ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಜನಪ್ರತಿನಿಧಿಗಳ ಸ್ವಪ್ರತಿಷ್ಠೆ, ಕಾಮಗಾರಿಗೆ ಹಿನ್ನಡೆ

Lingaraj Badiger
Updated On : 23 Dec 2013, 12:08 pm

ಚಿಕ್ಕಮಗಳೂರು: ಜಿಲ್ಲಾ ಕೇಂದ್ರದಲ್ಲಿ ಜನಪ್ರತಿನಿಧಿಗಳ ಸ್ವಪ್ರತಿಷ್ಠೆಯಿಂದ ಅಭಿವೃದ್ಧಿ ಕಾಮಗಾರಿಗಳು ನೆನಗುದಿಗೆ ಬಿದ್ದಿವೆ.
ಇಲ್ಲಿ ಪ್ರಶ್ನೆ ಮಾಡುವ ಜನರಿದ್ದಾರೆ, ಆದರೆ, ಕೇಳುವವರಿಲ್ಲ, ಜನಪ್ರತಿನಿಧಿಗಳು ಜವಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅಧಿಕಾರಿಗಳು ಅಸಹಾಯಕರಾಗಿದ್ದಾರೆ.
 ಕಳೆದ 10 ತಿಂಗಳಿಂದ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿಗಳು ಪ್ರಾರಂಭಗೊಂಡಿಲ್ಲ. ಮಳೆಗಾಲಕ್ಕೆ ಮುನ್ನ ನಗರದಲ್ಲಿ ನಡೆದ ಒಳಚರಂಡಿ ಕಾಮಗಾರಿಗಳಿಂದಾಗಿ ಬಹುತೇಕ ಎಲ್ಲಾ ರಸ್ತೆಗಳು ಹಾಳಾಗಿವೆ. ಈ ಕಾಮಗಾರಿಯೂ ಕೂಡ ವೈಜ್ಞಾನಿಕವಾಗಿ ನಡೆದಿಲ್ಲ. ಹಲವು ಕಡೆಗಳಲ್ಲಿ ಮ್ಯಾನ್ ಹೋಲ್‌ಗಳು ರಸ್ತೆಗಳಿಂದ ಸುಮಾರು ಅರ್ಧ ಅಡಿಗಳಷ್ಟು ಮೇಲೆ ಎದ್ದು ನಿಂತಿವೆ. ವಾಹನ ಚಾಲಕರು ವಿಧಿ ಇಲ್ಲದೆ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
ನಾಳೆ ಚಾಲನೆ: ನಂತರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಅವರು ಅಧಿಕಾರಿಗಳ ಸಭೆಯನ್ನು ನಡೆಸಿ ಈ ಯೋಜನೆಯನ್ನು ಪರಿಶೀಲನೆ ನಡೆಸಿ ಕಾರ್ಯಾದೇಶ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು. ಬಳಿಕ ಜಿಲ್ಲಾಧಿಕಾರಿಗಳು ಕಾರ್ಯಾದೇಶ ನೀಡಿದ್ದರೂ ಸಹ ಗುತ್ತಿಗೆದಾರರು ಕಾಮಗಾರಿಯನ್ನು ಕೈಗೆತ್ತಿಕೊಂಡಿರಲಿಲ್ಲ. ಇದೀಗ ಕಾಮಗಾರಿ ಚಾಲನೆಗೆ ಡಿ. 24 ರಂದು ಕಾಲ ಕೂಡಿ ಬಂದಿದೆ.
 ಇದು, ನಗರೋತ್ಥಾನದ ಕಥೆಯಾಗಿದ್ದರೆ, ಇನ್ನು ಕೆಎಂಆರ್‌ಪಿ ಕಾಮಗಾರಿಯೂ ಸಹ ನೆನಗುದಿಗೆ ಬಿದ್ದಿದೆ. ಇದು, ಗುತ್ತಿಗೆದಾರರ ತಪ್ಪೋ, ಅಥವಾ ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರನ್ನು ಹದ್ದುಬಸ್ತಿನಲ್ಲಿ ಇಡದೇ ಇರುವುದು ತಪ್ಪೋ, ಒಟ್ಟಿನಲ್ಲಿ ಜನರಿಗೆ ಮಾತ್ರ ಕಿರಿ ಕಿರಿ ತಪ್ಪಿಲ್ಲ.
ಕೆಂಪನಹಳ್ಳಿ ರಸ್ತೆ: ನಗರದ ಕೆಂಪನಹಳ್ಳಿ ರಸ್ತೆಯನ್ನು ಕೆಎಂಆರ್‌ಪಿ ಯೋಜನೆಯಡಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಈ ರಸ್ತೆಯಲ್ಲಿ ಓಡಾಡುತ್ತಿರುವ ಜನರಿಗೆ ಇದೊಂದು ಶಾಪಗ್ರಸ್ತ ರಸ್ತೆಯಾಗಿದೆ ಎಂದರೆ ತಪ್ಪಾಗಲಾರದು.
 ಕಾರಣ, ಈ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. ತಿಂಗಳಿಗೊಮ್ಮೆ ಈ ರಸ್ತೆಯ ಕಾಮಗಾರಿಯನ್ನು ಮಾಡಲಾಗುತ್ತಿದೆ. ಒಮ್ಮೆ ಮಣ್ಣು ಹಾಕಿ ಸಮತಟ್ಟು ಮಾಡಿದರೆ, ಇನ್ನೊಮ್ಮೆ ಜಲ್ಲಿ ಕಲ್ಲು ಹಾಕಿ ಬಿಡಲಾಗುತ್ತಿದೆ. ಕಳೆದ 20 ದಿನಗಳ ಹಿಂದೆ ಈ ರಸ್ತೆಗೆ ಜಲ್ಲಿ ಕಲ್ಲು ಹಾಕಿ ಜಲ್ಲಿ ಪೌಡರ್ ಹಾಕಲಾಗಿತ್ತು. ಇಷ್ಟಕ್ಕೆ ಗುತ್ತಿಗೆದಾರರು ಸುಮ್ಮನಾಗಿದ್ದರ ಪರಿಣಾಮ ಈ ರಸ್ತೆಯಲ್ಲಿ ಧೂಳು ಏಳುತ್ತಿದೆ. ಯಾವುದೇ ಒಂದು ವಾಹನ ಸಂಚರಿಸಿದರೆ, ಅದರ ಹಿಂದೆ ಹೋಗಲಾರದಷ್ಟು ಧೂಳು ಏಳುತ್ತಿದೆ. ಇನ್ನು ಇಲ್ಲಿಗೆ ಹಾಕಿರುವ ಕಲ್ಲುಗಳು ಮೇಲೆದಿದ್ದು, ದ್ವಿಚಕ್ರ ವಾಹನ ಚಾಲಕರು ಭಯದಿಂದಲೇ ಚಾಲನೆ ಮಾಡಿಕೊಂಡು ಮುಂದೆ ಸಾಗುತ್ತಿದ್ದಾರೆ.
ಒಬ್ಬರಿಗೇ ಗುತ್ತಿಗೆ: ಈ ರಸ್ತೆ ಕಾಮಗಾರಿ ಮಾಡುತ್ತಿರುವ ಗುತ್ತಿಗೆದಾರರು ಜಿಲ್ಲೆಯ ಕೆಲವು ತಾಲೂಕು ಕೇಂದ್ರಗಳಲ್ಲಿ ನಗರೋತ್ಥಾನ ಕಾಮಗಾರಿಯನ್ನು ಸಹ ತೆಗೆದುಕೊಂಡಿದ್ದಾರೆ. ಅಲ್ಲಿಗೆ ಅವರು ಹೆಚ್ಚು ಒತ್ತುಕೊಟ್ಟಿದ್ದರ ಪರಿಣಾಮ ಕೆಂಪನಹಳ್ಳಿ ರಸ್ತೆಯ ಕಾಮಗಾರಿ ನೆನಗುದಿಗೆ ಬಿದ್ದಿದೆ. ಇಡೀ ಜಿಲ್ಲೆಯ ಡಾಂಬರೀಕರಣದ ಕಾಮಗಾರಿಯನ್ನು ಒಬ್ಬರೆ ಗುತ್ತಿಗೆದಾರರು ಮಾಡುತ್ತಿರುವುದು ಕಾಮಗಾರಿಯ ವಿಳಂಬಕ್ಕೆ ಕಾರಣವಾಗಿದೆ.
 ಇದರ ಜತೆಗೆ ಈ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳ ಸ್ಥಳಾಂತರ ಕೆಲಸವು ಸಹ ನಡೆದಿಲ್ಲ, ಇಲ್ಲಿನ ಸೇತುವೆ ನಿರ್ಮಾಣದ ಕಾಮಗಾರಿಯೂ ಬಾಕಿ ಇದೆ. ಈ ಎರಡೂ ಕೆಲಸಗಳು ಆಗದೆ ರಸ್ತೆಗೆ ಡಾಂಬರ್ ಹಾಕುವಂತಿಲ್ಲ. ಒಟ್ಟಾರೆ, ಕೆಂಪನಹಳ್ಳಿಯಿಂದ ಓಡಾಡುವ ಜನರಿಗೆ ಈ ರಸ್ತೆ ಸಮಸ್ಯೆಯಾಗಿ ಕಾಡಿದೆ.
-ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement