ವಿಕಲಚೇತನರ ಪಾಸುಗಳ ಅವಧಿ ವಿಸ್ತರಣೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಮಾನ್ಯತೆ ಪಡೆದ ವಿಕಲಚೇತನರಿಗೆ ಡಿಸೆಂಬರ್ ಅಂತ್ಯದವರೆಗೆ ರಿಯಾಯಿತಿ ಪಾಸುಗಳನ್ನು ವಿತರಿಸಲಾಗಿರುತ್ತದೆ. ಹೊಸ ವಿಕಲಚೇತನರ ಪಾಸುಗಳ ವಿತರಣೆ ಹಾಗೂ ಹಳೆ ವಿಕಲಚೇತನರ ಪಾಸುಗಳ ನವೀಕರಣ ಕಾರ್ಯಕ್ರಮವನ್ನು ಜನವರಿ ಮಾಹೆಯಲ್ಲಿ ಹಮ್ಮಿಕೊಂಡ ಹಿನ್ನೆಲೆಯಲ್ಲಿ ಫೆಬ್ರವರಿ 28 ರವರೆಗೆ ತಾತ್ಕಾಲಿಕವಾಗಿ ಹಾಲಿ ಇರುವ ವಿಕಲಚೇತನರ ಪಾಸುಗಳನ್ನು ನಿಗಮದ ನಿರ್ವಾಹಕರಿಗೆ ತೋರಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಪ್ರಯಾಣಿಸಬಹುದಾಗಿದೆ.
ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ
ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವಾರ್ಷಿಕ ಕ್ರೀಡಾಕೂಟ ಉದ್ಘಾಟನಾ ಸಮಾರಂಭವು ಜನವರಿ 3ರ ಬೆಳಿಗ್ಗೆ 9 ಗಂಟೆಗೆ ನಗರದ ರಾಮನಹಳ್ಳಿಯ ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ ಉದ್ಘಾಟಿಸಲಿದ್ದಾರೆ. ಲೈಫ್ ಲೈನ್ ಫೀಡ್ಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಕುಮಾರ್ ಹೆಗ್ಡೆ, ಅಥ್ಲೆಟಿಕ್ ಅಸೋಸಿಯೇಷನ್ನ ಅಧ್ಯಕ್ಷ ಬಿ.ಹೆಚ್. ನರೇಂದ್ರ ಪೈ, ಕಡೂರು ಕ್ಲಬ್ನ ಕಾರ್ಯದರ್ಶಿ ಪೃಥ್ವಿರಾಜ್ ಬೇಡಿ ಹಾಗೂ ಗಾಲ್ಫ್ ಕ್ಲಬ್ನ ಅಧ್ಯಕ್ಷ ಎ.ಬಿ. ಸುದರ್ಶನ್ ಭಾಗವಹಿಸಲಿದ್ದಾರೆ. ಜನವರಿ 5 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಮಂಗಳೂರು ಪಶ್ವಿಮ ವಲಯದ ಪೊಲೀಸ್ ಮಹಾ ನಿರೀಕ್ಷಕರಾದ ಸಿ.ಹೆಚ್. ಪ್ರತಾಪ್ ರೆಡ್ಡಿ, ವಿಶೇಷ ಆಹ್ವಾನಿತರಾಗಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎಸ್. ಯಾದವ್ ಭಾಗವಹಿಸಲಿದ್ದಾರೆ.
ಜನಸ್ಪಂದನ ಕಾರ್ಯಕ್ರಮ
ನರಸಿಂಹರಾಜಪುರ: ತಾಲೂಕಿನಲ್ಲಿ 2014ರ ಜನವರಿಯಿಂದ ಜೂನ್ವರೆಗೆ ನಡೆಯುವ ಜನಸ್ಪಂದನ ಕಾರ್ಯಕ್ರಮದ ವೇಳಾ ಪಟ್ಟಿ ಮತ್ತು ಸ್ಥಳವನ್ನು ತಾಲೂಕು ಕಚೇರಿ ಪ್ರಕಟಸಿದೆ.
ಜ.4 ಕಸಬಾ ಹೋಬಳಿಯ ಮೆಣಸೂರು ಗ್ರಾಪಂನ ಕಳ್ಳಿಕೊಪ್ಪ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಫೆ.1ರಂದು ಬಾಳೆಹೊನ್ನೂರು ಹೋಬಳಿ ಕರ್ಕೇಶ್ವರ ಗ್ರಾಮ ಪಂಚಾಯ್ತಿ ಕಚೇರಿ, ಮಾ.1 ಕಸಬಾ ಹೋಬಳಿ ಹೊನ್ನೇಕೊಡಿಗೆ ಗ್ರಾಪಂ ವರ್ಕಾಟೆ ಶಾಲಾ ಆವರಣ, ಏ.5ರಂದು ಬಾಳೆಹೊನ್ನೂರು ಹೋಬಳಿ ರಂಭಾಪುರಿ ಪೀಠದ ಜಗದ್ಗುರು ರುದ್ರ ಮುನೇಶ್ವರ ವಸತಿ ಪ್ರೌಢಶಾಲೆ, ಮೇ.3ರಂದು ಕಸಬಾ ಹೋಬಳಿ ಮುತ್ತಿನಕೊಪ್ಪ ಗ್ರಾಮ ಪಂಚಾಯ್ತಿ ಕೋಣನಕೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಜೂ.7ರಂದು ಬಾಳೆಹೊನ್ನೂರು ಹೋಬಳಿ ಬನ್ನೂರು ಗ್ರಾಮ ಪಂಚಾಯ್ತಿ ಆವರಣ.
ವಾಸ್ತವಕ್ಕೆ ಬದ್ಧರಾಗಿದ್ದ ಜಿಎಸ್ಎಸ್: ಮಹೇಶ್
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ.26
ಕಲ್ಪನೆ, ಊಹೆಗಿಂತ ವಾಸ್ತವಕ್ಕೆ ಬದ್ಧರಾದವರು ಡಾ. ಜಿ.ಎಸ್.ಎಸ್. ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಚಟ್ನಳ್ಳಿ ಮಹೇಶ್ ಹೇಳಿದ್ದಾರೆ. ನಗರದ ಯುರೇಕಾ ಅಕಾಡೆಮಿಯಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಇತ್ತೀಚೆಗೆ ಏರ್ಪಡಿಸಿದ್ದ ಜಿ.ಎಸ್.ಎಸ್. ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಅವರು, ಮಿತ, ಮೆದುವಾದ ಮಾತಿನಿಂದ ಕ್ರಾಂತಿಯನ್ನು ಬಯಸಿದವರು ಶಿವರುದ್ರಪ್ಪ. ಇವರ ಮೇಲೆ ಶರಣ ಪ್ರಭಾವ ದಟ್ಟವಾಗಿತ್ತು. ಪ್ರೀತಿ ಮತ್ತು ಸ್ನೇಹದ ಪ್ರತೀಕವಾಗಿದ್ದರು. ಜಿಲ್ಲೆಯೊಂದಿಗೆ ನಿಕಟ ಬಾಂಧವ್ಯ ಹೊಂದಿದ್ದರೆಂದು ತಿಳಿಸಿದರು. ಜಿಲ್ಲಾ ಕಸಾಪ ಅಧ್ಯಕ್ಷ ಶಿವಸ್ವಾಮಿ ಮಾತನಾಡಿದರು. ಸಾಹಿತಿ ತಿಪ್ಪೇರುದ್ರಪ್ಪ, ಮಂಜುನಾಥ ಕಾಮತ್, ದೀಪಕ ದೊಡ್ಡಯ್ಯ, ನಾಗರಾಜರಾವ್ ಮಾತನಾಡಿದರು. ಮಲ್ಲಿಗೆ ಸುಧೀರ್ ಮತ್ತು ಸುಧೀರ್ ಗೀತ ನಮನ ಸಲ್ಲಿಸಿದರು.