ಅಡಕೆ ಬೆಳೆಗಾರರ ಸಮಾವೇಶಕ್ಕೆ ಬೆಂಬಲ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ. 25
ಅಡಕೆ ನಿಷೇಧ ಕೈಬಿಡುವಂತೆ ಆಗ್ರಹಿಸಿ ಮ್ಯಾಮ್‌ಕೋಸ್ ಡಿ. 30 ರಂದು ಶಿವಮೊಗ್ಗದಲ್ಲಿ ಹಮ್ಮಿಕೊಂಡಿರುವ ಅಡಕೆ ಬೆಳೆಗಾರರ ಸಮಾವೇಶಕ್ಕೆ ಮೂಡಿಗೆರೆ ಕ್ಷೇತ್ರದ ಶಾಸಕ ಬಿ.ಬಿ. ನಿಂಗಯ್ಯ ಅವರು ಬೆಂಬಲ ಸೂಚಿಸಿದ್ದಾರೆ.
ಅಡಕೆ ನಿಷೇಧ ಪ್ರಸ್ತಾಪ ಕೈಬಿಡುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಹೋರಾಟ ರೂಪಿಸಬೇಕಾದ ಅಗತ್ಯತೆ ಇದೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇರೆಗೆ ಸುಪ್ರೀಂಕೋರ್ಟ್‌ನ ಆದೇಶದನ್ವಯ ಗುಟ್ಕಾ ಹಾಗೂ ಪಾನ್ ಮಸಾಲ ನಿಷೇಧ ಮಾಡಿದ್ದರೂ ಯಾವುದೇ ಅಡೆತಡೆ ಇಲ್ಲದೆ ಮಾರಾಟವಾಗುತ್ತಿದೆ. ಈ ಸಂಬಂಧ ಸುಪ್ರೀಂಕೋರ್ಟ್‌ನ ಹಿರಿಯ ವಕೀಲರು, ಗುಟ್ಕಾ ಪೂರ್ಣ ಪ್ರಮಾಣದಲ್ಲಿ ನಿಷೇಧವಾಗಿಲ್ಲ. ಗುಟ್ಕಾಕ್ಕೆ ಬಳಸುವ ಅಡಕೆ ನಿಷೇಧ ಮಾಡಲು ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ. ಈ ಸಂಬಂಧ ಸರ್ಕಾರಿ ವಕೀಲರು ಮೌಖಿಕವಾಗಿ ಹೇಳಿಕೆ ನೀಡಿದ್ದಾರೆ. ಇದು, ಕೇಂದ್ರದ ಕೃಷಿ ಸಚಿವರ ಗಮನಕ್ಕೆ ಬಂದಿಲ್ಲವೆ ಎಂದು ಪ್ರಶ್ನಿಸಿದರು.
ಅಡಕೆ ನಿಷೇಧ ಪ್ರಸ್ತಾಪದ ಹಿಂದೆ ಷಡ್ಯಂತ್ರ ನಡೆಯುತ್ತಿದೆ ಎಂಬ ಅನುಮಾನ ಬರುತ್ತಿದೆ. ಸಿಗರೇಟ್ ಕಂಪನಿಗಳ ಪಿತೂರಿ ಇದರ ಹಿಂದೆ ಕೆಲಸ ಮಾಡುತ್ತಿದೆ. ಅಡಕೆ ಬೆಳೆಗಾರರು ಡಿ. 30ರಂದು ಶಿವಮೊಗ್ಗದಲ್ಲಿ ಹಮ್ಮಿಕೊಂಡಿರುವ ಹೋರಾಟಕ್ಕೆ ಬೆಂಬಲ ಸೂಚಿಸಲು ಭಾಗವಹಿಸುವುದಾಗಿ ಹೇಳಿದರು.
ಪಶ್ಚಿಮಘಟ್ಟ ವಿಶ್ವ ಪಾರಂಪರಿಕ ತಾಣ, ಹುಲಿ ಯೋಜನೆ, ಒತ್ತುವರಿ ಸಮಸ್ಯೆ, ಇದೀಗ ಅಡಕೆ ನಿಷೇಧ ಹೀಗೆ ಹಲವು ಸಮಸ್ಯೆಗಳು ಮಲೆನಾಡಿನ ಜನರನ್ನು ಕಾಡುತ್ತಿವೆ. ಮಲೆನಾಡಿನ ಜನರು ಸುಳಿಗೆ ಸಿಲುಕಿದ್ದಾರೆ. ಮಲೆನಾಡು ಉಳಿಸಿ, ನಮ್ಮನ್ನು ರಕ್ಷಿಸಿ, ನಮ್ಮನ್ನು ಬದುಕಲು ಬಿಡಿ ಎಂದ ನಿಂಗಯ್ಯ, ಮಲೆನಾಡು ರಕ್ಷಿಸಲು ಹೋರಾಟ ರೂಪಿಸಬೇಕಾದ ಅಗತ್ಯತೆ ಇದ್ದು, ಜನವರಿ ತಿಂಗಳಲ್ಲಿ ಚರ್ಚಿಸಿ ಹೋರಾಟ ಸಮಿತಿ ರಚನೆ ಮಾಡಲಾಗುವುದು ಎಂದು ತಿಳಿಸಿದರು.