12 ಎಕರೆ ಕಾಫಿ ತೋಟ ತೆರವು
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.27
ಮೀಸಲು ಅರಣ್ಯ ಪ್ರದೇಶದಲ್ಲಿರುವ ಕಾಫಿ ತೋಟಗಳನ್ನು ತೆರವುಗೊಳಿಸುವ ಪ್ರಕ್ರಿಯೆ ಜಿಲ್ಲೆಯಲ್ಲಿ ಮುಂದುವರಿದಿದೆ. ತಾಲೂಕಿನ ಇಂದಾವರ ಗ್ರಾಮದ ಸಮೀಪದ ಮೀಸಲು ಅರಣ್ಯವನ್ನು ಒತ್ತುವರಿ ಮಾಡಿ ಬೆಳೆದಿದ್ದ 12 ಎಕರೆ 12 ಗುಂಟೆ ಕಾಫಿ ತೋಟವನ್ನು ಅರಣ್ಯ ಇಲಾಖೆಯವರು ಶುಕ್ರವಾರ ತೆರವುಗೊಳಿಸಿದರು.
ಜಿಯಾವುಲ್ ಅವರು ಇಂದಾವರ ಗ್ರಾಮದ ಸರ್ವೆ ನಂಬರ್ 32ರಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಕಾಫಿ ಬೆಳೆದಿದ್ದರು. ಒತ್ತುವರಿ ಪ್ರದೇಶವನ್ನು ಖುಲ್ಲಾಗೊಳಿಸುವಂತೆ ಜಿಯಾವುಲ್ ಅವರಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿ ಮಾಡಿ, ಕಾಲಾವಕಾಶ ನೀಡಿತ್ತು. ಅದುದರಿಂದ ಅವರು ಗಿಡದಲ್ಲಿದ್ದ ಕಾಫಿ ಹಣ್ಣನ್ನು ಕೊಯ್ದುಕೊಂಡಿದ್ದರು.
ಅರಣ್ಯ ಒತ್ತುವರಿ ಪ್ರದೇಶವನ್ನು ತೆರವುಗೊಳಿಸುವಂತೆ ಹೈಕೋರ್ಟ್ ಆದೇಶ ಹೊರಡಿಸಿದ್ದರಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರಥಮ ಹಂತದಲ್ಲಿ 10 ಎಕರೆ ಮೇಲ್ಪಟ್ಟ ಒತ್ತುವರಿ ಪ್ರದೇಶವನ್ನು ಅರಣ್ಯ ಇಲಾಖೆಯವರು ತೆರವುಗೊಳಿಸುತ್ತಿದ್ದಾರೆ. ಚಿಕ್ಕಮಗಳೂರು ವಲಯದಲ್ಲಿ ಮೀಸಲು ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿ ಕಾಫಿಯನ್ನು ಬೆಳೆಸಿದ್ದ 3 ೋಟಗಳನ್ನು ತೆರವುಗೊಳಿಸಲಾಗಿದೆ. ಇದು, 4ನೇ ತೆರವು ಕಾರ್ಯಾಚರಣೆಯಾಗಿದೆ.
ತೆರವು ಕಾರ್ಯಾಚರಣೆ ಸಂದರ್ಭ ಕಂದಾಯ, ಅರಣ್ಯ ಇಲಾಖೆಯವರು ಹಾಗೂ ಪೊಲೀಸ್ ಸಿಬ್ಬಂದಿ ಹಾಜರಿದ್ದರು.
ಇದೇ ಸಂದರ್ಭ ಚಿಕ್ಕಮಗಳೂರು ಸಹಾಯಕ ವಲಯ ಅರಣ್ಯಾಧಿಕಾರಿ ಎಂ.ಶಶಿಧರ್, ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿ ಅಜೀಜ್, ಕಡೂರು ವಲಯ ಅರಣ್ಯಾಧಿಕಾರಿ ಗಂಗಾಧರ್, ಮುತ್ತೋಡಿ ವಲಯದ ಅರಣ್ಯಾಧಿಕಾರಿ ಪ್ರಸಾದ್ ಸ್ಥಳದಲ್ಲಿ ಹಾಜರಿದ್ದರು.