ಮೂಲ ಸೌಕರ್ಯಕ್ಕಾಗಿ ಪಾದಯಾತ್ರೆ
ಬೀರೂರು: ಪಟ್ಟಣದ ಮೂಲಭೂತ ಸೌಕರ್ಯಗಳಿಗೆ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಬೀರೂರಿನಿಂದ ಕಡೂರು ಪಟ್ಟಣಕ್ಕೆ ಪಾದಯಾತ್ರೆಯನ್ನು ನಡೆಸಲಾಗುವುದು ಎಂದು ಕನ್ನಡ ಸೇನೆಯ ತಾಲೂಕು ಅಧ್ಯಕ್ಷ ಮೋಹನ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪತ್ರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಮತ್ತು ಸೇವಾ ನ್ಯೂನತೆಗಳ ಬಗ್ಗೆ ಕಿಡಿಕಾರಿದರು. ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಕುಡಿಯುವ ನೀರಿನ ಅಭಾವದಿಂದ ಯಾತನೆ ಅನುಭವಿಸುತ್ತಿದ್ದು ಪುರಸಭೆ ಸಮಸ್ಯೆಗಳಿಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದರು.
ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಎಸ್.ಆರ್. ಲಕ್ಷ್ಮಯ್ಯ ಬಡಾವಣೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಮಾಜಿ ಶಾಸಕರು ಹಾಗೂ ದತ್ತರವರು ಸೂಕ್ತ ನಿರ್ಧಾರ ತೆಗೆದುಕೊಂಡು ಪಾರದರ್ಶಕತೆಯಿಂದ ಅರ್ಹ ಫಲಾನುಭವಿಗಳಿಗೆ ಪಾರದರ್ಶಕತೆಯಿಂದ ನೀಡುವಂತೆ ಆಗ್ರಹಿಸಿದರು.
ಕನ್ನಡ ನೆಲ, ಜಲ ಮತ್ತು ನಾಡಿನ ಸಮಸ್ಯೆಗಳು ಬಂದಾಗಿ ಸರ್ವ ಸಂಘಗಳು ಒಟ್ಟಾಗಿ ಹೋರಾಡುವಂತೆ ಮನವಿ ಮಾಡಿದರು. ಪಟ್ಟಣದ ಎಲ್ಲಾ ಸಮಸ್ಯೆಗಳಿಗೆ ಸರ್ಕಾರದ ಗಮನ ಸೆಳೆಯಲು ಮುಂದಿನ ವಾರದಲ್ಲಿ ದಿನ ನಿಗಧಿ ಪಡಿಸಲಾಗುವುದು ಎಂದು ತಿಳಿಸಿದರು.
ಬೀರೂರು ನಗರ ಘಟಕದ ಅಧ್ಯಕ್ಷ ಮುಬಾರಕ್ ಮಾತನಾಡಿ, ಪಟ್ಟಣದ ಸರ್ಕಾರಿ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೌಕರರು ಹಲವು ವರ್ಷಗಳಿಂದ ಒಂದೇ ಸ್ಥಳದಲ್ಲಿರುವುದರಿಂದ ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಭವಾಗುತ್ತಿದ್ದು, ಈ ಬಗ್ಗೆ ಉಪ ವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಕಡೂರು ಘಟಕ ಅಧ್ಯಕ್ಷ ಮಂಜು, ಕಾರ್ಯದರ್ಶಿ ಮಧು, ಖಜಾಂಚಿ ಸತೀಶ್, ಸಂಚಾಲಕ ಸುರೇಶ್, ಗಿರೀಶ್ ಸೇರಿದಂತೆ ಸೇನೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.