ಮಂದಿರ ಅಪವಿತ್ರ: ಆರೋಪಿಗಳ ಬಂಧನಕ್ಕೆ ಆಗ್ರಹ
ಕ.ಪ್ರ.ವಾರ್ತೆ, ತರೀಕೆರೆ, ಡಿ. 30
ಜಯಕರ್ನಾಟಕ ತಾಲೂಕು ಘಟಕ ವತಿಯಿಂದ ಸೋಮವಾರ ಪಟ್ಟಣದಲ್ಲಿ, ಚಿಕ್ಕಮಗಳೂರಿನಲ್ಲಿ ಪ್ರಾರ್ಥನಾ ಮಂದಿರವನ್ನು ಅಪವಿತ್ರಗೊಳಿಸಿ ಗಲಭೆಗೆ ಕಾರಣರಾಗಿರುವವರನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಏರ್ಪಡಿಸಲಾಗಿತ್ತು.
ಪಟ್ಟಣದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆಯನ್ನು ಏರ್ಪಡಿಸಲಾಗಿತ್ತು. ಜಯಕರ್ನಾಟಕ ತಾಲೂಕು ಘಟಕದ ಅಧ್ಯಕ್ಷ ಟಿ.ಎನ್. ಜಗದೀಶ್, ರಫೀಕ್, ಖಲೀಲ್, ಅಕ್ಬರ್ ಭಾಷ, ವೇದಮೂರ್ತಿ, ಲೋಕೇಶ್, ದಿನೇಶ್, ಕಾರ್ತಿಕ್, ದರ್ಶನ್, ಘಟಕದ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ಮಿನಿ ವಿಧಾನಸೌಧದ ಬಳಿ ನಡೆದ ಸಭೆಯಲ್ಲಿ ತಾ. ಘಟಕದ ಅಧ್ಯಕ್ಷ ಟಿ.ಎನ್. ಜಗದೀಶ್ ಮಾತನಾಡಿ, ಸಾಮಾಜಿಕ ಹೋರಾಟ, ಸಮಾನತೆ ಸೃಷ್ಟಿ ಘಟಕದ ಉದ್ದೇಶವಾಗಿದ್ದು, ಕಿಡಿಗೇಡಿಗಳನ್ನು ಬಂಧಿಸುವಂತೆ ಆಗ್ರಹಿಸಿದರು.
ಪುರಸಭೆ ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್ ಮಾತನಾಡಿ, ಕೂಡಲೇ ಕಿಡಿಗೇಡಿಗಳನ್ನು ಬಂಧಿಸಬೇಕೆಂದು ಒತ್ತಾಯಿಸಿದರು. ಚಿಕ್ಕಮಗಳೂರು ನಗರದ ಶರೀಫ್ ಗಲ್ಲಿಯ ದರ್ಗಾವನ್ನು ದುಷ್ಕರ್ಮಿಗಳು ಅಪವಿತ್ರಗೊಳಿಸಿ ಕೋಮುಗಲಭೆಗೆ ಕಾರಣವಾಗಿದೆ. ಹಿಂದೂ- ಮುಸ್ಲಿಂ ಎಂಬ ಬೇಧ-ಭಾವಗಳಿಲ್ಲದೆ ಭಾವೈಕತ್ಯೆಯನ್ನು ಬೆಳೆಸಿಕೊಳ್ಳದೆ, ಇಂತಹ ದುಷ್ಕೃತ್ಯಗಳನ್ನು ಪದೇ ಪದೇ ನಡೆಸಿ ಸಮಾನತೆಯ ಸಮಾಜದಲ್ಲಿ ಬೇಧಬಾವದ ಬೆಂಕಿ ಹಚ್ಚಿ ಬೇರೆಯವರು ಲಾಭ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಘಟಕದ ಅಧ್ಯಕ್ಷ ಟಿ.ಎನ್. ಜಗದೀಶ್ ಉಪವಿಭಾಗಾಧಿಕಾರಿಯವರಿಗೆ ಮನವಿ ಅರ್ಪಿಸಲಾಯಿತು.
ಗೂಂಡಾ ಕಾಯ್ದೆಯಡಿ ಬಂಧನಕ್ಕೆ ಒತ್ತಾಯ
ಚಿಕ್ಕಮಗಳೂರು: ಎಂಜಿ ರಸ್ತೆಯಲ್ಲಿರುವ ಪ್ರಾರ್ಥನಾ ಮಂದಿರವನ್ನು ಕಿಡಿಗೇಡಿಗಳು ಅಪವಿತ್ರಗೊಳಿಸಿದ್ದು, ಈ ಸಂದರ್ಭದಲ್ಲಿ ಸಾರ್ವಜನಿಕರ ಹಾಗೂ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿರುವ ಮುಸ್ಲಿಂ ಯುವಕರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾ ಖಜಾಂಚಿ ಯೋಗೀಶ್ ರಾಜ್ ಅರಸ್ ಆಗ್ರಹಿಸಿದ್ದಾರೆ. ಕೆಲವು ಮುಸ್ಲಿಂ ಯುವಕರು ತಾಲಿಬಾನ್ ರೀತಿಯಲ್ಲಿ ವರ್ತಿಸಿದ್ದಾರೆ. ಈ ಗೂಂಡಾ ಯುವಕರನ್ನು ನಗರದ ವಿವಿಧ ಕಡೆಗಳಲ್ಲಿ ಅಳವಡಿಸಿರುವ ಸಿಸಿ ಕ್ಯಾಮೆರಾಗಳ ಮೂಲಕ ಗುರುತು ಪತ್ತೆ ಹಚ್ಚಿ ಗೂಂಡಾ ಕಾಯ್ದೆಯಡಿ ಬಂಧಿಸಬೇಕೆಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.