ಚಿಕ್ಕಮಗಳೂರು ಸಹಜ ಸ್ಥಿತಿಗೆ
ಕ.ಪ್ರ.ವಾರ್ತೆ , ಚಿಕ್ಕಮಗಳೂರು , ಡಿ.29
ಪ್ರಾರ್ಥನಾ ಮಂದಿರ ಬಳಿ ಲಾಠಿ ಪ್ರಹಾರ, ಕಲ್ಲು ತೂರಾಟದಿಂದಾಗಿ ಪ್ರಕ್ಷುಬ್ಧಗೊಂಡಿದ್ದ ಚಿಕ್ಕಮಗಳೂರು ಭಾನುವಾರ ಸಹಜ ಸ್ಥಿತಿಗೆ ಮರಳಿದೆ. ಜನಜೀವನ, ವಾಹನಗಳ ಓಡಾಟ ಎಂದಿನಂತೆ ಸಾಗಿತ್ತು. ಭಾನುವಾರ ರಜೆ ದಿನವಾಗಿದ್ದರಿಂದ ಕೆಲವು ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ದೇವಾಲಯ, ಪ್ರಾರ್ಥನಾ ಮಂದಿರ ಹಾಗೂ ಆಯಾ ಕಟ್ಟಿನ ಸ್ಥಳಗಳಲ್ಲಿ ಕೆಎಸ್ಆರ್ಪಿ, ಡಿಎಆರ್ ತುಕಡಿಗಳು ನಿಯೋಜನೆಗೊಂಡಿದ್ದವು. ಶನಿವಾರದ ಬಂದೋಬಸ್ತ್ ಭಾನುವಾರವೂ ಮುಂದುವರಿದಿತ್ತು. ಪ್ರಾರ್ಥನಾ ಮಂದಿರ ಅಪವಿತ್ರಗೊಳಿಸಿದ ಸಂದರ್ಭದಲ್ಲಿ ಸಂಭವಿಸಿದ ಘಟನೆಗೆ ಸಂಬಂಧಿಸಿದಂತೆ 2 ಪ್ರಕರಣಗಳು ದಾಖಲಾಗಿವೆ. ಆರೋಪಿಗಳ ಪತ್ತೆ ಕಾರ್ಯಕ್ಕಾಗಿ ಪೊಲೀಸ್ ಇಲಾಖೆ ವಿಶೇಷ ತಂಡವನ್ನು ರಚನೆ ಮಾಡಿ, ಶೋಧ ಕಾರ್ಯವನ್ನು ಮುಂದುವರಿಸಿದೆ.
ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಎನ್.ರೆಡ್ಡಿ, ಪಶ್ಚಿಮ ವಲಯದ ಐಜಿಪಿ ಪ್ರತಾಪ್ ರೆಡ್ಡಿ ಅವರು ಚಿಕ್ಕಮಗಳೂರಿನಲ್ಲಿ ಮೊಕ್ಕಾಂ ಹೂಡಿದ್ದಾರೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಅಭಯಚಂದ್ರ ಜೈನ್ ಹಾಗೂ ಉಡುಪಿ- ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೆ.ಜಯಪ್ರಕಾಶ್ ಹೆಗ್ಡೆ ಭಾನುವಾರ ಪ್ರಾರ್ಥನಾ ಮಂದಿರಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭ ಮುಸ್ಲಿಂ ಸಮುದಾಯದವರು ತಮ್ಮ ಅಳಲು ತೋಡಿಕೊಂಡರು. ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.
ವರದಿ ಸಲ್ಲಿಕೆ: ಚಿಕ್ಕಮಗಳೂರಲ್ಲಿ ಆಕಸ್ಮಿಕವಾಗಿ ನಡೆದ ಘಟನೆ ಇದಾಗಿದೆ. ತಪ್ಪಿತಸ್ಥರನ್ನು ಆದಷ್ಟು ಬೇಗ ಪತ್ತೆ ಹಚ್ಚುವಂತೆ ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರು ಸುದ್ದಿಗೋಷ್ಠಿಯಲ್ಲಿ ಭಾನುವಾರ ತಿಳಿಸಿದರು.
ಕಿಡಿಗೇಡಿಗಳು ಮಾಡಿರುವ ಈ ಕೃತ್ಯದಿಂದ ಬೇರೆ ಜನರಿಗೆ ಮಾತ್ರವಲ್ಲ. ಅವರ ಸಂಬಂಧಿಕರಿಗೂ ತೊಂದರೆ ಆಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಾರ್ಥನಾ ಮಂದಿರ ಅಪವಿತ್ರಗೊಳಿಸಿರುವ ಘಟನೆಗೆ ಸಂಬಂಧಿಸಿದಂತೆ ವರದಿ ನೀಡುವಂತೆ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ಸೂಚನೆ ನೀಡಿದ್ದಾರೆ. ಅದರಂತೆ ಈ ಹಿಂದೆ ಚಿಕ್ಕಮಗಳೂರಿನಲ್ಲಿ ನಡೆದಿರುವ ಇತರೆ ಘಟನೆಗಳು ಹಾಗೂ ಶನಿವಾರ ನಡೆದ ಘಟನೆ ಕುರಿತ ವರದಿಯನ್ನು ಸಲ್ಲಿಸಲಾಗುವುದು. ಶನಿವಾರ ಸಂಭವಿಸಿದ ಘಟನೆಯ ಬಗ್ಗೆ ಜಿಲ್ಲಾಡಳಿತವೂ ಕೂಡ ರಾಜ್ಯ ಸರ್ಕಾರಕ್ಕೆ ಪ್ರತ್ಯೇಕವಾಗಿ ವರದಿ ಸಲ್ಲಿಸಲಿದೆ ಎಂದರು.
ಈ ಘಟನೆಗೆ ಸಂಬಂಧಿಸಿದಂತೆ ರಾಜಕೀಯ ಬಣ್ಣ ನೀಡುವುದು ಸರಿಯಲ್ಲ. ಆ ರೀತಿಯ ಕೆಲಸ ಕಾಂಗ್ರೆಸ್ ಪಕ್ಷ ಮಾಡುವುದಿಲ್ಲ ಎಂದು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ, ಚಿಕ್ಕಮಗಳೂರು ಶಾಂತಿ ಪ್ರಿಯವಾದ ಜಿಲ್ಲೆ, ಇಲ್ಲಿಗೆ ರಾಜ್ಯದ ವಿವಿಧೆಡೆಗಳಿಂದ ಪ್ರವಾಸಿಗರು ಬರುತ್ತಾರೆ. ಈ ರೀತಿಯ ಘಟನೆಯಿಂದಾಗಿ ಅವರಿಗೂ ತೊಂದರೆಯಾಗಬಾರದು. ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕು. ಮುಂದೆ ಇಂತಹ ಕೃತ್ಯ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾ ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ. ಡಿ.ಎಲ್. ವಿಜಯಕುಮಾರ್, ವಕ್ತಾರ ಎ.ಎನ್. ಮಹೇಶ್, ನಗರಸಭಾ ಮಾಜಿ ಸದಸ್ಯ ಸಂದೀಪ್ ಹಾಗೂ ಉಡುಪಿ ಜಿಲ್ಲೆಯ ನಿಯೋಜಿತ ಜಿಲ್ಲಾ ರಕ್ಷಣಾಧಿಕಾರಿ ಡಾ. ಬೋರಲಿಂಗಯ್ಯ ಉಪಸ್ಥಿತರಿದ್ದರು.
ಗಲಭೆ ರಾಜಕೀಯ ಪ್ರೇರಿತ: ಬಿಜೆಪಿ ಖಂಡನೆ
ಮೂಡಿಗೆರೆ: ಚಿಕ್ಕಮಗಳೂರು ನಗರದ ಶರೀಫ್ ಗಲ್ಲಿಯ ಪ್ರಾರ್ಥನಾ ಸ್ಥಳ ಅಪವಿತ್ರಗೊಳಿಸಿರುವ ಕೃತ್ಯವನ್ನು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಖಂಡಿಸುತ್ತದೆ ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಎಂ.ಸಿ. ಪರೀಕ್ಷಿತ್ ಗೌಡ ಜಾವಳಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೊಂದು ಹೇಯ ಕೃತ್ಯ. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.
ಶನಿವಾರ ಚಿಕ್ಕಮಗಳೂರು ಪಟ್ಟಣದಲ್ಲಿ ನಡೆದ ಗಲಭೆ ರಾಜಕೀಯ ಪ್ರೇರಿತವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ನ ಕೆಲವು ನಾಯಕರು, ಕಾರ್ಯಕರ್ತರು ಈ ಗಲಭೆ ನಿಯಂತ್ರಿಸುವ ಬದಲು ಕೃತ್ಯಕ್ಕೆ ಕುಮ್ಮಕ್ಕು ನೀಡುವುದರ ಮೂಲಕ ಶಾಂತಿ ಕದಡುವ ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಚಿಕ್ಕಮಗಳೂರು ನಗರದಲ್ಲಿ ಅಶಾಂತಿ ಉಂಟಾದ ಬೆನ್ನಲ್ಲೆ ಮೂಡಿಗೆರೆ ಪಟ್ಟಣದಲ್ಲೂ ಕೆಲವು ಕಿಡಿಗೇಡಿಗಳು ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದರು. ಸಕಾಲಕ್ಕೆ ಪೊಲೀಸರ ಆಗಮನದಿಂದಾಗಿ ಕಿಡಿಗೇಡಿಗಳು ಪರಾರಿಯಾದರು. ರಾಜಕೀಯ ಪ್ರೇರಿತವಾದ ಈ ಘಟನೆಯನ್ನು ಬಿಜೆಪಿ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆಯುತ್ತಿದೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಪ್ರಶಾಂತವಾಗಿದ್ದ ಚಿಕ್ಕಮಗಳೂರು ಈಗ ಕಾಂಗ್ರೆ ಸ್ ಅಧಿಕಾರಕ್ಕೆ ಬಂದಾಗಲೇ ಹಿಂದು-ಮುಸ್ಲೀಮರ ನಡುವೆ ದ್ವೇಶದ ಹೊಗೆಯಾಡುವಂತೆ ಕೆಲವರು ಮಾಡುತ್ತಿದ್ದಾರೆ ಅಂತಹವರನ್ನು ಬಂಧಿಸಿ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದರು.
ಜಿಲ್ಲಾದ್ಯಂತ ಎಲ್ಲಾ ಪ್ರಾರ್ಥನಾ ಮಂದಿರಗಳಿಗೆ ಸೂಕ್ತ ಭದ್ರತೆ ಒದಗಿಸಬೇಕು. ಇಂಥ ಅಹಿತಕರ ಘಟನೆ ಮರುಕಳಿಸದಂತೆ ಸರ್ಕಾರ ಸೂಕ್ತ ಕ್ರಮ ಜರುಗಿಸುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ಪ್ರಕ್ಷುಬ್ಧ ವಾತಾವರಣವನ್ನು ಸಹಜ ಸ್ಥಿತಿಯತ್ತ ಮರಳುವಂತೆ ಮಾಡಿದ ಜಿಲ್ಲಾಧಿಕಾರಿ ಬಿ.ಎಸ್. ಶೇಖರಪ್ಪ, ರಕ್ಷಣಾ ಇಲಾಖೆ ಸಿಬ್ಬಂದಿ ಕರ್ತವ್ಯಪ್ರಜ್ಞೆಗೆ ಪ್ರಶಂಸೆ ವ್ಯಕ್ತ ಪಡಿಸಿದರು.