ಹಿಂದೂ ದೇವತೆಗಳಿಗೆ ಅವಮಾನ: ಆರೋಪ
ಬಾಳೆಹೊನ್ನೂರು: ಇಲ್ಲಿನ ಬಸ್ ನಿಲ್ದಾಣದಲ್ಲಿ ಭದ್ರಾವತಿಯ ಹರಕೆರೆ ಶ್ರೀ ಬಸವೇಶ್ವರ ವೀರಗಾಸೆ ಕಲಾತಂಡ ಏಡ್ಸ್ ಅರಿವು ಕುರಿತು ನಡೆಸಿದ ಬೀದಿ ನಾಟಕದ ಕುರಿತು ಸಾರ್ವಜನಿಕರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಬಿ. ಕಣಬೂರು ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಎಸ್ಜಿಆರ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಏಡ್ಸ್ ಕುರಿತು ಜನಜಾಗೃತಿ ಕಾರ್ಯಕ್ರಮದಲ್ಲಿ ಬೀದಿ ನಾಟಕ ನಡೆಸಿದ ಪಾತ್ರದಾರಿಗಳು ಹಿಂದೂ ದೇವರ ವೇಷ ಧರಿಸಿದ್ದು ಆಕ್ರೋಶಕ್ಕೆ ಕಾರಣವಾಯಿತು. ತ್ರಿಶೂಲ, ರುದ್ರಾಕ್ಷಿ ಮಾಲೆಯೊಂದಿಗೆ ಈಶ್ವರನ ವೇಷದಲ್ಲಿ ಕಾವಿ ಉಡುಪು ಧರಿಸಿ ನಡುರಸ್ತೆಯಲ್ಲಿ ಏಡ್ಸ್ ತಡೆ ಬಗ್ಗೆ ಬೀದಿ ನಾಟಕ ನಡೆಸಿದ ಕಲಾವಿದರನ್ನು ಸಾರ್ವಜನಿಕರು, ಬಜರಂಗದಳ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಆದರೆ, ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯೋರ್ವರು ಸಂಘಟನೆಗಳ ಕಾರ್ಯಕರ್ತರೊಂದಿಗೆ ಇದನ್ನು ಸಮರ್ಥಿಸಿಕೊಂಡಿದ್ದು ಸ್ಥಳದಲ್ಲಿದ್ದವರನ್ನು ಮತ್ತಷ್ಟು ಕೆರಳಿಸಿತು.
ಸದಸ್ಯರ ಆಕ್ಷೇಪಣೆಗೆ ಒಪ್ಪಿದ ನಾಟಕ ತಂಡ ಮುಂದೆ ಈ ರೀತಿ ಬೀದಿ ನಾಟಕದಲ್ಲಿ ಹಿಂದೂ ದೇವರುಗಳ ವೇಷ ತೊಡುವುದಿಲ್ಲ ಎಂದು ಭರವಸೆ ನೀಡಿತು. ಆ ವೇಳೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ತಂಡವನ್ನು ಠಾಣೆಗೆ ಕರೆದೊಯ್ದು ಆಕ್ಷೇಪಾರ್ಹ ವೇಷಗಳನ್ನು ತೊಡದಂತೆ ಸೂಚನೆ ನೀಡಿದರು.
ಬಸ್ ನಿಲ್ದಾಣದ ನಂತರದ ಕೆಳಗಿನಪೇಟೆಯ ಸಂತೆ ವೃತ್ತದಲ್ಲಿ ನಡೆಸಲು ಉದ್ದೇಶಿಸಿದ್ದ ಬೀದಿ ನಾಟಕವನ್ನು ತಂಡ ಕೈಬಿಟ್ಟು ಮಾಗುಂಡಿಗೆ ತೆರಳಿತು.