ಮಕ್ಕಳಲ್ಲಿ ಆಟ- ಪಾಠದಲ್ಲಿ ಏಕಾಗ್ರತೆ ಅಗತ್ಯ
ಚಿಕ್ಕಮಗಳೂರು: ಆಟದಿಂದ ದೇಹಕ್ಕೆ ಆರೋಗ್ಯ, ಪಾಠದಿಂದ ಮನಸ್ಸಿಗೆ ಆರೋಗ್ಯ ಎಂದು ಉಡುಪಿ ಅದಮಾರು ಮಠದ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಆಲ್ದೂರಿನ ಪೂರ್ಣಪ್ರಜ್ಞಾ ಶಿಕ್ಷಣ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರಮಟ್ಟದ ಅಂತರ ಪೂರ್ಣಪ್ರಜ್ಞಾ ಶಾಲಾ ಬಾಲಕರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಆಟ ಆಡುವುದರ ಉದ್ದೇಶ ಜಗಳ, ಕಚ್ಚಾಟವಲ್ಲ. ಸೋಲು ಬಂದಾಗ ಅದನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಕಾರಣ ಕಂಡುಕೊಂಡು ಸ್ಥಿತಿಯನ್ನು ಉತ್ತಮಪಡಿಸಿಕೊಂಡು ಮುನ್ನಡೆಯಬೇಕು. ಪೂರ್ಣಪ್ರಜ್ಞಾ ಕುಟುಂಬದ ಸದಸ್ಯರ ಈ ಆಟೋಟ ಸ್ಪರ್ಧೆಗಳು ಹೊರಗಿನವರ ಜೊತೆ ಸ್ಪರ್ಧೆಗಿಳಿಯುವ ಮುನ್ನ ಪಡೆದುಕೊಳ್ಳುವ ತರಬೇತಿ ಎಂದ ಸ್ವಾಮೀಜಿ, ದೂರದ ಬಾಂಬೆ- ಬೆಂಗಳೂರು ವಿದ್ಯಾರ್ಥಿಗಳು ಸುಂದರ ಮಲೆನಾಡಿನಲ್ಲಿ ನಡೆಯುತ್ತಿರುವ ಕ್ರೀಡಾಕೂಟ ಸಂತೋಷಪಡುವರು ಎಂದರು.
ಸೋಲು- ಗೆಲವನ್ನು ಸಹಜ- ಸಮಾನವಾಗಿ ಸ್ವೀಕರಿಸಬೇಕು. ಎರಡೂ ಕಾಲುಗಳು ಒಟ್ಟಿಗೆ ಹೆಜ್ಜೆ ಹಾಕಿದರೆ ಮುಂದೆ ಸಾಗಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಒಂದು ಹೆಜ್ಜೆ ಮುಂದೆ ಹೋದಾಗ ಮತ್ತೊಂದು ಹೆಜ್ಜೆ ಹಿಂದೆ ಉಳಿದೇ ಉಳಿಯುತ್ತದೆ.
ಎರಡೂ ಹೆಜ್ಜೆ ಒಟ್ಟಿಗೆ ಹಾಕಲು ನಾವೇನು ಕಪ್ಪೆಗಳಲ್ಲ ಎಂದ ಅದಮಾರು ಮಠಾಧೀಶರು, ಆಟ-ಪಾಠ ಎರಡರಲ್ಲೂ ಏಕಾಗ್ರತೆ ನಿರಂತರ ಪ್ರಯತ್ನವಿದ್ದಾಗ ಗುರಿ ತಲುಪಬಹುದೆಂದರು.
ಆರೋಗ್ಯ ಕಾಪಾಡುತ್ತೆ: ಕುವೆಂಪು ವಿ.ವಿ. ದೈಹಿಕ ಶಿಕ್ಷಣ ಸಂಶೋಧನಾ ವಿಭಾಗದ ಸಹ ಪ್ರಾಧ್ಯಾಪಕ ಡಾ. ಗಜಾನನ ಬಿ. ಪ್ರಭು ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಸ್ಪರ್ಧೆ ಮತ್ತು ಸಹಕಾರ, ಪ್ಲೇ ಮತ್ತು ಪ್ರೇ ಜೀವನ ಪದ್ಧತಿ ಆಗಬೇಕು. ಕ್ರೀಡೆ ಮತ್ತು ದೈಹಿಕ ಶಿಕ್ಷಣ ಆರೋಗ್ಯ ಕಾಪಾಡುತ್ತದೆ.
ಆಟದ ಮೈದಾನ ಸದಾ ಚಟುವಟಿಕೆಯಲ್ಲಿರುವ ದೇಶಗಳಲ್ಲಿ ಆಸ್ಪತ್ರೆಗಳು ಖಾಲಿ ಇರುತ್ತವೆ ಎಂದರು.
ಅಂಕ ಮತ್ತು ದರ್ಜೆ ಜೊತೆಗೆ ವೈದ್ಯಕೀಯ ಮತ್ತು ತಾಂತ್ರಿಕ ಶಿಕ್ಷಣ ಪೋಷಕರ ಆದ್ಯತೆ ಮತ್ತು ಆಸಕ್ತಿಯಾಗಿರುವ ಸಂದರ್ಭದಲ್ಲಿ ಆರೋಗ್ಯ ಮತ್ತು ದೈಹಿಕ ಶಿಕ್ಷಣ ಕಳೆಗುಂದಿದೆ ಎಂದು ವಿಷಾದಿಸಿದ ಅವರು, ಪಾಶ್ಚಾತ್ಯ ದೇಶಗಳಲ್ಲಿ ಕ್ರೀಡೆ ಅತ್ಯಂತ ಪ್ರತಿಷ್ಠಿತ ಸ್ಥಾನ ಹೊಂದಿದೆ ಎಂದು ಹೇಳಿದರು.
ಕ್ರೀಡಾಪಟು ಸ್ಪರ್ಧಾ ಮನೋಭಾವ ಹೊಂದಿದ್ದು, ಬದುಕಿನಲ್ಲೂ ಸೋಲನ್ನು ವಾಸ್ತವಿಕತೆ ಅರ್ಥ ಮಾಡಿಕೊಂಡು ಎದುರಿಸುತ್ತಾನೆ. ಕ್ರೀಡೆಗಳಲ್ಲಿ ನೀತಿ- ನಿಯಮ ಪಾಲನೆ, ತೀರ್ಪನ್ನು ಸ್ವೀಕರಿಸುವ ಮನೋಭಾವ ಸಹಜವಾಗಿ ರೂಢಿಸಿಕೊಳ್ಳುವುದರಿಂದ ಕ್ರೀಡಾಪಟು ಸ್ಪರ್ಧೆ ಮತ್ತು ಸಹಕಾರ ಅಳವಡಿಸಿಕೊಂಡಿರುತ್ತಾನೆ.
ಕ್ರೀಡಾ ಸಾಧಕರು ಶೈಕ್ಷಣಿಕವಾಗಿ ಹಿಂದುಳಿದಿರುತ್ತಾರೆಂಬ ಭಾವನೆ ಸರಿಯಲ್ಲ. ವಾಸ್ತವವಾಗಿ ಸಾಮಾನ್ಯ ವಿದ್ಯಾರ್ಥಿಗಳಿಗಿಂತ ಕ್ರೀಡಾಪಟುಗಳ ಶಿಕ್ಷಣ ಮಟ್ಟ ಹೆಚ್ಚಿರುತ್ತದೆ ಎಂದರು.
ಜೀವನದ ಪದ್ಧತಿಯಾಗಲಿ: ಧ್ಯಾನ ಮತ್ತು ಆಟ ಜೀವನದಲ್ಲಿ ಮುಖ್ಯ. ಯಾವುದೇ ವಯೋವಾನದವರಿರಲಿ ಆಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರೆ ಉಲ್ಲಾಸಗೊಳ್ಳುತ್ತಾರೆ. ಧ್ಯಾನ- ಯೋಗ- ಪ್ರಾರ್ಥನೆಯೂ ಜೀವನದ ಪದ್ಧತಿಯಾಗಬೇಕು. ಪ್ರಾಮಾಣಿಕ ಪ್ರಯತ್ನವಿದ್ದರೆ ಖಂಡಿತಾ ಗುರಿ ತಲುಪಬಹುದೆಂದ ಡಾ. ಗಜಾನನ ಪ್ರಭು, ಪೂರ್ಣಪ್ರಜ್ಞಾ ಶಾಲೆಗಳು ಕ್ರೀಡೆಗೆ ನೀಡುತ್ತಿರುವ ಪ್ರಾಶಸ್ತ್ಯ ಅನುಕರಣೀಯ ಎಂದು ತಿಳಿಸಿದರು.
ಆಲ್ದೂರು ಪೂರ್ಣಪ್ರಜ್ಞಾ ಶಿಕ್ಷಣ ಕೇಂದ್ರದ ಕಾರ್ಯದರ್ಶಿ ಬಿ.ಬಿ. ರೇಣುಕಾರ್ಯ, ಸಹ ಕಾರ್ಯದರ್ಶಿಗಳಾದ ರಾಜೀವ ಮತ್ತು ಗಿರೀಶ, ಮುಖ್ಯ ಶಿಕ್ಷಕ ಜೆ. ವೆಂಕಟೇಶ ವೇದಿಕೆಯಲ್ಲಿದ್ದರು. ಶಿಕ್ಷಕರುಗಳಾದ ಶ್ರೀನಿವಾಸ ಸ್ವಾಗತಿಸಿ, ವನಿತಾ ಲವ ನಿರೂಪಿಸಿದರು. ಭರತ ವಂದಿಸಿದರು.
ಬಾಂಬೆ, ಬೆಂಗಳೂರು, ಭದ್ರಾವತಿ ಸೇರಿದಂತೆ ಒಟ್ಟು 450ಕ್ಕೂ ಹೆಚ್ಚು ಪೂರ್ಣಪ್ರಜ್ಞಾ ಪ್ರೌಢಶಾಲಾ ಬಾಲಕರು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದಾರೆ. ಕ್ರೀಡಾಪಟು ಯತೀಶ್ ಯಾದವ್ ಪ್ರಮಾಣವಚನ ಬೋಧಿಸಿದರು. ಆಕರ್ಷಕ ಪಥಸಂಚಲನ ನಡೆಯಿತು.