'ಪಠ್ಯ ಕಲಿಕೆಗೆ ಕಲಿಕೋತ್ಸವ ಸಹಕಾರಿ'
ಕ.ಪ್ರ.ವಾರ್ತೆ, ಬೀರೂರು, ಡಿ.22
ಬೀರೂರು ಶೈಕ್ಷಣಿಕ ವಲಯದ 16 ಕ್ಲಸ್ಟರ್‌ಗಳ ಶಾಲಾ ಮಕ್ಕಳ ಕಲಿಕೋತ್ಸವ ಕಾರ್ಯಕ್ರಮಕ್ಕೆ ಶಿಕ್ಷಣಾಧಿಕಾರಿ ಮೋಹನ್ ಕುಮಾರ್ ಇಲ್ಲಿನ ಪತ್ರೆ ಅನ್ನಪೂರ್ಣಮ್ಮ ಸ್ಮಾರಕ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ಮಕ್ಕಳಿಗೆ ಕಲಿಕೆ ಕಷ್ಟದಾಯಕವಾಗಿರಬಾರದು ಇಷ್ಟವಾಗುವಂತಿರಬೇಕೆಂಬ ಆಶಯದಿಂದ ಈ ಬಾರಿ ನೂತನ ರೀತಿಯ ಕಾರ್ಯಕ್ರಮ ರೂಪಿಸಿದ್ದು, ಪ್ರತಿಭಾ ಕಾರಂಜಿ ಮಕ್ಕಳ ಸುಪ್ತ ಪ್ರತಿಭೆಗೆ ವೇದಿಕೆಯಾದರೆ ಕಲಿಕೋತ್ಸವ ಶೈಕ್ಷಣಿಕ ಪಠ್ಯಗಳ ಕಲಿಯುವಿಕೆಗೆ ನೆರವಾಗಲಿದೆ, ಮಕ್ಕಳು ಈ ಅವಕಾಶಗಳನ್ನು ಸದ್ಬಳಕೆಮಾಡಿಕೊಳ್ಳಬೇಕೆಂದರು.
ಪೋಷಕರ ಪಾತ್ರವೂ ಮುಖ್ಯ: ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪುರಸಭಾ ಸದಸ್ಯ ಮುಕ್ತಿಯಾರ್, ಸರ್ಕಾರ ಸರ್ಕಾರಿ ಶಾಲಾ ಮಕ್ಕಳ ಶೈಕ್ಷಣೆಕ ಪ್ರಗತಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ನೆರವಾಗುತ್ತಿದ್ದು, ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸುವಲ್ಲಿ ಶಿಕ್ಷಕರಷ್ಟೇ ಪೋಷಕರು ಕಾಳಜಿ ವಹಿಸಬೇಕು ಎಂದು ಹೇಳಿದರು.
ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ರಾಜಶೇಖರ್ ಮಾತನಾಡಿ, ಕಲಿಕೆಯಲ್ಲಿ ಮಕ್ಕಳಿಗೆ ಈ ಪ್ರಯತ್ನ ಉಪಯುಕ್ತವಾಗಿದ್ದು ವಿಷಯವನ್ನು ಆಳವಾಗಿ ಅರಿಯಲು ನೆರವಾಗಲಿದೆ ಎಂದರು.
ದೈಹಿಕ ಶಿಕ್ಷಕ ಪರಿವೀಕ್ಷಕ ಎಂ. ಮಲ್ಲಪ್ಪ, ಶಿಕ್ಷಕ ಸಂಘದ ಶ್ರೀಧರ್. ಪುಷ್ಪಲತಾ, ಉಮಾಮಹೇಶ್, ಕುಮಾರಸ್ವಾಮಿ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಶಶಿಕಲಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿ.ಅರ್.ಪಿ. ಸಾವಿತ್ರಮ್ಮ ಮುಖ್ಯೋಪಾಧ್ಯಾಯ ಜಿ.ಸಿ. ಪರಮೇಶ್ವರಪ್ಪ ಉಪಸ್ಥಿತರಿದ್ದರು. ಸುಮಾ ಸಂಗಡಿಗರು ಪ್ರಾರ್ಥಿಸಿ, ಪರಮೇಶ್ವರಪ್ಪ ಸ್ವಾಗತಿಸಿದರು, ಗಂಗಮ್ಮ ಕಾರ್ಯಕ್ರಮ ನಿರೂಪಿಸಿದರು, ಮಹದೇವ್ ವಂದಿಸಿದರು.