ಕುಡಿವ ನೀರಿನ ಸಮಸ್ಯೆ ನೀಗಿಸಿ
ಚಿಕ್ಕಮಗಳೂರು: ಕಳೆದ ಮೂರು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದರಿಂದ ತಾಲೂಕಿನ ಕೆ.ಬಿ. ಹಾಳ್ ಗ್ರಾಮಸ್ಥರು ಸೋಮವಾರ ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಗ್ರಾಮ ಪಂಚಾಯಿತಿ ಕಚೇರಿಯಿಂದ ಬೆಳವಾಡಿ ರವೀಂದ್ರ ಅವರ ನೇತೃತ್ವದಲ್ಲಿ ಮಹಿಳೆಯರಾದಿಯಾಗಿ ಖಾಲಿ ಕೊಡ ಹಿಡಿದು ಮೆರವಣಿಗೆ ಮೂಲಕ ಆಗಮಿಸಿದ ಗ್ರಾಮಸ್ಥರು ಬಸ್ ನಿಲ್ದಾಣದ ಬಳಿ ಬೇಲೂರು ಅರಸೀಕೆರೆ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
600 ಕೊರೆದರೂ ನೀರಿಲ್ಲ: ಇದೇ ಸಂದರ್ಭದಲ್ಲಿ ಮಾತನಾಡಿದ ಬೆಳವಾಡಿ ರವೀಂದ್ರ, ಕೆ.ಬಿ. ಹಾಳ್ ಮತ್ತು ಕೊಟ್ಟಿಗೇನಹಳ್ಳಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು ಕಳೆದ ಮೂರು ತಿಂಗಳಿನಿಂದ ಜನ ಜಾನುವಾರುಗಳಾದಿಯಾಗಿ ಕುಡಿಯುವ ನೀರಿಗೆ ಹಾಹಾಕಾರ ಎದುರಿಸುವಂತಾಗಿದೆ. ಜಿಲ್ಲಾ ಪಂಚಾಯಿತಿಯಿಂದ ಐದಾರು ಕಡೆ 600 ಅಡಿ ಆಳದವರೆಗೆ ಕೊಳವೆಬಾವಿ ಕೊರೆಸಿದರೂ ಅಂತರ್ಜಲ ಬತ್ತಿರುವುದರಿಂದ ಹನಿ ನೀರು ಸಿಗದೆ ಯಾವುದೇ ಪ್ರಯೋಜನವಾಗಿಲ್ಲ ಎಂದರು.
ಈ ಸಂಬಂಧ ಬೇಲೂರಿನಿಂದ ಕೆ.ಬಿ. ಹಾಳ್ ಮಾರ್ಗವಾಗಿ ಅರಸೀಕೆರೆಗೆ ಯಗಚಿ ಕುಡಿಯುವ ನೀರಿನ ಪೈಪ್ಲೈನ್ ಹಾದು ಹೋಗಿದ್ದು ಇದರಿಂದ ಎಲ್ಲಾ ಗ್ರಾಮಗಳಿಗೆ ನೀರು ಒದಗಿಸಿದ್ದಾರೆ. ಆದರೆ, ಚಿಕ್ಕಮಗಳೂರು ಜಿಲ್ಲೆಗೆ ಸೇರಿರುವ ಈ ಗ್ರಾಮಕ್ಕೆ ಮಾತ್ರ ಮಲತಾಯಿ ಧೋರಣೆ ತೋರಿರುವುದರಿಂದ ಜನ ಜಾನುವಾರುಗಳಿಗೆ ನೀರಿಲ್ಲದೆ ಸಮಸ್ಯೆ ಎದುರಾಗಿದೆ ಎಂದು ಆರೋಪಿಸಿದರು.
ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಿ ಮುಂದಿನ 15 ದಿನಗಳಲ್ಲಿ ಯಗಚಿ ಕುಡಿಯುವ ನೀರಿನ ಪೈಪ್ಲೈನ್ನಿಂದ ನೀರು ಕೊಟ್ಟು ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಕೆ.ಬಿ. ಹಾಳ್ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಜನ ಜಾನುವಾರುಗಳೊಂದಿಗೆ ಪಾದಯಾತ್ರೆ ಮೂಲಕ ಆಗಮಿಸಿ ಪ್ರತಿಭಟನಾ ಧರಣಿ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಶಿವೇಗೌಡ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿ, ನಿಮ್ಮ ಸಮಸ್ಯೆ ಬಗ್ಗೆ ಅರಿವಿದೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಡಲಾಗುವುದು ಎಂದು ಭರವಸೆ ನೀಡಿದರು. 2 ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಪಂ ಅಧ್ಯಕ್ಷೆ ವರಲಕ್ಷ್ಮಿ, ಸದಸ್ಯರಾದ ಗೋವಿಂದ, ಸತೀಶ್, ವಾಸು, ಗ್ರಾಮಸ್ಥರಾದ ದಯಾನಂದ್, ಪುಟ್ಟೇಗೌಡ, ಸಿದ್ದೇಗೌಡ, ಕಲ್ಲೇಶ್, ನಾರಾಯಣಶೆಟ್ಟಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.