ಕಾನೂನು ಮಾಹಿತಿ ಎಲ್ಲರನ್ನೂ ತಲುಪಲಿ
ಚಿಕ್ಕಮಗಳೂರು: ಕಾನೂನಿನ ಅರಿವು ಮೂಡಿಸುವುದೇ ಪ್ಯಾರಾ ಲೀಗಲ್ ವಾಲಂಟಿಯರ್ಸ್ ಸ್ಕೀಮ್ನ ಮೂಲ ಉದ್ದೇಶ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶೆ ಎಚ್.ಎಸ್. ಕಮಲ ಹೇಳಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಿದ್ದ ಪ್ಯಾರಾ ಲೀಗಲ್ ವಾಲಂಟಿಯರ್ಗಳಿಗೆ ಗುರುತಿನ ಚೀಟಿ ವಿತರಣೆ ಹಾಗೂ ಕಾನೂನು ಸಾಕ್ಷರತಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಾನೂನು ತಿಳಿವಳಿಕೆಯನ್ನು ಪ್ರತಿಯೊಬ್ಬ ಜನಸಾಮಾನ್ಯರಿಗೂ ತಲುಪಿಸುವ ಉದ್ದೇಶದಿಂದ ಕಾನೂನು ಸೇವಾ ಪ್ರಾಧಿಕಾರಗಳು ಪ್ಯಾರಾ ಲೀಗಲ್ ವಾಲಂಟಿಯರ್ಗಳನ್ನು ನೇಮಿಸಿದೆ. ಅವರು ಸಮಾಜದ ಕೊನೆಯ ವ್ಯಕ್ತಿಯವರೆಗೂ ಕಾನೂನು ಮಾಹಿತಿಯನ್ನು ತಲುಪಿಸುವ ಕೆಲಸ ನಿರ್ವಹಿಸಬೇಕೆಂದು ತಿಳಿಸಿದರು.
ಪ್ರಸ್ತುತ ಭ್ರೂಣ ಹತ್ಯೆಯಂತಹ ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. 2001ರ ಜನಗಣತಿಗೆ ಹೋಲಿಸಿದಲ್ಲಿ 2011ರ ಜನಗಣತಿಯಲ್ಲಿ ಗಂಡು- ಹೆಣ್ಣಿನ ಅನುಪಾತದಲ್ಲಿ ಅಲ್ಪಮಟ್ಟಿನ ಏರಿಕೆ ಕಂಡುಬಂದಿದೆ. ಈ ನಿಟ್ಟಿನಲ್ಲಿ ಅರಿವು ಪಡೆಯುವ ಮೂಲಕ ಭಾರತದಿಂದ ಭ್ರೂಣ ಹತ್ಯೆಯಂತಹ ಪಿಡುಗು ಸಂಪೂರ್ಣವಾಗಿ ತೊಡೆದು ಹಾಕಲು ಪ್ರಯತ್ನಿಸೋಣ ಎಂದು ಕರೆ ನೀಡಿದರು.
ಇದೇ ಸಂದರ್ಭ ತರಬೇತುಗೊಂಡ ಪ್ಯಾರಾ ಲೀಗಲ್ ವಾಲಂಟಿಯರ್ಗಳಿಗೆ ಗುರುತಿನ ಚೀಟಿಯನ್ನು ವಿತರಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಆರ್.ಸಿ.ಎಚ್.ಒ. ಡಾ. ಶಿವಕುಮಾರ್ ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಹತ್ಯೆ ನಿಷೇಧ ಕಾಯ್ದೆ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ವಕೀಲರ ಸಂಘದ ಅಧ್ಯಕ್ಷ ಅಫ್ತಾಬ್ ಅಹಮದ್ ಮಾತನಾಡಿ, ಸಮಾಜದ ಹಿತದೃಷ್ಟಿಯನ್ನು ಕಾಪಾಡುವ ಮೂಲ ಉದ್ದೇಶದೊಂದಿಗೆ ಕಾನೂನು ಸೇವಾ ಪ್ರಾಧಿಕಾರ ಇಂತಹ ಅರಿವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದು ತಿಳಿಸಿದರು.
ನಗರದ ನ್ಯಾಯಾಧೀಶರು, ವಕೀಲರ ಸಂಘದ ಕಾರ್ಯದರ್ಶಿ ಐ.ಎಸ್. ತೇಜಸ್ವಿ, ಸುಮಿತ್ರಾ ಉಪಸ್ಥಿತರಿದ್ದರು. ಹಿರಿಯ ಸಿವಿಲ್ ನ್ಯಾಯಾಧೀಶ ಮಹದೇವಯ್ಯ ಸ್ವಾಗತಿಸಿದರು. ಸುರೇಶ್ ವಂದಿಸಿದರು.