ಪಿಡಿಒಗಳು ಹೊಣೆ ಅರಿತು ಕೆಲಸ ನಿರ್ವಹಿಸಲಿ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ. 25
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸುವುದರ ಜೊತೆಗೆ ಸಂಘಟನೆಗೂ ಒತ್ತು ನೀಡುವ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳಬಹುದೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ಯ ಇಲಾಖೆಯ ನಿರ್ದೇಶಕ ಯಾಲಕ್ಕಿಗೌಡ ಹೇಳಿದ್ದಾರೆ.
ನಗರದ ಕುವೆಂಪು ಕಲಾಮಂದಿರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಧಿಕಾರಿಗಳ ಮತ್ತು ನೌಕರರ ಸಂಘದ ಜಿಲ್ಲಾ ಮಟ್ಟದ ಪ್ರಥಮ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳೊಂದಿಗೆ ಇಲಾಖೆಯಲ್ಲಿ ಬಿಡುಗಡೆಯಾಗುವ ಅನುದಾನದ ಬಗ್ಗೆ ಚರ್ಚಿಸಿ ಸಮರ್ಪಕವಾಗಿ ಬಳಸಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸುವಂತೆ ತಿಳಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸಂಘಟನೆಗೆ ಹೆಚ್ಚು ಗಮನ ನೀಡಬೇಕು. ಜತೆಗೆ ತಮ್ಮ ಕೆಲಸ ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸಬೇಕು. ಶಿಕ್ಷಣ ಇಲಾಖೆಯಷ್ಟೇ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸರಿಸಮಾನಾಗಿದ್ದರೂ ಒಗ್ಗಟ್ಟಿನ ಕೊರತೆಯಿದೆ ಎಂದರು.
ರಾಜ್ಯ, ಜಿಲ್ಲೆ, ತಾಲೂಕು ಮಟ್ಟದಲ್ಲೂ ಸಂಘಟನೆಯಲ್ಲಿ ಯಾವುದೇ ಗೊಂದಲವಿಲ್ಲದೆ ವಿಶ್ವಾಸ ಪಡೆದುಕೊಂಡು ಕೆಲಸ ನಿರ್ವಹಿಸಬೇಕು. ಇಲಾಖೆಯು ನಿಮ್ಮ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುತ್ತಿದೆ ಎಂದು ಹೇಳಿದರು.
ಶ್ರಮಿಸಲಿ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ಇಲಾಖೆಯ ನೌಕರರ ಸಂಘದ ರಾಜ್ಯಾಧ್ಯಕ್ಷ ಪರಶಿವಮೂರ್ತಿ ಮಾತನಾಡಿ, ಸಂಘ- ಸಂಸ್ಥೆಗಳು ಹೆಚ್ಚಿನ ಸಂಘಟನೆಯಿಂದ ಹೋರಾಟದ ಮೂಲಕ ನಮ್ಮ ತೊಂದರೆ ಬಗೆಹರಿಸಿಕೊಳ್ಳಬೇಕು. ರಾಜ್ಯಾದ್ಯಂತ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೆಚ್ಚಿನ ಕೆಲಸ ನಿರ್ವಹಿಸಿ ಗ್ರಾಮೀಣಾಭಿವೃದ್ಧಿಗೆ ಶ್ರಮಿಸುತ್ತಿದ್ದಾರೆಂದರು.
ಸರ್ಕಾರದಿಂದ ಅನೇಕ ಯೋಜನೆಗಳಿಗೆ ಬಿಡುಗಡೆಯಾಗುತ್ತಿರುವ ಹಣ ಎನ್‌ಜಿಒ ಮೂಲಕ ಹಣ ದುರುಪಯೋಗವಾಗಿ ಅಧಿಕಾರಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಇದರ ಬಗ್ಗೆ ಚರ್ಚಿಸಿ ಇಲಾಖೆಯಲ್ಲಿಯೇ ಅನುಭವವಿರುವ ಕಂಪ್ಯೂಟರ್ ಇತರೆ ಕೋರ್ಸುಗಳನ್ನು ನಿರ್ವಹಿಸುವಂತೆ ತಿಳಿಸಿದರು.
ಉಪ ಕಾರ್ಯದರ್ಶಿ ನಾಗರಾಜ್ ಮಾತನಾಡಿ, ಪಂಚಾಯಿತಿ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಹೆಚ್ಚು ಸ್ಪಂದಿಸಿ ಇಲಾಖಾವಾರು ಹೊಸ- ಹೊಸ ಯೋಜನೆಗಳಿಗೆ ವಿಚಾರ ಸಂಕಿರಣ ಮೂಲಕ ಸದಾ ಕಾಲ ಚೈತನ್ಯರಾಗಿರಬೇಕು ಎಂದರು.
ಜಿಪಂ ಉಪ ಕಾರ್ಯದರ್ಶಿ ರಾಜಗೋಪಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ್, ತಾಪಂ ಕಾರ್ಯ ನಿರ್ವಹಣಾಧಿಕಾರಿ ಧನರಾಜ್, ಮಾಜಿ ಜಿಲ್ಲಾಧ್ಯಕ್ಷ ನಾಗೇಶ್‌ಗೌಡ, ಗಂಗಾಧರ್ ಮೂರ್ತಿ, ಶರಣಪ್ಪ, ಜಗದೀಶ್, ಸಂಘದ ನೂತನ ಅಧ್ಯಕ್ಷ ನಾಗರಾಜ್, ಉಪಾಧ್ಯಕ್ಷ ಮಲ್ಲಿಕಾರ್ಜುನ್, ಹರ್ಷವರ್ಧನ್ ಇದ್ದರು.