ಕಾಫಿ ತೋಟ ವಿವಾದ: ಗುಂಪು ಘರ್ಷಣೆ
ಕೊಪ್ಪ: ಕಾಫಿ ತೋಟ ಸ್ವಾಧೀನ ವಿವಾದದಲ್ಲಿ ತಾಲೂಕಿನ ಹುಲುಗರಡಿ ಬಳಿ ಬುಧವಾರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದು ಜಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭದ್ರಾ ಕಾಫಿ ತೋಟದ ಮಾಲೀಕರು 1971 ರಲ್ಲಿ ಡಿ.ಸಿ. ದಿವಾಕರ್‌ರವರಿಗೆ ಮಾರಟ ಮಾಡಿದ್ದ ಸುಮಾರು 30 ಎಕರೆ ಭೂಮಿಯೇ ವಿವಾದದ ಕೇಂದ್ರ.
ಬುಧವಾರ ಭೂಮಿಯ ಮೇಲೆ ಹಕ್ಕುದಾರಿಕೆ ಸಾಧಿಸಲು ಕೆ.ಟಿ. ಸುಬ್ಬಣ್ಣ, ಕೀರ್ತಿರಾಜ್, ಸುಂದರ್ ಹಾಗೂ ಇತರ ಆಂಜನ್ ಹುಲಿಗರಡಿ ಎಂಬುವರು ಗುಡ್ಡೇತೋಟದ ಗಡಿಭಾಗದಲ್ಲಿರುವ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಬೇಲಿ ನಿರ್ಮಿಸಿದಲ್ಲದೆ ಫಸಲು ಹಾನಿ ಮಾಡಿ ವ್ಯವಸ್ಥಾಪಕ ಸಿಬ್ಬಂದಿಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಭದ್ರಾ ಎಸ್ಟೇಟ್ ವ್ಯವಸ್ಥಾಪಕ ಅಜಯ್ ದೂರು ನೀಡಿದ್ದಾರೆ.
ಕೌಳಿಯ ಕೆ.ಟಿ. ಸುಬ್ಬಣ್ಣ ಭದ್ರಾ ಕಾಫಿತೋಟದ ಮಾಲೀಕರು ನಮ್ಮ ಸ್ವಾಧೀನದಲ್ಲಿರುವ ಭೂಮಿ ಪ್ರವೇಶಕ್ಕೆ ಹಾಗೂ ಫಸಲು ಕೊಯ್ಲಿಗೆ ಅಡ್ಡಿಪಡಿಸುತ್ತಿದ್ದಾರೆ ಎಂದು ದೂರಿದ್ದಾರೆ.
ಎರಡೂ ಗುಂಪುಗಳ ಸಮಕ್ಷಮದಲ್ಲಿ ಸರ್ವೆ ನಡೆಸಿ ಕೆ.ಟಿ. ಸುಬ್ಬಣ್ಣವರ ಹಕ್ಕುದಾರಿಕೆಯ ಭೂಮಿಯ ಗಡಿ ಗುರ್ತಿಸಿದರೆ ಸಮಸ್ಯೆ ಪರಿಹಾರ ಸಾಧ್ಯ ಎಂದರು. ಗುಡ್ಡೇತೋಟ ಹಾಗೂ ಹುಲಿಗರಡಿಯ ಗಡಿಯಲ್ಲಿರುವ ಕಾಫಿ ತೋಟದ ವಿವಾದ ಘರ್ಷಣೆ ಅತಂಕ ಮೂಡಿಸಿದ್ದು, ಸಮಸ್ಯೆ ಪರಿಹಾರಕ್ಕೆ ಶೀಘ್ರ ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.