ಕ್ರಿಸ್ಮಸ್: ಚರ್ಚ್ಗಳಲ್ಲಿ ಸಾಮೂಹಿಕ ಪ್ರಾರ್ಥನೆ
ಚಿಕ್ಕಮಗಳೂರು: ಕ್ರೈಸ್ತ ಬಾಂಧವರು ಬುಧವಾರದಂದು ಕ್ರೀಸ್ಮಸ್ ಹಬ್ಬದ ಅಂಗವಾಗಿ ಚರ್ಚ್ಗಳಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು.
ನಗರದ ಬೇಲೂರು ರಸ್ತೆಯಲ್ಲಿರುವ ಸಂತ ಅಂದ್ರೆಯ ಚರ್ಚ್, ಪಾರ್ವತಿಪುರದಲ್ಲಿರುವ ಬಾಲ ಯೇಸು ಮಂದಿರ ಹಾಗೂ ಸಂತ ಜೋಸೆಫರ ಪ್ರಧಾನ ದೇವಾಲಯಗಳಲ್ಲಿ ಸಮಾಜದ ಬಾಂಧವರು ಬೆಳಿಗ್ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಜಿಲ್ಲೆ ಕೇಂದ್ರದಲ್ಲಿರುವ ಎಲ್ಲಾ ಚರ್ಚ್ಗಳಿಗೆ ವಿಶೇಷ ಅಲಂಕಾರ ಮಾಡಿ ಸಿಂಗಾರಗೊಳಿಸಲಾಗಿದ್ದು, ಎಲ್ಲೆಡೆ ಸಂಭ್ರಮದ ವಾತಾವರಣ ಕಂಡು ಬಂದಿತು. ಹೊಸ ವರ್ಷಾಚರಣೆಯ ದಿನವಾದ ಬುಧವಾರದಂದು ಕ್ರೈಸ್ತ ಬಾಂಧವರು ಬೆಳಿಗ್ಗೆ ಚರ್ಚ್ಗಳಿಗೆ ಆಗಮಿಸಿ ಪರಸ್ಪರ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ಶುಭಾಶಯ: ಇಲ್ಲಿನ ಜ್ಯೋತಿ ನಗರದ ಬಿಷಪ್ ಹೌಸ್ನಲ್ಲಿ ಜೆಡಿಎಸ್ ಮುಖಂಡರುಗಳು ಕ್ರೈಸ್ತ ದೇವಾಲಯಗಳ ಧರ್ಮಾಧ್ಯಕ್ಷ ಡಾ. ಅಂತೋಣಿಸ್ವಾಮಿಯವರನ್ನು ಭೇಟಿ ಮಾಡಿ ಹಬ್ಬದ ಶುಭಾಶಯಗಳನ್ನು ಕೋರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಡಾ. ಅಂತೋಣಿಸ್ವಾಮಿ ಅವರು, ಧಾರ್ಮಿಕ ಆಚರಣೆಗಳಿಂದ ಮನುಷ್ಯನಿಗೆ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ಎಂದರು.
ಸಹಬಾಳ್ವೆ: ಜೆಡಿಎಸ್ ಮುಖಂಡ ಕೆ. ಭರತ್ ಮಾತನಾಡಿ, ಶಾಂತಿ ಪ್ರೀಯರ ಕ್ರಿಸ್ಮಸ್ ಹಬ್ಬದ ದಿನದಂದು ಸಾಮಾನ್ಯ ಜನರ ಕಷ್ಟಗಳು ದೂರಾಗಿ ಸರ್ವಜನರು ಒಂದೇ ಎಂಬ ಸಂದೇಶ ಹೊತ್ತು ಒಗ್ಗಟ್ಟಿನಿಂದ ಬಾಳ್ವೆ ನಡೆಸುವಂತೆ ಭಗವಂತನು ಕೃಪೆ ತೋರಲು ತಮ್ಮಂತಹ ಧರ್ಮಗುರುಗಳ ಆಶೀರ್ವಾದ ಅಗತ್ಯವಿದೆ ಎಂದರು.
ಇದೇ ಸಂದರ್ಭದಲ್ಲಿ ಡಾ. ಅಂತೋಣಿಸ್ವಾಮಿಯವರನ್ನು ಪುಷ್ಪಗುಚ್ಚ ನೀಡಿ ಗೌರವಿಸಿ ಆಶೀರ್ವಾದ ಪಡೆಯಲಾಯಿತು. ನಗರಸಭೆ ಮಾಜಿ ಸದಸ್ಯ ಜಿ.ಎಸ್. ಚಂದ್ರಪ್ಪ ಮುಖಂಡರಾದ ರವಿ, ತಂಬಿಯನ್, ರಘು, ಶೇಖರ್ ಇತರರು ಹಾಜರಿದ್ದರು. ಚಿಕ್ಕಮಗಳೂರಿನ ಸಂತ ಜೋಸೆಫರ ಪ್ರಧಾನ ದೇವಾಲಯದಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ರೈಸ್ತ ಸಮುದಾಯದವರು ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, ಒಳ್ಳೆಯದಾಗಲಿ ಎಂದು ಹಾರೈಸಿದರು.
ಕ್ರಿಸ್ತ ಜಯಂತಿ ಆಚರಣೆ
ಮೂಡಿಗೆರೆ: ಕ್ರಿಸ್ತ ಜಯಂತಿ ಅಂಗವಾಗಿ ಆಚರಿಸುವ ಕ್ರಿಸ್ಮಸ್ ಅನ್ನು ಮೂಡಿಗೆರೆ ಚರ್ಚ್ ಆವರಣದಲ್ಲಿ ವಿಶೇಷ ಪೂಜೆಯೊಂದಿಗೆ ಆಚರಿಸಲಾಯಿತು.
ಧರ್ಮಗುರು ಫಾ. ಲ್ಯಾನ್ಸಿಪಿಂಟೋ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಬಳಿಕ ಬಲಿಪೂಜೆ ನಡೆಸಿ, ಬಾಲ ಏಸುವನ್ನು ಪ್ರತಿಷ್ಠಾಪಿಸಿ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಸಮಸ್ತರಿಗೂ ಕ್ರಿಸ್ಮಸ್ ಹಬ್ಬದ ಶುಭಾಶಯ ತಿಳಿಸಿದರು.