ಶಿಕ್ಷಣ ಅಂಕ ಗಳಿಕೆಗೆ ಸೀಮಿತವಾಗದಿರಲಿ
ನರಸಿಂಹರಾಜಪುರ: ಕಾಲೇಜಿನ ನಾಲ್ಕು ಗೋಡೆಗಳ ನಡುವೆ ಎಲ್ಲರೂ ಬುದ್ಧಿವಂತರಾಗಿರುತ್ತಾರೆ. ಆದರೆ, ಕಾಲೇಜಿನ ಹೊರಗೆ ಬಂದು ಸಮಾಜದ ಜೊತೆ ಬೆರೆತಾಗಲೇ ನೈಜ ಸಮಸ್ಯೆಗಳ ಅರಿವಾಗುತ್ತದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪೂರ್ಣೇಶ್ ತಿಳಿಸಿದರು.
ಭಾನುವಾರ ಮುತ್ತಿನಕೊಪ್ಪದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ರಾಜ್ಯಮಟ್ಟದ ಸಮಾಜ ಕಾರ್ಯ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಶಿಕ್ಷಣವು ಕೇವಲ ಅಂಕ ಗಳಿಕೆಗಾಗಿ ಮಾತ್ರ ಸೀಮಿತವಾಗಬಾರದು. ಶಿಕ್ಷಣವು ಯಾರೂ ಕದಿಯದ ಆಸ್ತಿಯಾಗಿದೆ. ವಿದ್ಯಾವಂತರಿಂದ ಸಮಾಜವು ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದು, ಶಿಕ್ಷಣ ಪಡೆದ ಯುವಜನರು ಜನರ ನಿರೀಕ್ಷೆ ಹುಸಿ ಮಾಡದೆ ತಮ್ಮ ವೃತ್ತಿಯ ನಡುವೆ ಪ್ರಾಮಾಣಿಕವಾಗಿ ಸಮಾಜಸೇವೆ ಮಾಡಬೇಕು ಎಂದು ಸಲಹೆ ನೀಡಿದರು.
ಯಶಸ್ವಿ: ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ. ಕೆ. ಉಮೇಶ್ ಮಾತನಾಡಿ, ಕಳೆದ 5 ದಿನಗಳಿಂದ ನಡೆಯುತ್ತಿದ್ದ ರಾಜ್ಯ ಮಟ್ಟದ ಸಮಾಜ ಕಾರ್ಯ ಶಿಬಿರವು ಅತ್ಯಂತ ಯಶಸ್ವಿಯಾಗಿದೆ. ತರಗತಿಯಲ್ಲಿ ಕಲಿಯುವ ಶಿಕ್ಷಣವು ಕೇವಲ ಜ್ಞಾನ ಸಂಪಾದನೆಗೆ ಮಾತ್ರ. ಬದುಕಿನ ಶಿಕ್ಷಣ ಪಡೆಯಬೇಕಾದರೆ ನಾಲ್ಕು ಗೋಡೆಗಳ ಆಚೆ ನಡೆಯುವ ಇಂತಹ ಶಿಬಿರದಿಂದ ಸಾಧ್ಯ ಎಂದರು.
ಮುಖ್ಯ ಅತಿಥಿಯಾಗಿದ್ದ ಪಿಸಿಎಆರ್ಡಿ ಬ್ಯಾಂಕಿನ ಅಧ್ಯಕ್ಷ ಕೆ.ಪಿ. ಸಂಪತ್ಕುಮಾರ್, ಯುವಜನರು ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಶಿಬಿರದ ಸ್ವಾಗತ ಸಮಿತಿ ಅಧ್ಯಕ್ಷ ಯತಿರಾಜ್ ಮಾತನಾಡಿದರು.ಅಧ್ಯಕ್ಷತೆಯನ್ನು ಮುತ್ತಿನಕೊಪ್ಪ ಗ್ರಾಪಂ ಅಧ್ಯಕ್ಷೆ ಸುಜಾತ ವಹಿಸಿದ್ದರು. ಅತಿಥಿಗಳಾಗಿ ಗ್ರಾಪಂ ಸದಸ್ಯ ಎಸ್. ಗೋಪಾಲ್, ಸ್ವಾಗತ ಸಮಿತಿ ಸದಸ್ಯ ಶ್ರೀನಿವಾಸ್, ನೆಹರಾಬಾನು, ಶಾಲಾ ಮುಖ್ಯೋಪಾಧ್ಯಾಯಿನಿ ರಾಧ ಉಪಸ್ಥಿತರಿದ್ದರು. ಎಂ.ಅರುಣ ಸ್ವಾಗತಿಸಿದರು. ಲೋಕೇಶ್ ಮತ್ತು ಶಿಲ್ಪ ನಿರೂಪಿಸಿದರು. ಸುಜಿತ್ ವಂದಿಸಿದರು. 5 ದಿನಗಳ ಕಾಲ ನಡೆದ ಶಿಬಿರದಲ್ಲಿ ತುಮಕೂರು, ಮಂಗಳೂರು ಹಾಗೂ ಕುವೆಂಪು ವಿಶ್ವವಿದ್ಯಾನಿಲಯದ ವ್ಯಾಪ್ತಿಯ ವಿವಿಧ ಕಾಲೇಜುಗಳ ಶಿಬಿರಾರ್ಥಿಗಳು ಭಾಗವಹಿಸಿದ್ದರು.
ಇಂದು ದತ್ತಿ ಉಪನ್ಯಾಸ
ನರಸಿಂಹರಾಜಪುರ: ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಡಿ. 23 ರ ಸೋಮವಾರ ಮಧ್ಯಾಹ್ನ 12.30 ಗಂಟೆಗೆ ದಿ. ಎಚ್. ಸೂರ್ಯನಾರಾಯಣರಾವ್ ಮತ್ತು ಎಚ್.ಎಸ್. ಕಮಲಮ್ಮ ದತ್ತಿ ಉಪನ್ಯಾಸ ನಡೆಯಲಿದೆ.
ಭಾಗ್ಯ ನಂಜುಂಡಸ್ವಾಮಿ ಅವರು ಕವಿ ಎಸ್.ವಿ. ಪರಮೇಶ್ವರ ಭಟ್ ಅವರ ಕೃತಿ, ಕನ್ನಡ ಸಾಹಿತ್ಯಕ್ಕೆ ಅವರ ಕೊಡುಗೆ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ದತ್ತಿ ದಾನಿಗಳಾದ ಎಚ್.ಎಸ್. ಚಂದ್ರಶೇಖರ್ ಮತ್ತು ಕಮಲ ಭಾಗವಹಿಸುವರು.
ಉಪನ್ಯಾಸ
ನರಸಿಂಹರಾಜಪುರ: ತಾಲೂಕು ಕಸಾಪ ಆಶ್ರಯದಲ್ಲಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ ಆವರಣದಲ್ಲಿ ಡಿ. 23ರ ಸೋಮವಾರ ಬೆಳಗ್ಗೆ 11 ಗಂಟೆಗೆ ರಾಮಕ್ಕಮ್ಮ ಮತ್ತು ದಿ. ಆರ್. ಪೆರುಮಯ್ಯ ಬಾಗೂರು ಅವರ ದತ್ತಿ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ. ಗಡಿಗೇಶ್ವರ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ಮಲ್ಲಿಕಾರ್ಜುನ ಮುಕಾರ್ತಿಹಾಳ್ ಅವರು ಕನ್ನಡ ಸಾಹಿತ್ಯಕ್ಕೆ ಹರಿದಾಸರ ಕೊಡಿಗೆ ಎಂಬ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ತಾಲೂಕು ಕಸಾಪ ಅಧ್ಯಕ್ಷ ಎಜ್.ಜಿ. ಕೃಷ್ಣಮೂರ್ತಿ ಉದ್ಘಾಟಿಸಲಿದ್ದಾರೆ. ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಪಿ.ಸಿ. ಮ್ಯಾಥ್ಯೂ ಅಧ್ಯಕ್ಷತೆ ವಹಿಸಲಿದ್ದಾರೆ. ದತ್ತಿ ದಾನಿಗಳಾದ ಎಂ.ಪಿ. ಚಕ್ರಪಾಣಿ ಮತ್ತು ಕೆ. ವಿಜಯಲಕ್ಷ್ಮಿ ಉಪಸ್ಥಿತರಿರುವರು.