ಕನ್ನಡ ಸಾರಸ್ವತ ಲೋಕದ ಅಗ್ರಜಗೆ ನುಡಿನಮನ
ಚಿಕ್ಕಮಗಳೂರು: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಹಲವು ಗಣ್ಯರು ಹಾಗೂ ಸಂಘ ಸಂಸ್ಥೆಯವರು ಸಂತಾಪ ಸೂಚಿದ್ದಾರೆ.
ಜನದನಿ ಸಂಘಟನೆ ವತಿಯಿಂದ ನಗರದ ಶಂಕರಪುರದ ಅಂಬೇಡ್ಕರ್ ಶಾಲೆಯಲ್ಲಿ ಮಂಗಳವಾರ ಶ್ರದ್ಧಾಂಜಲಿ ಸಭೆ ನಡೆಯಿತು. ವಿವಿಧ ಸಂಘಟನೆಯ ಪ್ರಮುಖರು ಜಿಎಸ್‌ಎಸ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಿದರು.
ಇದೇ ಸಂದರ್ಭದಲ್ಲಿ ಜನದನಿ ಸಂಘಟನೆಯ ಸಂಚಾಲಕ ರವೀಶ್ ಬಸಪ್ಪ ಮಾತನಾಡಿ, ಜಿಎಸ್‌ಎಸ್, ಕೇವಲ ಬರವಣಿಗೆಯ ಕೊಡುಗೆ ಮಾತ್ರ ನೀಡಲಿಲ್ಲ. ಕಾವ್ಯವಾಗಿ ಬದುಕಿ, ಸಮಾಜ ಹೇಗೆ ಬದುಕಬೇಕೆಂದು ತೋರಿಸಿಕೊಟ್ಟಿದ್ದಾರೆ. ಇಂತಹ ಕವಿಯ ಕಾವ್ಯ ಎಂದಿಗೂ ನಮ್ಮ ಜೊತೆ ಇರುತ್ತದೆ. ಕುವೆಂಪು ವಿಶ್ವಮಾನವ ಸಂದೇಶ ನೀಡಿದರು. ಆದರೆ, ಜಿಎಸ್‌ಸ್ ವಿಶ್ವಮಾನವ ಸಂದೇಶದಂತೆ ನಡೆದುಕೊಂಡರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಬಿ. ಅಮ್ಜದ್ ಮಾತನಾಡಿ, ಇಂದಿನ ಪ್ರಸ್ತುತ ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ಸಮಾಜಮುಖಿ ಕವಿತೆ ಹಾಗೂ ಸಾಹಿತ್ಯ ಬರವಣಿಗೆಯ ಮೂಲಕ ಸಮಾಜವನ್ನು ತಿದ್ದುವುದರಲ್ಲಿ ಜಿಎಸ್‌ಎಸ್‌ರ ಪಾತ್ರ ಅಗ್ರಮಾನ್ಯ. ಅವರು ಸೌಹಾರ್ದಯುತ ಬದುಕನ್ನು ಕಟ್ಟಿಕೊಡುತ್ತಿದ್ದ ಕೊಂಡಿ ಕಳಚಿ ಹೋಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪತ್ರಕರ್ತ ಬಿ. ತಿಪ್ಪೇರುದ್ರಪ್ಪ ಮಾತನಾಡಿ, ಜಿಎಸ್‌ಎಸ್ ದಲಿತ ಸಾಹಿತ್ಯ, ನವ್ಯ ಸಾಹಿತ್ಯ, ಬಂಡಾಯ ಸಾಹಿತ್ಯ ಪಂಥಗಳಿಗೆ ಅಂಟಿಕೊಳ್ಳದೆ ಸಮನ್ವಯ ಕವಿಯಾದರು ಎಂದು ತಿಳಿಸಿದರು.
ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್, ಬಿ.ಎಸ್.ಪಿ. ಮುಖಂಡ ಕೆ.ಟಿ. ರಾಧಾಕೃಷ್ಣ, ಕಲ್ಲಯ್ಯ, ರೈತ ಸಂಘದ ಮುಖಂಡರಾದ ಗುರುಶಾಂತಪ್ಪ, ಆರ್.ಆರ್. ಮಹೇಶ್, ಸಾಹಿತಿ ಕುಂದೂರು ಅಶೋಕ್ ಹಾಜರಿದ್ದರು.
ಕನ್ನಡ ಸೇನೆ: ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ನಿಧನಕ್ಕೆ ಜಿಲ್ಲಾ ಕನ್ನಡಸೇನೆ ಕಾರ್ಯಕರ್ತರು ಮೃತರ ಭಾವಚಿತ್ರಕ್ಕೆ ಪುಷ್ಪಾ ನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.
ನಗರದ ಬಸವನಹಳ್ಳಿಯ ಜಿಲ್ಲಾ ಕನ್ನಡಸೇನೆ ಕಚೇರಿ ಮುಂಭಾಗ ಜಿಲ್ಲಾಧ್ಯಕ್ಷ ಪಿ.ಸಿ. ರಾಜೇಗೌಡ ಮತ್ತು ಕಾರ್ಯಕರ್ತರು ಜಿ.ಎಸ್. ಶಿವರುದ್ರಪ್ಪ ಅವರ ಭಾವಚಿತ್ರ ಪುಷ್ಪನಮನ ಸಲ್ಲಿಸಿ 2 ನಿಮಿಷ ಮೌನಾಚರಣೆ ಮಾಡಿದರು.
ಅವಿನಾಭಾವ ಸಂಬಂಧ: ನಂತರ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿ.ಸಿ. ರಾಜೇಗೌಡ, ವಚನ ಮತ್ತು ಕವನ ಸಂಕಲನದ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದ ಶಿವರುದ್ರಪ್ಪ ಅವರಂತಹ ದಿಗ್ಗಜರನ್ನು ಕಳೆದುಕೊಂಡು ಸಾಂಸ್ಕೃತಿಕ ಲೋಕ ಬಡವಾಗಿದೆ ಎಂದರೆ ತಪ್ಪಾಗಲಾರದು. ಜಿಲ್ಲೆಯ ಅಳಿಯನಾಗಿ ಮಲೆನಾಡಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಕವಿಗಳು ಕನ್ನಡನಾಡಿನ ಕೀರ್ತಿಯನ್ನು ದೇಶಾದ್ಯಂತ ಬೆಳಗಿದ್ದರು. ಅವರ ನಿಧನದಿಂದಾಗಿ ಸಾಹಿತ್ಯ ಲೋಕ ಕಳೆಗುಂದಿದಂತಾಗಿದೆ. ಕವಿಯ ನಿಧನದಿಂದ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ನಗರಾಧ್ಯಕ್ಷ ಬಿ.ಎಲ್. ಪ್ರವೀಣ್, ಜಿಲ್ಲಾ ಉಪಾಧ್ಯಕ್ಷ ಮಂಜೇಗೌಡ, ಮುಖಂಡರಾದ ದೇವರಾಜ್, ರಾಜು, ನೀಲೇಶ್, ಉಮೇಶ್ ಸೇರಿದಂತೆ ಹಲವರು ಹಾಜರಿದ್ದರು.
ಎಐಟಿ ಕಾಲೇಜು: ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಮಂಗಳವಾರ ಕಾಲೇಜಿನ ಪ್ರಾಂಶುಪಾಲ ಡಾ. ಸಿ.ಕೆ. ಸುಬ್ರಾಯ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ, ಕಾಲೇಜಿನ ನೌಕರರು ಮತ್ತು ವಿದ್ಯಾರ್ಥಿಗಳು ಜಿಎಸ್‌ಎಸ್ ಅವರಿಗೆ ಸಂತಾಪ ಸೂಚಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸುಬ್ರಾಯ ಅವರು, ಜಿಎಸ್‌ಎಸ್ ಪ್ರಾಧ್ಯಾಪಕರಾಗಿ, ಪ್ರತಿಭಾವಂತ ಸಾಹಿತಿಯಾಗಿ, ಕವಿಯಾಗಿ, ಹಲವಾರು ದಶಕಗಳ ಕಾಲ ಕನ್ನಡ ಸಾರಸ್ವತ ಲೋಕವನ್ನು ಆಳಿದ ಮಹಾನ್ ರಾಷ್ಟ್ರಕವಿ ಎಂದು ಹೇಳಿದರು.
ಕಾಂಗ್ರೆಸ್: ಕನ್ನಡ ಸಾರಸ್ವತ ಲೋಕದ ಅಗ್ರಗಣ್ಯ ಸಾಹಿತಿ, ಹಾಗೂ ವಿಶ್ವಮಾನವ ತತ್ವದಲ್ಲಿ ನಂಬಿಕೆ ಇಟ್ಟು ಅದರಂತೆ ನಡೆದವರು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ರವರು ಸ್ವರ್ಗಸ್ಥರಾದದ್ದು ಇಡೀ ಕನ್ನಡ ನಾಡಿಗೆ ಹಾಗೂ ಭಾರತ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ದಯಾಮಯನಾದ ಭಗವಂತನು ಅವರ ಆತ್ಮಕ್ಕೆ ಶಾಂತಿ ಹಾಗೂ ಅವರ ಬಂಧು ಬಾಂಧವರಿಗೆ ಈ ದುಃಖ ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್ ಹೇಳಿದ್ದಾರೆ.