ಮಾಹಿತಿ ಕೊರತೆ: ಹಣ ವಿಳಂಬ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.27
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಾಹಿತಿಗಳು ಸಿಗದೇ ಇರುವುದರಿಂದ ಅನುದಾನ ರಹಿತ ಶಾಲೆಗಳನ್ನು ಅನುದಾನದ ವ್ಯಾಪ್ತಿಗೆ ಸೇರಿಸಲು ತಡವಾಗಿದೆ ಎಂದು ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಇದು, ಆತುರವಾಗಿ ತೆಗೆದುಕೊಳ್ಳಬೇಕಾದ ಕ್ರಮವಲ್ಲ. ಅದುದರಿಂದ ಶಿಕ್ಷಕರು ಪ್ರತಿಭಟನೆ ಕೈಬಿಡಬೇಕು. ಅವರ ಬೇಡಿಕೆ ಈಡೇರಿಸಲು ಸರ್ಕಾರ ಬದ್ಧವಾಗಿದೆ ಎಂದು ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡುವಾಗ ತಿಳಿಸಿದರು.
ಜೀವನ ನಿರ್ವಹಣೆ ಕಷ್ಟ: ಅನುದಾನ ನೀಡಬೇಕೆಂಬುದು ಇಂದಿನ ಸಮಸ್ಯೆ ಏನಲ್ಲ. ಕಳೆದ 15 ವರ್ಷಗಳಿಂದ ಈ ಬೇಡಿಕೆಯನ್ನು ಶಿಕ್ಷಕರು ಮುಂದಿಡುತ್ತಾ ಬಂದಿದ್ದಾರೆ. ಶಾಲೆಗಳು ಅನುದಾನಕ್ಕೆ ಒಳಪಡಿಸದೆ ಇರುವುದರಿಂದ ಶಿಕ್ಷಕರಿಗೆ ಜೀವನ ನಿರ್ವಹಣೆ ಕಷ್ಟವಾಗಿದೆ ಎಂಬುದು ಸರ್ಕಾರದ ಗಮನಕ್ಕೆ ಬಂದಿದೆ. ಅದುದರಿಂದ ಕಳೆದ ನಾಲ್ಕು ತಿಂಗಳಿಂದ ಸರ್ಕಾರ ಬೇಡಿಕೆ ಈಡೇರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದರು.
ಮುಖ್ಯಮಂತ್ರಿಗೆ ಶಿಫಾರ್ಸು: ರಾಜ್ಯದಲ್ಲಿ ಒಟ್ಟು 273 ಅನುದಾನ ರಹಿತ ಶಾಲೆಗಳಿವೆ. ಅವುಗಳಿಗೆ ಅನುದಾನ ನೀಡುವಂತೆ ಮುಖ್ಯಮಂತ್ರಿಯವರಿಗೆ ಶಿಫಾರ್ಸು ಮಾಡಿದ್ದೇನೆ. ಈ ವರದಿಯನ್ನು ಮುಖ್ಯಮಂತ್ರಿಯವರು ಆರ್ಥಿಕ ಇಲಾಖೆಗೆ ಕಳುಹಿಸಿಕೊಟ್ಟಿದ್ದಾರೆ ಎಂದ ಅವರು, ಅನುದಾನ ಕೋರಿ ಬಂದಿರುವ ಅರ್ಜಿಗಳನ್ನು ಶೈಕ್ಷಣಿಕ ವಿಭಾಗವಾರು ಮೂರು ಮಂದಿ ಹೊಂದಿರುವ ಸಮಿತಿಗಳನ್ನು ರಚನೆ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಬೆಳಗಾವಿ ಅಧಿವೇಶನಕ್ಕೂ ಮುನ್ನ 135 ಶಾಲೆಗಳ ವರದಿ ಕೈ ಸೇರಿತ್ತು. ಆಗ ಅನುದಾನಕ್ಕೆ ಆ ಶಾಲೆಗಳನ್ನು ಒಳಪಡಿಸಿದರೆ ಈ ಕೆಲಸ ಪರಿಪೂರ್ಣವಾಗುವುದಿಲ್ಲ ಎಂದು ಜನಪ್ರತಿನಿಧಿಗಳು ಸಲಹೆ ನೀಡಿ, ಎಲ್ಲಾ ಶಾಲೆಗಳ ವರದಿಯನ್ನು ಬಂದ ನಂತರವೇ ಅನುದಾನ ಶಾಲೆಗಳನ್ನು ಘೋಷಣೆ ಮಾಡಬೇಕೆಂದು ಆಗ್ರಹಿಸಿದರು. ಅದುದರಿಂದ ಎಲ್ಲಾ ಜಿಲ್ಲೆಗಳ ವರದಿಯನ್ನು ಬರುವವರೆಗೆ ಕಾಯಲೇಬೇಕಾಗಿದೆ ಎಂದು ಹೇಳಿದರು.
ಪರಿಶೀಲನೆ: ಅನುದಾನ ಕೋರಿ ಬಂದಿರುವ ಅರ್ಜಿಗಳ ಪೈಕಿ ಕೆಲವು ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳಿಲ್ಲ, ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರಿಲ್ಲ, ಕೆಲವೆಡೆ ವಿದ್ಯಾರ್ಥಿಗಳೇ ಇಲ್ಲ ಎಂಬ ದೂರುಗಳು ಬಂದಿವೆ. ಅದುದರಿಂದ ಅರ್ಜಿಗಳನ್ನು ವಿಭಾಗವಾರು ಸಮಿತಿ ಮಾಡಿ ಪರಿಶೀಲನೆ ನಡೆಸಲಾಗುತ್ತಿದೆ. ಮೂಲಭೂತ ಸೌಲಭ್ಯಗಳ ಕೊರತೆ ಇರುವಂತಹ ಶಾಲೆಗಳಿಗೆ ಸೌಲಭ್ಯ ಕಲ್ಪಿಸಿಕೊಳ್ಳಲು 3 ವರ್ಷಗಳ ಕಾಲಾವಕಾಶ ನೀಡಲಾಗಿದೆ ಎಂದು ತಿಳಿಸಿದರು.
ಡಿ.26 ರಂದು ತಮ್ಮನ್ನು ಭೇಟಿ ಮಾಡುವುದಾಗಿ ಅನುದಾನ ರಹಿತ ಶಿಕ್ಷಕರಿಗೆ ಹೇಳಿದ್ದೆ. ಆದರೆ, ಹೋಗಲು ಆಗಿರಲಿಲ್ಲ. ಶಿಕ್ಷಕರು ಆತ್ಮಹತ್ಯೆಗೆ ಯತ್ನಿಸಿರುವುದು ನೋಡಿದರೆ ಮಾತು ಕೊಟ್ಟಿದ್ದೇ ಅಪಾರ್ಥವಾಯಿತೇ ಎಂದ ಸಚಿವರು, ಒಳ್ಳೆಯ ರೀತಿಯಲ್ಲಿ ನಡೆದುಕೊಳ್ಳುವುದು ತಪ್ಪೇ. ಸಮಸ್ಯೆಯ ಪರಿಹಾರಕ್ಕೆ ಆತ್ಮಹತ್ಯೆ ಪರಿಹಾರವಲ್ಲ. ಮಕ್ಕಳಿಗೆ ಪಾಠ ಮಾಡುವ ಶಿಕ್ಷಕರು ಈ ದಾರಿಯಲ್ಲಿ ನಡೆದಿರುವುದು ಸರಿಯಲ್ಲ. ಆತ್ಮಹತ್ಯೆಗೆ ಯತ್ನಿಸುವ ಮೂಲಕ ಒತ್ತಡ ಹೇರಿದರೆ ಅನುದಾನ ಘೋಷಣೆ ಮಾಡುವ ಕೆಲಸ ವಿಳಂಬವಾಗುವ ಸಾಧ್ಯತೆ ಇದೆ. ಅನುದಾನ ರಹಿತ ಶಿಕ್ಷಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸರ್ಕಾರ ಮುಂದಿನ ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಿದೆ. ಅದುದರಿಂದ ಶಿಕ್ಷಕರು ತಮ್ಮ ಪ್ರತಿಭಟನೆಯನ್ನು ಕೈಬಿಡಬೇಕು ಎಂದು ಹೇಳಿದರು.
ಪಠ್ಯ ಪುಸ್ತಕದಲ್ಲಿ ಬದಲಾವಣೆ ಇಲ್ಲ: ಬರುವ ಶೈಕ್ಷಣಿಕ ವರ್ಷದಲ್ಲಿ ಶಾಲೆಗಳ ಪಠ್ಯಪುಸ್ತಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಸಚಿವ ಕಿಮ್ಮನೆ ರತ್ನಾಕರ್ ಹೇಳಿದ್ದಾರೆ.
ಪಠ್ಯ ಪುಸ್ತಕ ಬದಲಾವಣೆ ಮಾಡಬೇಕಾದರೆ ವಿಷಯ ತಜ್ಞರ ಅಭಿಪ್ರಾಯ ಪಡೆಯಬೇಕು. ಸಂಪಾದಕೀಯ ಮಂಡಳಿಯ ಸಲಹೆ ಪಡೆಯಬೇಕು. ಈ ಕೆಲಸ ತಕ್ಷಣಕ್ಕೆ ಆಗುವುದಿಲ್ಲ ಇದಕ್ಕೆ 5 ರಿಂದ 6 ತಿಂಗಳು ಕಾಲಾವಕಾಶಬೇಕು. ಯಾವುದೇ ಸಮುದಾಯ, ಜಾತಿ, ಧರ್ಮಕ್ಕೆ ನೋವಾಗುವ ಪದಗಳು ಬಳಕೆಯಾಗಿದ್ದರೆ, ಸಂವಿಧಾನದ ಆಶಯಕ್ಕೆ ವಿರುದ್ಧವಾಗಿದ್ದರೆ ಅವುಗಳನ್ನು ಕೈಬಿಡಲಾಗುವುದು. ಪಠ್ಯ ಪುಸ್ತಕ ಬದಲಾವಣೆ ಮಾಡಬೇಕೆಂದು ಕೋಮು ಸೌಹಾರ್ದ ವೇದಿಕೆ ಲಿಖಿತವಾಗಿ ದೂರು ಸಲ್ಲಿಸಿದೆ. ಈ ಸಂಬಂಧ ಕೆಲವರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ ಎಂದರು.
ಮುಂದಿನ ಶೈಕ್ಷಣಿಕ ಆರಂಭದಲ್ಲೇ ಅಂದರೆ ಜೂನ್ 1 ರೊಳಗೆ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ ನೀಡಬೇಕಾಗಿರುವುದರಿಂದ ಈಗಾಗಲೇ ಟೆಂಡರ್ ಪ್ರಕ್ರಿಯೆಯೂ ಸಹ ಪೂರ್ಣಗೊಂಡಿದೆ. ಅದುದರಿಂದ ಪಠ್ಯ ಪುಸ್ತಕ ಬದಲಾವಣೆ ಬರುವ ವರ್ಷದಲ್ಲಿ ಸಾಧ್ಯವಿಲ್ಲ. ನಂತರದ ವರ್ಷದಲ್ಲಿ ಬದಲಾವಣೆಗೆ ಪರಿಶೀಲನೆ ನಡೆಸಬಹುದು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಲ್. ಮೂರ್ತಿ, ಉಪಾಧ್ಯಕ್ಷ ಶಾಂತೇಗೌಡ ಉಪಸ್ಥಿತರಿದ್ದರು.