ನೆಮ್ಮದಿ ಬದುಕಿಗೆ ಕಾನೂನು ಅಗತ್ಯ
ಕ.ಪ್ರ.ವಾರ್ತೆ, ತರೀಕೆರೆ, ಡಿ.22
ಮನುಷ್ಯ ಗೌರವದಿಂದ ಬದುಕು ಸಾಗಿಸಲು ಕಾನೂನು ಅತ್ಯಂತ ಅವಶ್ಯಕವಾಗಿದೆ ಎಂದು ತರೀಕೆರೆ ಹಿರಿಯ ಸಿವಿಲ್ ನ್ಯಾಯಾಧೀಶ ಹಿದಾಯತ್ ಉಲ್ಲಾ ಷರೀಪ್ ತಿಳಿಸಿದ್ದಾರೆ.
ತಾಲೂಕು ಕಾನೂನು ನೆರವು ಸಮಿತಿ, ವಕೀಲರ ಸಂಘ ವತಿಯಿಂದ ಪಟ್ಟಣದ 17ನೇ ವಾರ್ಡ್‌ನ ಖಾಜಿ ಮೊಹಲ್ಲದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಆಂಗವಾಗಿ ನಡೆದ ಕಾನೂನು ಅರಿವು ನೆರವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದೌರ್ಜನ್ಯ, ಬೇರೆಯವರಿಂದ ಆಗುವ ನಷ್ಟ ಇತ್ಯಾದಿಗಳಿಗೆ ಕಾನೂನು ಮೂಲಕ ಪರಿಹಾರ ಕಂಡುಕೊಳ್ಳಬಹುದು. ಕಾನೂನು ನೆರವು ಸಮಿತಿ ವತಿಯಿಂದ ಕಾನೂನು ಸೌಲಭ್ಯ ಪಡೆದುಕೊಳ್ಳಬಹುದು. ಯಾವುದೇ ರೀತಿ ತೊಂದರೆ ಆದಲ್ಲಿ ಕೂಡಲೇ ಕಾನೂನು ನೆರವು ಸಮಿತಿಯವರನ್ನು ಸಂಪರ್ಕಿಸಬಹುದು ಎಂದರು.
ಪುರಸಭೆ ಸದಸ್ಯೆ ಪರ್ವೀನ್ ತಾಜ್ ಮಾತನಾಡಿದರು.
ಕಾರ್ಯಕ್ರಮವನ್ನು ಕಿರಿಯ ಸಿವಿಲ್ ನ್ಯಾಯಾಧೀಶರಾದ ಜಯಲಕ್ಷ್ಮಿ ಉದ್ಘಾಟಿಸಿದರು. ವಕೀಲರ ಸಂಘದ ಅಧ್ಯಕ್ಷ ಸಿ.ಎಸ್. ಶಿವಪ್ರಸಾದ್, ಓಂಕಾರಮೂರ್ತಿ, ವಕೀಲರಾದ ಮೀರ್ ಸನಾವುಲ್ಲ ಮತ್ತಿತರರು ಮಾತನಾಡಿದರು. ವಕೀಲರಾದ ಅಬ್ದುಲ್ ರಜಾಕ್, ನಾಸಿಯಾ ಪರ್ವೀನ್, ಟಿ.ಆರ್. ಶ್ರೀನಿವಾಸ್, ಮಮತ, ಅಕ್ಬರ್ ಪಾಷ, ಇದ್ರೀಸ್ ಅಸ್ಗರ್ ಶಬನಂ, ಮಹೇಶ್ವರಪ್ಪ ಮತ್ತಿತರರು ಭಾಗವಹಿಸಿದ್ದರು.