ಶೋಷಿತರ ಧ್ವನಿಯಾಗಿದ್ದ ನಾರಾಯಣಗುರುಗಳು
ಕ.ಪ್ರ.ವಾರ್ತೆ ಶೃಂಗೇರಿ ಡಿ. 21
ದೇಶದಲ್ಲಿ ರಕ್ತರಹಿತ ಕ್ರಾಂತಿಯ ಮೂಲಕ ಸಾಮಾಜಿಕ ಬದಲಾವಣೆ ಮಾಡುವಲ್ಲಿ ಯಶಸ್ವಿಯಾದವರೆಂದರೆ ಶ್ರೀ ನಾರಾಯಣ ಗುರುಗಳು. ಇವರು ಯಾವುದೇ ರಕ್ತಪಾತವಿಲ್ಲದೇ ಸಾಮಾಜಿಕ ಸಮಾನತೆಗಾಗಿ ಹೋರಾಡಿ ಕೆಳವರ್ಗದ ಜನರಿಗೆ ನ್ಯಾಯದೊರಕಿಸಿಕೊಡುವಲ್ಲಿ ತಮ್ಮ ಜೀವನವನ್ನೇ ಮುಡುಪಾಗಿಟ್ಟಿದ್ದರು ಎಂದು ಮಾಜಿ ಸಚಿವ ಕೋಟ ಶ್ರೀನಿವಾಸಪೂಜಾರಿ ಅಭಿಪ್ರಾಯಪಟ್ಟರು.
ಪಟ್ಟಣದ ಡಾ.ಗೌರೀಶಂಕರ ಸಭಾಂಗಣದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣಗುರುಗಳ 159 ನೇ ಜನ್ಮದಿನಾಚಾರಣೆ ಹಾಗೂ ಬ್ರಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಮಾಜ ತಾಲೂಕು ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಶೋಷಿತರ ಧ್ವನಿ: ಕೇವಲ ಧಾರ್ಮಿಕ ಕ್ಷೇತ್ರಕ್ಕೆ ಸೀಮಿತಗೊಳ್ಳದೇ ಶಿಕ್ಷಣ,ಸಾಮಾಜಿಕ ಕ್ಷೇತ್ರಗಳಲ್ಲಿಯೂ ಕಾಳಜಿ ವಹಿಸಿ ನೊಂದವರ, ಶೋಷಿತರ,ಅಸಹಾಯಕರ ದ್ವನಿಯಾಗಿ ಹೋರಾಡಿದರು. ಶೈಕ್ಷಣಿಕ ಕ್ಷೇತ್ರದಲ್ಲಿ ಇವರ ಸಾಧನೆ ಮಹತ್ತರ. ಹಸಿದವರ,ನೋವುಂಡವರ ಮನಸ್ಥಿತಿಯನ್ನು ಅರ್ಥೈಸಿಕೊಂಡಿದ್ದರು ಎಂದರು.
ಮಾಜಿ ಸಚಿವ ಹಾಗೂ ಶಾಸಕ ಡಿ.ಎನ್.ಜೀವರಾಜ್ ಮಾತನಾಡಿ, ಸಂಘಟನೆಗಳಲ್ಲಿ ರಾಜಕಾರಣ ಇರಬಾರದು. ಶ್ರೀ ನಾರಾಯಣಗುರುಗಳು ಶೋಷಿತ,ಕೆಳವರ್ಗದ ಜನರನ್ನು ಮೇಲೆತ್ತುವ ಕೆಲಸ ಮಾಡಬೇಕು. ನಾವುಗಳು ಕೂಡ ಅವರ ಧೋರಣೆಗಳನ್ನು ಅಳವಡಿಸಿಕೊಂಡು ಕೆಳವರ್ಗದ ಜನರ ನೋವು ನಲಿವುಗಳಿಗೆ ಸ್ಪಂದಿಸಿದರೆ ಮಾತ್ರ ಅವರಿಗೆ ಗೌರವ ನೀಡಿದಂತಾಗುತ್ತದೆ ಎಂದರು.
ಭಾವಚಿತ್ರಕ್ಕೆ ಪುಷ್ಪಾರ್ಚನೆ: ರಾಷ್ಟ್ರೀಯ ಬಿಲ್ಲವ ಮಹಾಮಂಡಳಿಯ ಅಧ್ಯಕ್ಷ ಜಯ ಸಿ ಸುವರ್ಣ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶ್ರೀ ನಾರಯಣಗುರುಗಳ ಜನ್ಮದಿನಾಚಾರಣೆ ಅಂಗವಾಗಿ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಮುಖ್ಯ ಅತಿಥಿಗಳಾಗಿ ಡಿ.ಡಿ.ಕಟ್ಟೇಮಾರ್,ಹೆಚ್.ಎಂ.ಸತೀಶ್, ಗಿರಿಯಪ್ಪಪೂಜಾರಿ, ಎಂ.ಎಸ್.ರಂಗನಾಥ್, ಟಿ.ಡಿ.ರಾಜೇಗೌಡ, ಮಮತಾ ಉದಯ್ ಕುಮಾರ್, ಗೀತಾ ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕು ಬಿಲ್ಲವ ಸಮಾಜದ ಅಧ್ಯಕ್ಷ ಮಹಾಬಲಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಟಿ.ಎಲ್.ಉಮೇಶ್ ಪ್ರಾಸ್ತಾವಿಕ ಮಾತನಾಡಿದರು. ಶಿವಕುಮಾರ್ ನಿರೂಪಿಸಿದರು.