಿ ಕಲಾವಿದ ಅಭಿನವ ಗಿರಿರಾಜ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಕೆ.ಪಿ. ಸುಜಿತ್, ವಹಾಬ್, ಎಚ್.ಪಿ. ಸುದರ್ಶನ್ ಇದ್ದರು.

ಮಕ್ಕಳ ಪ್ರತಿಭೆಗೆ ಕಲಿಕೋತ್ಸವ ಕನ್ನಡಿ
ನರಸಿಂಹರಾಜಪುರ:  ಶಿಕ್ಷಣ ಇಲಾಖೆಯ ಕಲಿಕೋತ್ಸವ ಕಾರ್ಯಕ್ರಮ ಮಕ್ಕಳ ಕಲಿಕಾ ಪ್ರತಿಭೆ ಅನಾವರಣಕ್ಕೆ ಪೂರಕವಾಗಿದೆ ಎಂದು ಸಂಕದಕುಣಿ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಎನ್.ಪಿ.ಸುಕೇಶ್ ತಿಳಿಸಿದರು. ಇಲ್ಲಿನ ಸಂಕದಕುಣಿ ಸಮೂಹ ಸಂಪನ್ಮೂಲ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಕದಕುಣಿ ಕ್ಲಸ್ಟರ್ ವ್ಯಾಪ್ತಿಯ 13 ಶಾಲೆಗಳ ಕಲಿಕೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಕಲಿಕೋತ್ಸವವು ಶೈಕ್ಷಣಿಕ ಪ್ರಗತಿ ಅವಲೋಕಿಸುವ ವಿಶೇಷ ಕಾರ್ಯಕ್ರಮವಾಗಿದೆ. ಸಂಕದಕುಣಿ ಕ್ಲಸ್ಟರ್ ವ್ಯಾಪ್ತಿಯ 13 ಶಾಲೆಗಳ ಮಕ್ಕಳ ಶೈಕ್ಷಣಿಕ ಸ್ಥಿತಿಗತಿಯ ಪ್ರಗತಿ ಪರಿಶೀಲನೆ ನಡೆಯಲಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಸೀತೂರು ಗ್ರಾಪಂ ಸದಸ್ಯ ಕೆ.ಎಸ್. ಉಮೇಶ್ ಮಾತನಾಡಿ, ಕಲಿಕೋತ್ಸವ ಕಾರ್ಯಕ್ರಮ ಶಿಕ್ಷಣ ಇಲಾಖೆಯ ಹೊಸ ಮೈಲಿಗಲ್ಲಾಗಲಿದೆ. ಈ ಕಾರ್ಯಕ್ರಮದಿಂದ ಪ್ರತಿ ಮಗುವಿಗೂ ಭಾಗವಹಿಸುವ ಅವಕಾಶ ದೊರಕಿದೆ ಎಂದರು. ಸೀತೂರು ಗ್ರಾಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಎಚ್.ಇ.ದಿವಾಕರ ಮಾತನಾಡಿದರು. ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಬಾಲಕೃಷ್ಣ ವಹಿಸಿದ್ದರು. ಅತಿಥಿಗಳಾಗಿ ಸೀತೂರು ಗ್ರಾಪಂ ಸದಸ್ಯೆ ಕು.ಅಶ್ವಿನಿ, ಮಾಜಿ ಸದಸ್ಯೆ ನಳಿನಿ ಚಂದ್ರಪ್ಪ, ಬೆಳ್ಳೂರು ಪ್ರೌಢ ಶಾಲೆ ಮುಖ್ಯ ಶಿಕ್ಷಕ ಬಸವನಗೌಡ, ಎನ್.ಜಿ.ಓ ಸದಸ್ಯ ನಾರಾಯಣ, ಮುಖ್ಯ ಶಿಕ್ಷಕ ಕೆ.ಎಂ. ಸಿದ್ದಪ್ಪ, ಶ್ರೀಮತಿ ಪುಷ್ಪ, ಶಿಕ್ಷಕ ಡಿ.ಸುರೇಶ್, ಬಿಆರ್‌ಸಿ  ಲವಕುಮಾರ್ ಇದ್ದರು.

ಅಕ್ರಮ ಮದ್ಯ ತಡೆಗೆ ಇಲಾಖೆ ನಿರಾಸಕ್ತಿ
ಕೊಪ್ಪ: ತಾಲೂಕಿನ ಊರುಗೂಡಿಗೆ ಪರಿಶಿಷ್ಟ ಕಾಲೋನಿಯಲ್ಲಿ ಅಕ್ರಮ ಮದ್ಯಮಾರಾಟ ಅವ್ಯಹತವಾಗಿ ನಡೆಯುತ್ತಿದ್ದರೂ ಅಬಕಾರಿ ಇಲಾಖೆ ಕಠಿಣ ಕ್ರಮ ಜರುಗಿಸುತ್ತಿಲ್ಲ ಎಂದು ಗ್ರಾಮಸ್ಥರು ಅಕ್ರೋಶ ವ್ಯಕ್ತಪಡಿಸಿದ್ದಾರೆ. ಊರುಗುಡಿಗೆ ಕಾಲೋನಿಗೆ ಶುಕ್ರವಾರ ರಾತ್ರಿ ಅಬಕಾರಿ ಇಲಾಖೆ ಮನೆ ಮೇಲೆ ದಾಳಿ ನಡೆಸಿ ಆಕ್ರಮ ಮದ್ಯ ವಶಪಡಿಸಿಕೊಂಡಿದ್ದರೂ ಪ್ರಕರಣ ದಾಖಲಿಸದೆ ಮೃದುಧೋರಣೆ ಅನುಸರಿಸಿರುದಲ್ಲದೇ, ಅಕ್ರಮ ಮದ್ಯ ಮಾರಾಟ ತಡಗೆ ಸಹಕರಿಸಿದ ದಲಿತಯುವಕನಿಗೆ ಇಲಾಖೆ ಸಿಬ್ಬಂದಿ ಅವ್ಯಾಚ್ಯ ಶಬ್ದದಿಂದ ನಿಂದಿಸಿ ಬೆದರಿಕೆ ಹಾಕಿದ್ದಾರೆಂದು ದೂರಲಾಗಿದೆ. ದಲಿತ ಸಂಘರ್ಷ ಸಮಿತಿ ಮುಖಂಡ ಬೆಳಗೊಳ ಆನಂದ್ ನೇತೃತ್ವದಲ್ಲಿ ಶನಿವಾರ ಅಬಕಾರಿ ಉಪನಿರೀಕ್ಷಕ ದ್ಯಾವೇಗೌಡರನ್ನು ಭೇಟಿ ಮಾಡಿ ಅಕ್ರಮ ಮದ್ಯ ಮಾರಾಟ ತಡೆಗೆ ಒತ್ತಾಯಿಸಿದರು. ಸಿಬ್ಬಂದಿ ಕೊರತೆ ನಡುವೆ ಅಕ್ರಮ ಮದ್ಯ ಮಾರಾಟ ತಡೆಗೆ ಇಲಾಖೆ ಕ್ರಮಕೈಗೊಂಡಿದೆ. ಶುಕ್ರವಾರ ದಾಳಿ ವಶಪಡಿಸಿಕೊಂಡ ಮದ್ಯದ ವಾರಸುದಾರರ ಮೇಲೆ ಪ್ರಕರಣ ದಾಖಲಿಸುವ ಭರವಸೆ ಅಬಕಾರಿ ಉಪ ನಿರೀಕ್ಷಕ ದ್ಯಾವೇಗೌಡ ನೀಡಿದರು. ಪರಿಶಿಷ್ಟ ಕಾಲೋನಿಯ ಯುವಕರಾದ ನಂದೀಶ್, ಅರುಣ್, ನಾಗೇಂದ್ರ, ರಾಮಕೃಷ್ಣ, ಅವಿನಾಶ್ ಇದ್ದರು.

'ನಾಡಿ'ಗೆ ನಾಗರಿಕ ಸನ್ಮಾನ ನಾಳೆ
ಸಾಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ನಗರಸಭೆ, ವಿವಿಧ ಸಂಘಸಂಸ್ಥೆಗಳ ಆಶ್ರಯದಲ್ಲಿ 23ರಂದು ಸಂಜೆ 5ಕ್ಕೆ ಸರ್ಕಾರಿ ನೌಕರರ ಭವನದ ಎದುರಿನ ರಿಲೆಯನ್ಸ್ ಪೆಟ್ರೋಲ್ ಬಂಕ್ ಆವರಣದಲಿ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ನಿಯೋಜಿತರಾಗಿರುವ ಸಾಹಿತಿ ಡಾ. ನಾ. ಡಿಸೋಜರವರಿಗೆ ನಾಗರಿಕ ಸನ್ಮಾನವನ್ನು ಏರ್ಪಡಿಸಲಾಗಿದೆ. ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಡಿಸೋಜ ಅವರನ್ನು ಸನ್ಮಾನಿಸಲಿದ್ದು, ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅಧ್ಯಕ್ಷತೆ ವಹಿಸಲಿದ್ದಾರೆ. ಸಾಹಿತಿ ಡಾ.ಕಾಳೆಗೌಡ ನಾಗವಾರ ಅವರು ಕಾಗೋಡು ಹೋರಾಟದ ಹಿನ್ನೆಲೆ ಇರುವ ನಾ.ಡಿಸೋಜಾ ಅವರ 'ಕೊಳಗ' ಕಾದಂಬರಿಯ 3ನೇ ಮುದ್ರಣವನ್ನು ಬಿಡುಗಡೆ ಮಾಡಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಉಪವಿಭಾಗಾಧಿಕಾರಿ ಡಾ.ಉದಯಕುಮಾರ್ ಶೆಟ್ಟಿ, ತಾಪಂ ಅಧ್ಯಕ್ಷ ಹರೀಶ್ ಘಂಟೆ, ಜಾನಪದ ವಿದ್ವಾಂಸ ಎನ್. ಹುಚ್ಚಪ್ಪ ಮಾಸ್ತರ್, 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಧಾನ ಕಾರ್ಯದರ್ಶಿ ಟಿ.ಪಿ.ರಮೇಶ್, ಜಿಲ್ಲಾ ಕಸಾಪ ಅಧ್ಯಕ್ಷ ಡಿ. ಮಂಜುನಾಥ, ಕಸಾಪ ಅಧ್ಯಕ್ಷ ವಿ.ಟಿ.ಸ್ವಾಮಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹೆಚ್.ಆರ್. ನಾಗಭೂಷಣ್, ಎಸ್. ಬಸವರಾಜ್ ಪಾಲ್ಗೊಳ್ಳುವರು. ಗಾಯಕಿ ವಸುಧಾಶರ್ಮರಿಂದ ಸುಗಮ ಸಂಗೀತಾ ಕಾರ್ಯಕ್ರಮವಿದೆ.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಿ
ಸೊರಬ: ಶಿಕ್ಷಣಕ್ಕೆ ಪೂರಕವಾದ ಸವಲತ್ತುಗಳನ್ನು ಸರ್ಕಾರದಿಂದ ಪಡೆಯುವುದರ ಜೊತೆಗೆ ಪೋಷಕರು ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸುವಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಮಧು ಬಂಗಾರಪ್ಪ ಸಲಹೆ ನೀಡಿದರು. ತಾಲೂಕಿನ ಆನವಟ್ಟಿ ಪದವಿಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಶಿಕ್ಷಣ, ರಸ್ತೆ, ನೀರು ಮುಂತಾದ ಸೌಲಭ್ಯಗಳನ್ನು ಜನತೆಗೆ ಒದಗಿಸಿಕೊಡುವುದರ ಜೊತೆಗೆ ತಾಲೂಕಿನ ಸಮಗ್ರ ಅಭಿವೃದ್ಧಿಯ ಕಡೆ ಗಮನಹರಿಸಿ ಮುಂದಿನ ದಿನಗಳಲ್ಲಿ ಹಂತ- ಹಂತವಾಗಿ ಕಾರ್ಯಗತಗೊಳಿಸಿವುದಾಗಿ ಭರವಸೆ ನೀಡಿದ ಅವರು, ಪೋಷಕರು ಸರ್ಕಾರಿ ಶಾಲೆಗಳ ಆಡಳಿತ ಹಾಗೂ ಶಿಕ್ಷಕರ ಜೊತೆ  ಸಂಪರ್ಕವಿರಿಸಿಕೊಳ್ಳುವುದರ ಜೊತೆಗೆ ಖಾಸಗಿ ಶಾಲೆಗಳ ವ್ಯಾಮೋಹದಿಂದ ದೂರವಿರಬೇಕು ಎಂದರು. ಶಿಕ್ಷಣ ಸಚಿವರು ಸರ್ಕಾರದ ಯೋಜನೆಗಳ ಹೆಸರಿನಲ್ಲಿ ಲೆಕ್ಕ ನೀಡುವುದಷ್ಟೇ ಅಲ್ಲ. ಶಿಕ್ಷಣ ಕ್ಷೇತ್ರಕ್ಕೆ ಅವಶ್ಯವಿರುವ ಸೌಲಭ್ಯಗಳನ್ನು ಹಾಗೂ ಶಿಕ್ಷಕರನ್ನು ನೇಮಕಾತಿ ಮಾಡುವುದರ ಮೂಲಕ ಗುಣಮಟ್ಟದ ಶಿಕ್ಷಣ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಿ ಎಂದು ತಿಳಿಸಿದರು. ಆನವಟ್ಟಿ ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಅಧ್ಯಕ್ಷತೆ ವಹಿಸಿದ್ದರು. ತಾಪಂ ಅಧ್ಯಕ್ಷ ಎಚ್.ಎಂ. ಬಸವಲಿಂಗಪ್ಪ, ಉಪಾಧ್ಯಕ್ಷೆ ನೀಲಮ್ಮ ಸುರೇಶ್, ವಿಶಾಲ ದಯಾನಂದಗೌಡ, ತಾಪಂ ಮಾಜಿ ಅಧ್ಯಕ್ಷ ಎಚ್. ಗಣಪತಿ, ಶ್ರೀನಾಥ ಇತರರಿದ್ದರು.

ಶಿರಾಳಕೊಪ್ಪ: ಕಲಿಕೋತ್ಸವಕ್ಕೆ ಚಾಲನೆ
ಶಿರಾಳಕೊಪ್ಪ:  ಪಠ್ಯ ಚಟುವಟಿಕೆಯಲ್ಲಿ ಕಲಿತ ಕಲಿಕಾಂಶ ತೋರ್ಪಡಿಸುವ ಕಲಿಕೋತ್ಸವ ಎಂಬ ವಿನೂತನ ಕಾರ್ಯಕ್ರಮವನ್ನು ಸರ್ಕಾರ ಜಾರಿಗೆ ತಂದಿದ್ದು, ಆ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ನೀಡಲಾಯಿತು.  ಪಟ್ಟಣದ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಪಟ್ಟಣದ ಗುರುಭವನದಲ್ಲಿ ಜಿಪಂ ಸದಸ್ಯ ರುದ್ರಪ್ಪ ದಾನೇರ್ ಚಾಲನೆ ನೀಡಿದರು. ಇದೊಂದು ವಿನೂತನವಾದ ಕಾರ್ಯಕ್ರಮವಾಗಿದ್ದು, ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಪ್ರತಿಭೆ ಗುರುತಿಸಿದ ಹಾಗೆ ಈ ಕಾರ್ಯಕ್ರಮದಲ್ಲಿ ಕಲಿಕೆಯ ಪ್ರದರ್ಶನ ನಡೆಯುವದು ಮಕ್ಕಳ ಬೆಳವಣಿಗೆಗೆ ಪೂರಕವಾಗಲಿದೆ ಎಂದರು. ಕ್ಲಸ್ಟರ್ ಅಧಿಕಾರಿ ನಾಗೇಂದ್ರಪ್ಪ ರಾಗೇರ್ ಮಾತನಾಡಿ, ಇದೊಂದು ಶಾಲೆಗಳ ಬಹಿರಂಗ ತಪಾಸಣಾ ಕಾರ್ಯಕ್ರಮವಾಗಿದೆ. ಮಕ್ಕಳು ಶಾಲೆಯಲ್ಲಿ ಕಲಿತದ್ದನ್ನು ಸ್ಪರ್ಧಾ ರೂಪದಲ್ಲಿ ತೋರ್ಪಡಿಸುವ ಉಪಯುಕ್ತ ಕಾರ್ಯಕ್ರಮವಾಗಿದೆ ಎಂದರು. ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಪ್ಪ ಓಬಳೇರ್ ಮಾತನಾಡಿದರು. ಕಾರ್ಯಕ್ರಮದಲ್ಲಿ 400ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿ ತಾವು ಕಲಿತ ಕಲಿಕೆಯನ್ನು ಪ್ರದರ್ಶಿಸಿದರು. ಸರ್ಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸೋಮಶೇಖರ, ರಂಗರಾಜು, ಶಾಲಾ ಸಮಿತಿಯ ಉಮೇಶ್, ಮಂಜು ನಾಯಕ್ ಹಾಗೂ ಹಲವಾರು ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.

ಅಂತಿಮ ಪರೀಕ್ಷೆಗೆ ಅವಕಾಶ
ಶಿವಮೊಗ್ಗ: ಕುವೆಂಪು ವಿವಿ ವ್ಯಾಪ್ತಿಯ ಎಲ್ಲಾ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ, ಕಾಲೇಜುಗಳಲ್ಲಿ 2002-03ಕ್ಕೂ ಮೊದಲು ಪ್ರವೇಶ ಪಡೆದ ಎಲ್ಲಾ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳು, 2003-04, ನಂತರ ಪ್ರವೇಶ ಪಡೆದ ಎಲ್ಲಾ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲು ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿರುವ ಹಿನ್ನೆಲೆಯಲ್ಲಿ 2014 ಮೇ, ಜೂನ್ ಮಾಹೆಯಲ್ಲಿ ನಡೆಯುವ ಪದವಿ ಪರೀಕ್ಷೆಗೆ ಅಂತಿಮ ಅವಕಾಶ ಕಲ್ಪಿಸಲಾಗಿದೆ. 2002- 03ಕ್ಕೂ ಮೊದಲು ಪ್ರವೇಶ ಪಡೆದ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ ಮತ್ತಿತರ ನಾನ್ ಸೆಮಿಸ್ಟರ್ ವಿದ್ಯಾರ್ಥಿಗಳು 2002ನೇ ಸಾಲಿನಲ್ಲಿ ಚಾಲ್ತಿಯಲ್ಲಿದ್ದ ಪಠ್ಯಕ್ರಮ ಅಭ್ಯಸಿಸಿ 100 ಅಂಕಗಳ ಸ್ಕೀಂನಲ್ಲಿ ಪರೀಕ್ಷೆ ಬರೆಯುವುದು, 2003-04, ನಂತರ ಪ್ರವೇಶ ಪಡೆದ ಬಿಎ, ಬಿಎಸ್ಸಿ, ಬಿಕಾಂ, ಬಿಬಿಎಂ, ಬಿಸಿಎ ಮತ್ತಿತರ ಸೆಮಿಸ್ಟರ್ ವಿದ್ಯಾರ್ಥಿಗಳು ತಾವು ಅಭ್ಯಾಸ ಮಾಡಿದ ಆಯಾ ಸೆಮಿಸ್ಟರ್‌ನ ಪಠ್ಯಕ್ರಮದಂತೆ 80 ಅಂಕಗಳ ಸ್ಕೀಂನಲ್ಲಿ ಪರೀಕ್ಷೆ ಬರೆಯುವಂತೆ ನಿರ್ಣಯ ಕೈಗೊಳ್ಳಲಾಗಿದೆ. ಕೆಲ ವಿಷಯಗಳಲ್ಲಿ ಅನುತ್ತೀರ್ಣಗೊಂಡ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಮೇ, ಜೂನ್‌ನಲ್ಲಿ ನಡೆಯುವ ರೆಗ್ಯುಲರ್ ಪರೀಕ್ಷೆಯೊಂದಿಗೆ ವಿಶೇಷ ಶುಲ್ಕ 500 ಪಾವತಿಸುವುದರ ಮೂಲಕ ಶಿವಮೊಗ್ಗ ಒಂದನ್ನೇ ಪರೀಕ್ಷಾ ಕೇಂದ್ರವನ್ನಾಗಿಸಿಕೊಂಡು ಪರೀಕ್ಷೆ ಬರೆಯಲು ಅಂತಿಮ ಅವಕಾಶ ನೀಡಲಾಗಿದೆ ಎಂದು ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

ಜ.5ರಿಂದ ಯುವಜನ ಮೇಳ
ಶಿವಮೊಗ್ಗ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಅಬ್ಬಲಗೆರೆ, ಪತಂಜಲಿ ಯುವಕ ಮಂಡಳಿ ಹಾಗೂ ಸ್ಥಳೀಯ ಯುವಕ-ಯುವತಿ ಮಂಡಳಿಗಳ ಸಂಯುಕ್ತಾಶ್ರಯದಲ್ಲಿ 2014ರ ಜನವರಿ 5ರಂದು ಶಿವಮೊಗ್ಗ ತಾಲೂಕು ಅಬ್ಬಲಗೆರೆಯ ಸರ್ಕಾರಿ ಪ್ರೌಢಶಾಲಾ ಆವರಣದ ರಂಗಮಂದಿರದಲ್ಲಿ ಶಿವಮೊಗ್ಗ ತಾಲೂಕು ಮಟ್ಟದ ಯುವಜನ ಮೇಳವನ್ನು ಏರ್ಪಡಿಸಲಾಗಿದೆ. ಸ್ಫರ್ಧಾಳುಗಳಿಗೆ ಉಪಹಾರ ವ್ಯವಸ್ಥೆ ಕಲ್ಪಿಸಲಾಗುವುದು. ತಾಲೂಕು ಮಟ್ಟದ ಯುವಜನ ಮೇಳದಲ್ಲಿ ಭಾಗವಹಿಸುವ ಯುವಕ-ಯುವತಿ ಮಂಡಳಿಗಳಿಗೆ 2014-15ನೇ ಸಾಲಿನಲ್ಲಿ ವಿವಿಧ ಯೋಜನೆಯಡಿ ಅನುದಾನಗಳನ್ನು ನೀಡಲಾಗುವುದು ಹಾಗೂ ತರಬೇತಿ ಶಿಬಿರಗಳಿಗೆ ಕಳುಹಿಸಿಕೊಡಲಾಗುವುದು. ಈ ಯುವಜನ ಮೇಳದಲ್ಲಿ ಭಾಗವಹಿಸಲಿಚ್ಚಿಸುವ ಸ್ಪರ್ಧಿಗಳು ಜನವರಿ 5ರಂದು ಬೆಳಿಗ್ಗೆ 9 ಗಂಟೆಯೊಳಗಾಗಿ ಅಬ್ಬಲಗೆರೆ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಅಥವಾ ಸಂಘಟಕರು-ಮೊ.9731160675 ಇವರಲ್ಲಿ ವರದಿ ಮಾಡಿಕೊಂಡು ಹೆಸರು ನೋಂದಾಯಿಸಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಪತ್ರಕರ್ತ ಮೆಳ್ಳಗಟ್ಟಿಗೆ ಶ್ರದ್ಧಾಂಜಲಿ
ಶಿವಮೊಗ್ಗ: ಹಿರಿಯ ಪತ್ರಕರ್ತ ಪ್ರಮೋದ್ ಮೆಳ್ಳಗಟ್ಟಿ ಅವರನ್ನು ಸ್ಮರಿಸಿ ಗೋಪಾಳ ಪತ್ರಕರ್ತರ ಕಾಲೋನಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.  ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ್ದ ಸಂತಾಪ ಸಭೆಯಲ್ಲಿ ಮಾತನಾಡಿದ ಹಲವರು ಪ್ರಮೋದ್ ವ್ಯಕ್ತಿತ್ವ ಸ್ಮರಿಸಿದರು. ಸಂಘದ ಅಧ್ಯಕ್ಷ ಶೃಂಗೇಶ್, ರಾಜ್ಯ ಕಾರ್ಯದರ್ಶಿ ಎನ್. ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ.ಕೆ. ಸೂರ್ಯನಾರಾಯಣ, ಖಜಾಂಚಿ ಎಸ್. ಚಂದ್ರಕಾಂತ್, ಗೋಪಾಲ ಯಡಗೆರೆ, ನಾಗರಾಜ ನೇರಿಗೆ, ವಿ.ನಾಗರಾಜು, ವಾರ್ತಾಧಿಕಾರಿ ಹಿಮಂತರಾಜು, ಶಾಸಕ ಕೆ.ಬಿ. ಪ್ರಸನ್ನಕುಮಾರ್ ಇತರರು ಇದ್ದರು. ಪ್ರಮೋದ್ ಮೆಳ್ಳಗಟ್ಟಿ ಅವರ ಅಂತ್ಯಕ್ರಿಯೆಯು ಶನಿವಾರ ರೋಟರಿ ಚಿತಾಗಾರದಲ್ಲಿ ಬಂಧುಗಳು ಹಾಗೂ ಆತ್ಮೀಯರ ಸಮ್ಮುಖದಲ್ಲಿ ನಡೆಯಿತು. ಮೆಳ್ಳಗಟ್ಟಿ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಂತಾಪ ಸೂಚಿಸಿದ್ದಾರೆ. ವಿಧಾನಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ, ಸಂಸದ ಬಿ.ವೈ. ರಾಘವೇಂದ್ರ, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಕೆ.ಎಸ್. ಈಶ್ವರಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಎಂ. ಶ್ರೀಕಾಂತ್ ಸಂತಾಪ ಸೂಚಿಸಿದ್ದಾರೆ.

'ಆಪ್ಕೋಸ್ ಸೌಲಭ್ಯ ಪಡೆಯಿರಿ'
ಸಾಗರ:  ಆರ್ಥಿಕವಾಗಿ ಹಿಂದುಳಿದಿರುವ ಪ್ರದೇಶದಲ್ಲಿ ಆಪ್ಕೋಸ್ ತನ್ನ ಶಾಖೆ ಆರಂಭಿಸಿ ಹಿನ್ನೀರಿನ ಜನರಿಗೆ ಸವಲತ್ತು ಕಲ್ಪಿಸಿಕೊಡಲು ಮುಂದಾಗಿರುವುದು ಶ್ಲಾಘನೀಯ ಎಂದು ಸಿಗಂಧೂರು ಶ್ರೀಚೌಡೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ಎಸ್.ಪಿ.ಶೇಷಗಿರಿ ಭಟ್ ಹೇಳಿದರು. ತಾಲೂಕಿನ ತುಮರಿಯಲ್ಲಿ ಅಡಕೆ ಪರಿಷ್ಕರಣೆ ಮತ್ತು ಮಾರಾಟ ಸಹಕಾರ ಸಂಘದ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಹಿಂದುಳಿದ ಪ್ರದೇಶದ ಜನರು ಎಲ್ಲ ಕೆಲಸಗಳಿಗೂ ಸಾಗರವನ್ನೇ ಆಶ್ರಯಿಸಬೇಕಾದ ಸ್ಥಿತಿ ಇತ್ತು. ನೂತನ ಶಾಖೆ ಆರಂಭದಿಂದ ಜನರಿಗೆ ನೆಮ್ಮದಿ ಸಿಕ್ಕಿದಂತಾಗಿದೆ ಎಂದರು. ಆಪ್ಕೋಸ್ ಅಧ್ಯಕ್ಷ ಆರ್.ಎಸ್.ಗಿರಿ ಅಧ್ಯಕ್ಷತೆ ವಹಿಸಿ, ಅಡಕೆ ಬೆಳೆಗಾರರು ಮತ್ತು ಸದಸ್ಯರು ಇನ್ನು ಮುಂದೆ ತಮ್ಮೆಲ್ಲಾ ಅಡಕೆ ವ್ಯವಹಾರವನ್ನು ಈ ಶಾಖೆ ಮೂಲಕ ನಿರ್ವಹಿಸಲು ಅವಕಾಶವಿದೆ. ದೈನಂದಿನ ಹಣಕಾಸಿನ ವ್ಯವಸ್ಥೆ, ರಿಯಾಯಿತಿ ದರದಲ್ಲಿ ಅಡಕೆ ಸಾಗಣೆ, ತ್ವರಿತ ಸಾಲದ ವ್ಯವಸ್ಥೆ ಮಾಡಲಾಗಿದೆ. ತಮ್ಮ ಆರ್ಥಿಕ ಸಂಕಷ್ಟ ಪರಿಹರಿಸಿಕೊಳ್ಳುವ ಜೊತೆಗೆ ಸಂಘದ ಇತರೆ ಸೌಲಭ್ಯ ಪಡೆದುಕೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ಹರೀಶ್ ಗಂಟೆ, ತುಮರಿ ಗ್ರಾಪಂ ಅಧ್ಯಕ್ಷೆ ಜಯಲಕ್ಷ್ಮೀ ಶ್ರೀಪಾದ, ಎಪಿಎಂಸಿ ಉಪಾಧ್ಯಕ್ಷ ಕೆ.ಡಿ. ಜಿನದತ್ತ ಜೈನ್, ಎಚ್.ವೆಂಕಟಗಿರಿ ಭಟ್, ಟಿ.ಎಸ್. ಅಶೋಕ, ಎ.ಆರ್. ಕೃಷ್ಣಮೂರ್ತಿ ತುಮರಿ, ಬಿ.ಎ.ಇಂದೂಧರ ಗೌಡ ಹಾಜರಿದ್ದರು.

ಸಿಟಿ ಬಸ್ ಸಂಚಾರಕ್ಕೆ ಒತ್ತಾಯ
ಶಿವಮೊಗ್ಗ: ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಟಿ.ಕೆ. ಅನಿಲ್ ಕುಮಾರ್ ಅವರು ಪ್ರಗತಿ ಪರಿಶೀಲನೆ ಸಭೆ ನಡೆಸುತ್ತಿದ್ದ ವೇಳೆಯೇ ಜೆಎನ್ ನರ್ಮ್ ಯೋಜನೆಯಡಿ ಸಿಟಿ ಬಸ್ ಸಂಚಾರ ಆರಂಭಿಸುವಂತೆ ಒತ್ತಾಯಿಸಿ ಪ್ರತಿಭಟನಾಕಾರರು ಘೋಷಣೆ ಕೂಗಿ ಗಮನ ಸೆಳೆದರು. ಸಭೆ ನಡೆಯುತ್ತಿದ್ದಾಗ ಪ್ರವೇಶದ್ವಾರದಲ್ಲಿ -ಇಂಕ್ವಿಲಾಬ್ ಜಿಂದಾಬಾದ್- ಘೋಷಣೆ ಕೇಳಿಬಂದಾಗ ಅನಿಲ್ ಕುಮಾರ್ ಅವರು ಜಿ.ಪಂ. ಉಪಕಾರ್ಯದರ್ಶಿ ಗೋಪಾಲ್ ಅವರಿಗೆ ಏನೆಂದು ನೋಡುವಂತೆ ಸೂಚಿಸಿದರು. ಆಗ ಪ್ರತಿಭಟನಾಕಾರರು ಅನಿಲ್ ಕುಮಾರ್ ಅವರಿಗೇ ಮನವಿ ಸಲ್ಲಿಸುವುದಾಗಿ ಹೇಳಿದಾಗ ಸ್ವತಃ ಅವರೇ ಎದ್ದು ಬಂದು ಮನವಿ ಸ್ವೀಕರಿಸಿದರು ಜೆಎನ್ ನರ್ಮ್ ಯೋಜನೆ ಕಾರ್ಯರೂಪಕ್ಕೆ ತರಲು ಕೇಂದ್ರ ಸರ್ಕಾರವು 2 ತಿಂಗಳ ಕಾಲಮಿತಿ ವಿಧಿಸಿ ಅನುದಾನ ನೀಡಿದೆ. ಈ ಯೋಜನೆಗೆ ಬಸ್ ಟರ್ಮಿನಲ್, ಡಿಪೋ ಮತ್ತು ವರ್ಕ್ ಶಾಪ್‌ಗೆ ಜಾಗ ಗುರುತಿಸುವುದು ಜಿಲ್ಲಾಡಳಿತದ ಹೊಣೆ. ಆದರೆ, ಜಿಲ್ಲಾಡಳಿತ ಮೌನ ತಾಳಿದೆ ಎಂಬುದು ಪ್ರತಿಭಟನಾಕಾರರ ಆಕ್ರೋಶವಾಗಿತ್ತು. ಮನವಿ ಸ್ವೀಕರಿಸಿದ ಟಿ.ಕೆ.ಅನಿಲ್ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಜಿ. ಮಾದಪ್ಪ, ಅಣ್ಣಾ ಹಜಾರೆ ಹೋರಾಟ ಸಮಿತಿಯ ಟಿ.ಎಂ. ಅಶೋಕ್ ಯಾದವ್, ಕಲ್ಲೂರು ಮೇಘರಾಜ್, ಮುಂಜುಳಾದೇವಿ, ಲಿಂಬೇಹಣ್ಣು ಮಂಜುನಾಥ್, ಬಿ. ಜನಮೇಜಿರಾವ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement