ಅಭಿವೃದ್ಧಿಗೆ ಅಡ್ಡಿಪಡಿಸಿಲ್ಲ: ಗಾಯತ್ರಿ
ಕ.ಪ್ರ.ವಾರ್ತೆ ಚಿಕ್ಕಮಗಳೂರು ಡಿ. 21
ಅಭಿವೃದ್ಧಿಗೆ ಅಡ್ಡಗಾಲಾಗಿದ್ದಾರೆ ಎಂದು ತಮ್ಮ ವಿರುದ್ಧ ಕೆಲವರು ಆರೋಪ ಮಾಡುತ್ತಿದ್ದಾರೆ. ಯಾವುದೇ ಅಭಿವೃದ್ಧಿಗೆ ತಾವು ಅಡ್ಡಗಾಲಾಗಿಲ್ಲ ಎಂದು ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ ಹೇಳಿದ್ದಾರೆ.
ತಾಲೂಕಿನ ಕೊಳಗಾಮೆ ಗ್ರಾಮ ಪಂಚಾಯಿತಿಯಲ್ಲಿ ಇತ್ತೀಚೆಗೆ ಜನರ ಸಮಸ್ಯೆ ಆಲಿಸುವ ಸಭೆಯಲ್ಲಿ ಅಧ್ಯಕ್ಷೆ ರಮಣಿ, ಉಪಾಧ್ಯಕ್ಷ ರವಿ ಅವರಿಂದ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಮನವಿ ಸ್ವೀಕರಿಸಿ, ಶಿವಾನಂದ್ ಮತ್ತು ಕೆಲವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಾರ್ವಜನಿಕರ ಹಣ, ಸರ್ಕಾರದ ಹಣ ಯಾವುದೇ ಸಂದರ್ಭದಲ್ಲೂ ಪೋಲಾಗಬಾರದು, ಲೂಟಿಯಾಗಬಾರದು ಎಂಬ ಕಾರಣದಿಂದ ಕೆಲ ಕಠಿಣ ಕ್ರಮಗಳಿಗೆ ಅಧಿಕಾರಿಗಳಿಗೆ ಸೂಚಿಸುತ್ತಿರುವುದು ಕೆಲವರಿಗೆ ನುಂಗಲಾರದ ತುತ್ತಿನಂತಾಗಿದೆ. ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ವೋಟಿನ ಬೇಟೆಗಾಗಿ ಈ ರೀತಿ ತಂತ್ರಗಾರಿಕೆಯ ಆರೋಪವನ್ನು ಎದುರಾಳಿಗಳು ಮಾಡುತ್ತಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡರು.
ಹಸ್ತಕ್ಷೇಪವಿಲ್ಲ: ಯಾವ ಅಭಿವೃದ್ಧಿ ಕಾಮಗಾರಿಗೆ ಅಡ್ಡಿಪಡಿಸಿದ್ದೇನೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಲಿ. ಯಾವುದೇ ಸಂದರ್ಭದಲ್ಲೂ ತಾವು ಅಭಿವೃದ್ಧಿಗೆ ಹಸ್ತಕ್ಷೇಪ ಮಾಡಿಲ್ಲ ಎಂದು ಸ್ಪಷ್ಟಡಿಸಿದ ಅವರು, ಯಾವುದೇ ಊಹಾಪೋಹಗಳಿಗೆ, ಅಪಪ್ರಚಾರಗಳಿಗೆ ಸೊಪ್ಪು ಹಾಕುವುದಿಲ್ಲ. ಅಭಿವೃದ್ಧಿಪರ ಸಲಹೆ ಸ್ವೀಕರಿಸಿ ಅನುಷ್ಠಾನಕ್ಕೆ ತರುವುದಾಗಿ ಹೇಳಿದರು.
ಚಿಕ್ಕಮಗಳೂರು ನಗರದ ಎಂಜಿ ರಸ್ತೆ ಮತ್ತು ಅಂಬೇಡ್ಕರ್ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಹೆಚ್ಚುವರಿ ಮೊತ್ತಕ್ಕೆ ಟೆಂಡರ್ ಹಾಕಿದ್ದು, ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪರಿಶೀಲಿಸುವಂತೆ ಲೋಕೋಪಯೋಗಿ ಇಲಾಖೆ ಸಚಿವರಿಗೆ ಪತ್ರ ಬರೆಯಲಾಗಿತ್ತು. ಸರ್ಕಾರದಲ್ಲಿ ಉನ್ನತ ಅಧಿಕಾರಿಗಳು ಪರಿಶೀಲಿಸಿದ ನಂತರ 4.5 ಕೋಟಿ ಉಳಿತಾಯ ಸರ್ಕಾರಕ್ಕಾಗಿದೆ ಎಂದು ಮಾಹಿತಿ ನೀಡಿದ ಅವರು, ಈ ಪ್ರದೇಶದಲ್ಲಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಬಗ್ಗೆ ಭೂ ಸೇನಾ ನಿಗಮದ ಎಂಜಿನಿಯರ್‌ಗಳಿಂದ ಫೋನ್ ಮೂಲಕ ಮಾಹಿತಿಗಳನ್ನು ಸಭೆಯಲ್ಲೆ ಪಡೆದುಕೊಳ್ಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದರು.
ಗೊಂದಲ ಸೃಷ್ಟಿ ಬೇಡ: ಹುಲಿ ಸಂರಕ್ಷಣೆ ಯೋಜನೆ ಅನುಷ್ಠಾನಕ್ಕೆ ತರುತ್ತಿರುವುದರಿಂದ ಅರಣ್ಯ ಇಲಾಖೆ ಗ್ರಾಮಗಳನ್ನು ತೆರವುಗೊಳಿಸುತ್ತದೆ ಎಂಬ ಆತಂಕ ಜನರಲ್ಲಿ ಮನೆ ಮಾಡಿದೆ. ತೆರವುಗೊಳಿಸುವುದಾದರೆ ತೆರವುಗೊಳಿಸಲಿ. ಅನಗತ್ಯವಾಗಿ ಗೊಂದಲ, ಆತಂಕ ಸೃಷ್ಟಿಸುವುದು ಬೇಡ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡಿದ್ದಕ್ಕೆ ಉತ್ತರಿಸಿದ ಗಾಯತ್ರಿ ಶಾಂತೇಗೌಡ, ಜಿಲ್ಲೆಯಿಂದ ತೆರಳಿದ್ದ ನಿಯೋಗ ಮುಖ್ಯಮಂತ್ರಿಗೆ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ತೆರವುಗೊಳಿಸುವ ಕುರಿತು ಜನರು ಆತಂಕಪಡುವ ಅಗತ್ಯ ಇಲ್ಲ. ಈ ಕುರಿತು ಉಸ್ತುವಾರಿ ಸಚಿವರು, ಸಂಸದರೊಂದಿಗೆ ಮಾತುಕತೆ ನಡೆಸೋಣ ಎಂದು ಹೇಳಿದರು.
ಜಾಗರ ನಾಡಕಚೇರಿಯಲ್ಲಿ ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಮಂಜೂರಾತಿ ಪತ್ರ ವಿತರಿಸುವ ಕುರಿತು ಸ್ವಲ್ಪ ಸಮಯ ಗೊಂದಲ ನಿರ್ಮಾಣಗೊಂಡಿತ್ತು. ವಿಧಾನ ಪರಿಷತ್ ಸದಸ್ಯರ ಒತ್ತಾಯದಂತೆ ಕಚೇರಿಗೆ ಆಗಮಿಸಿದ್ದ ತಹಸೀಲ್ದಾರ್ ಶಿವೇಗೌಡ ಮಾಹಿತಿ ನೀಡುವ ಮೂಲಕ ಗೊಂದಲಗಳಿಗೆ ತೆರೆ ಎಳೆದರು. ರವಿನ್ಯೂ ಇನ್ಸ್‌ಪೆಕ್ಟರ್ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಚರ್ಚ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಾದರ್ ಮಾರ್ಷಲ್ ಪಿಂಟೋ ಅವರು ಮನವಿ ನೀಡಿ, ಧಾರ್ಮಿಕ ಕೇಂದ್ರಕ್ಕೆ ಹೊಂದಿಕೊಂಡಂತೆ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು. ಧಾರ್ಮಿಕ ಕೇಂದ್ರದಲ್ಲಿ ನೀರಿನ ಕೊರತೆ ತೀವ್ರವಾಗಿದ್ದು, ಪರಿಹರಿಸಲು ಒಂದು ಬೋರ್‌ವೆಲ್ ಮಂಜೂರು ಮಾಡಿಸಿಕೊಡಬೇಕು ಎಂದು ಒತ್ತಾಯಿಸಿದರು. ಮನವಿಗೆ ಗಾಯತ್ರಿ ಶಾಂತೇಗೌಡ ಉತ್ತರಿಸಿ, ಬಿಸಿಎಂ ಇಲಾಖೆಯಿಂದ ಕೊಳವೆ ಬಾವಿ ಮಂಜೂರು ಮಾಡಿಸುವುದರ ಜತೆಗೆ ನಿವೇಶನದ ಬಗೆ ದಾಖಲೆ ಸಿದ್ಧಪಡಿಸಿ ಕೊಟ್ಟರೆ ಸಮುದಾಯ ಭವನಕ್ಕೆ ಅನುದಾನ ಕೊಡಿಸಲಾಗುತ್ತದೆ. ಜೊತೆಗೆ ತಮ್ಮ ಅನುದಾನ ಕೊಡುವುದಾಗಿ ಭರವಸೆ ನೀಡಿದರು. ಜೊಸೆಫ್ ನಿರೂಪಿಸಿದರು.
ಮಹಿಳಾ ಕಾಂಗ್ರೆಸ್ ನಗರ ಅಧ್ಯಕ್ಷೆ ವಸಂತ ರಾಮಚಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುಳ್ಳನ್, ನಗರಸಭೆ ಸದಸ್ಯ ಹಿರೇಮಗಳೂರು ಪುಟ್ಟಸ್ವಾಮಿ, ಶಿರವಾಸೆ ಗ್ರಾಪಂ ಮಾಜಿ ಅಧ್ಯಕ್ಷೆ ಪ್ರೇಮಾಕ್ಷಿ, ಮುಖಂಡ ಆನಂದ್, ವಿಜಯ್ ಹಾಜರಿದ್ದರು.