ಕೇಳುವವರಿಲ್ಲ ಕೃಷಿಕರ ಗೋಳು: ಶೇಷಗಿರಿ
ಕ.ಪ್ರ.ವಾರ್ತೆ, ಮೂಡಿಗೆರೆ, ಡಿ.23 ಒಂದೆಡೆ ಅತಿವೃಷ್ಟಿ, ಮತ್ತೊಂದೆಡೆ ಅನಾವೃಷ್ಟಿ ಇವೆರಡರ ನಡುವೆ ಪ್ರಾಣಿಗಳ ಹಾವಳಿ, ಬೆಳೆದ ಬೆಳೆಗೆ ಬೆಂಬಲ ಬೆಲೆ ಕೊರತೆ ಹೀಗೆ ಸಂಕಷ್ಟದಲ್ಲಿ ಸಿಲುಕಿ ಒದ್ದಾಡುತ್ತಿರುವ ಕೃಷಿಕರ ಗೋಳನ್ನು ಸರ್ಕಾರ ಆಲಿಸುತ್ತಿಲ್ಲ ಎಂದು ತಾಪಂ ಅಧ್ಯಕ್ಷ ಎಂ.ಎ. ಶೇಷಗಿರಿ ತಿಳಿಸಿದರು.
ಪಟ್ಟಣದ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಜಿಪಂ ಚಿಕ್ಕಮಗಳೂರು, ತಾಪಂ ಮೂಡಿಗೆರೆ, ಕೃಷಿ ಇಲಾಖೆ, ತಾಲೂಕು ಕೃಷಿಕ ಸಮಾಜ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ರೈತರ ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಷೇಧ ಸರಿಯಲ್ಲ: ತಲತಲಾಂತರದಿಂದ ಅಡಕೆ ಕೃಷಿಯನ್ನೇ ಅವಲಂಬಿಸಿಕೊಂಡು ಶೇ. 80 ರೈತರು ತಮ್ಮ ಜೀವನ ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರದ ದ್ವಂದ್ವ ನೀತಿಯಿಂದ, ಸಿಗರೇಟು ಕಂಪೆನಿಯ ಲಾಬಿಗೆ ಒಲಿದು ಅಡಕೆ ಬೆಳೆಗಾರರ ಮೇಲೆ ಯುದ್ಧ ಸಾರುವುದರ ಮೂಲಕ ಅಡಕೆಯನ್ನೇ ನಿಷೇಧಿಸಲು ಹೊರಟಿರುವುದು ಸರಿಯಲ್ಲ ಎಂದವರು ಹೇಳಿದರು.
ಕಾರ್ಯಕ್ರಮ ಉದ್ಘಾಟಿದ ಕೃಷಿಕ ಸಮಾಜದ ಅಧ್ಯಕ್ಷ ಡಿ.ಎಲ್. ಅಶೋಕ್ ಕುಮಾರ್ ಮಾತನಾಡಿ, ರೈತರಿಗೆ ಮಾಹಿತಿ ಕೊರತೆಯಿಂದ ಇಂದು ಕೃಷಿ ಅವಸಾನದತ್ತ ಸಾಗುತ್ತಿದೆ. ಕೃಷಿಯಲ್ಲಿ ಲಾಭವಿದೆ. ಆದರೆ ಅದರ ನಿರ್ವಹಣೆ ಕೊರತೆಯಿಂದ ಯುವ ಪೀಳಿಗೆ ಕೃಷಿ ಮರೆತು ನಗರದತ್ತ ಮುಖ ಮಾಡುತ್ತಿದ್ದಾರೆ ಎಂದರು.
ಮುತ್ತಿಗೆಪುರದ ಅಣ್ಣಪ್ಪ, ಜಿ. ಹೊಸಳ್ಳಿಯ ತಮ್ಮಣ್ಣ ಗೌಡ ಮತ್ತು ಹಿರೇಶಿಗಿರದ ಸೋಮೇಗೌಡರ ಕೃಷಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಗತಿಪರ ರೈತರಾದ ಕೆಂಜಿಗೆ ಕೇಶವ್ ಮತ್ತು ದಾರದಹಳ್ಳಿ ಡಿ.ಎಂ. ರಮೇಶ್ ಅವರನ್ನು ಸನ್ಮಾನಿಸಲಾಯಿತು. ಕಳಸ ಗ್ರಾಪಂ ಅಧ್ಯಕ್ಷೆ ಉಷಾ, ಸಹಾಯಕ ಕೃಷಿ ನಿರ್ದೇಶಕಿ ಸಿ.ಎನ್. ಕುಮುದಾ, ಕೃಷಿ ಅಧಿಕಾರಿ ಮಾನಸ, ಕೃಷಿ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕಿ ಸುಕನ್ಯಾ, ಭರತ್ ಕುಮಾರ್ ಟಿ.ಪಿ. ಕೃಷಿಕ ಸಮಾಜದ ಕಾರ್ಯದರ್ಶಿ ಪಟ್ಟದೂರು ಪಿ.ಕೆ. ನಾಗೇಶ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕೀಟ ಶಾಸ್ತ್ರಜ್ಞ ಡಾ. ರೇವಣ್ಣನವರ್ ಮತ್ತು ಡಾ. ಗಿರೀಶ್ ಅವರಿಂದ ಸುರಕ್ಷಿತ ಕೀಟ ನಾಶಕಗಳ ಬಳಕೆ ಬಗ್ಗೆ ಮಾಹಿತಿ ನೀಡಿದರು.
ರೈತ ಮುಖಂಡರು, ಬೆಳೆಗಾರರು, ಭಾಗವಹಿಸಿದ್ದರು.