ಕುರುಬ ಸಮಾಜ ಸಂಘಟನೆಗೆ ಒತ್ತು: ಭರವಸೆ
ಕ.ಪ್ರ.ವಾರ್ತೆ, ಕಡೂರು, ಡಿ. 30
ಕುರುಬ ಸಮಾಜದಿಂದ ಹಮ್ಮಿಕೊಳ್ಳಲಾದ ಜನಜಾಗೃತಿ ಸಮಾವೇಶದಲ್ಲಿ ತಾಲೂಕು ಕುರುಬ ಸಮಾಜದ ನೂತನ ಅಧ್ಯಕ್ಷರಾಗಿ ಜಿಪಂ ಮಾಜಿ ಅಧ್ಯಕ್ಷ ಕೆ.ಎಂ. ಕೆಂಪರಾಜು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಸಮಾವೇಶಕ್ಕೂ ಮುನ್ನ ಪಟ್ಟಣದ ಪ್ರಸನ್ನ ಗಣಪತಿ ಪೆಂಡಾಲಿನ ಆವರಣದಿಂದ ಮೆರವಣಿಗೆ ಹೊರಟ ಸಮುದಾಯದ ಮುಖಂಡರು ಕೆ.ಎಂ. ರಸ್ತೆಯಿಂದ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಗಿ ಬೀರೂರು ರಸ್ತೆಯಲ್ಲಿರುವ ಬನಶಂಕರಿ ಸಮುದಾಯ ಭವನದಲ್ಲಿ ಆಯೋಜಿಸಿದ್ದ ಜನಜಾಗೃತಿ ಸಮಾವೇಶಕ್ಕೆ ತೆರಳಿದರು.
ಸೇವೆ ಮುಖ್ಯ: ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೆ.ಎಂ.ಕೆಂಪರಾಜು ಮಾತನಾಡಿ, ಎಲ್ಲರನ್ನೂ ಸಮಾನ ದೃಷ್ಟಿಯಲ್ಲಿ ಕಾಣುವ ಮೂಲಕ ಪ್ರತಿ ಹೋಬಳಿ ಮತ್ತು ಗ್ರಾಮಾಂತರ ಮಟ್ಟದಲ್ಲೂ ಕುರುಬ ಸಮಾಜದ ಸಂಘಟನೆಗೆ ಒತ್ತು ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಪದಾಧಿಕಾರಿಗಳ ಆಯ್ಕೆ: ತಾಲೂಕು ಕುರುಬರ ಸಂಘದ ಅಧ್ಯಕ್ಷರಾಗಿ ಕೆ.ಎಂ. ಕೆಂಪರಾಜು ಅವರನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಸಿ.ಎಂ. ಗಂಗಪ್ಪ, ಖಜಾಂಚಿಯಾಗಿ ಕೆ.ಎಚ್.ಎ. ಪ್ರಸನ್ನ, ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎಲ್. ದೇವರಾಜ್ ಮತ್ತು ತಾಲೂಕು ಕನಕ ಯುವ ಸೇನೆಯ ಅಧ್ಯಕ್ಷರಾಗಿ ತೋಟದ ಮನೆ ಮೋಹನ್ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ನಿರ್ದೇಶಕ ಕರಿಬಡ್ಡೆ ಶ್ರೀನಿವಾಸ್ ಮತ್ತು ಸಿ.ಎಂ. ಗಂಗಪ್ಪ ಮಾತನಾಡಿ, ಸಮಾಜದ ಸಂಘಟನೆಗೆ ಸಮಾಜದ ಎಲ್ಲರೂ ಶ್ರಮಿಸಿದ್ದಾರೆ. ಸಮಾಜದ ನಮ್ಮವರೇ ಕೆಲವರು ಟ್ರಸ್ಟ್ ಮಾಡಿಕೊಂಡಿದ್ದು, ಅವರಿಗೂ ಸಮಾವೇಶಕ್ಕೆ ಬರುವಂತೆ ಆಹ್ವಾನ ನೀಡಲಾಗಿತ್ತು. ಸಮಾಜದ ಹಿರಿಯ ಮುಖಂಡರೊಂದಿಗೆ ಸಮಾಲೋಚಿಸಿ ಟ್ರಸ್ಟ್ ರಚಿಸುವ ಕುರಿತು ಸಮಾಲೋಚಿಸಬಹುದಿತ್ತು. ಕುರುಬ ಸಮಾಜದಲ್ಲಿ ಒಂದೇ ಸಂಘಟನೆ ಇರುವಂತೆ ಮಾಡಬೇಕಿದೆ ಎಂದರು.
ಮುಖಂಡರಾದ ಕೆ.ಎಸ್. ಆನಂದ್, ಕರಿಬಡ್ಡೆ ಶ್ರೀನಿವಾಸ್, ಕೆ.ಇ. ಹಿರಿಯಣ್ಣಯ್ಯ, ಎನ್.ಎಸ್. ಚಂದ್ರಣ್ಣ, ಶರತ್ ಕೃಷ್ಣಮೂರ್ತಿ, ಹರೀಶ್, ಜಿ.ತಿಮ್ಮಯ್ಯ, ಸಿದ್ದಪ್ಪ, ಗೋವಿಂದಪ್ಪ, ಮಂಜುನಾಥ್, ರವಿ, ಅಶ್ವಿನಿ ರವಿ, ಕೆ. ಎನ್. ಜಯಣ್ಣ, ರಂಗನಾಥ್, ಲಕ್ಕಪ್ಪ, ಎಚ್.ಬಿ. ಜಯಣ್ಣ ಬೂದಾಳ್, ಅನಿಲ್, ಓಂಕಾರ್ ಮತ್ತಿತರರು ಇದ್ದರು.