ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಚಿಕ್ಕಮಗಳೂರು

ಮಾರ್ಕೆಟ್ ರಸ್ತೆ ಬಂದ್: ಎಚ್ಚರಿಕೆ

Lingaraj Badiger
Updated On : 31 Dec 2013, 10:51 am

ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಡಿ. 30
ಧೂಳು ಮತ್ತು ಸ್ವಚ್ಛತಾ ಕೊರತೆಯಿಂದ ಸಾರ್ವಜನಿಕರ ಅನಾರೋಗ್ಯಕ್ಕೆ ಕಾರಣವಾಗಿರುವ ನಗರದ ಮಾರ್ಕೆಟ್ ರಸ್ತೆ ಅಭಿವೃದ್ಧಿಗೆ ಒಂದು ವಾರದಲ್ಲಿ ಚಾಲನೆ ನೀಡದಿದ್ದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ರಸ್ತೆ ಬಂದ್ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ನಗರಸಭೆ ಸದಸ್ಯ ಮುತ್ತಯ್ಯ ಎಚ್ಚರಿಸಿದ್ದಾರೆ.
ನಗರದ ಅಭಿವೃದ್ಧಿ ದೃಷ್ಟಿಯಿಂದ ಮಾರ್ಕೆಟ್ ರಸ್ತೆ ಅಗಲೀಕರಣಕ್ಕೆ ಮುಂದಾಗಿದ್ದು, ಸ್ವಾಗತಾರ್ಹವಾಗಿದ್ದರೂ ನಂತರ ಒಂದು ವರ್ಷ ಕಳೆದರೂ ಈ ರಸ್ತೆ ಅಭಿವೃದ್ಧಿಗೆ ನಗರಸಭೆ ಮುಂದಾಗದೆ ನಿರ್ಲಕ್ಷ ತೋರಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಣ್ಮುಚ್ಚಿ ಕುಳಿತ ಜಿಲ್ಲಾಡಳಿತ: ಪೈಪ್‌ಲೈನ್ ಇಲ್ಲದೆ ಕುಡಿಯಲು ನೀರಿಲ್ಲ, ಸ್ವಚ್ಛತೆ ಅಂತೂ ಇಲ್ವೇ ಇಲ್ಲ, ಚರಂಡಿ ಮಂಗಮಾಯವಾಗಿ ಕೊಳಚೆ ನೀರು ತುಂಬಿ ದುರ್ವಾಸನೆಯಿಂದ ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ, ರಸ್ತೆ ಪೂರ್ಣ ಧೂಳಿನಿಂದ ಆವೃತ್ತವಾಗಿ ರೋಗದ ಭೀತಿಯಿಂದ ಜನ ವಾಸಿಸುವ ಸ್ಥಿತಿ ನಿರ್ಮಾಣವಾಗಿದೆ. ಮಳೆ ಬಂದರಂತೂ ಇಲ್ಲಿನ ಕಷ್ಟ ದೇವರೇ ಬಲ್ಲ, ಇಷ್ಟೆಲ್ಲಾ ಬೆಟ್ಟದಷ್ಟು ಸಮಸ್ಯೆಗಳು ಎದುರಾಗಿದ್ದರೂ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿದೆ ಎಂದು ಆರೋಪಿಸಿದ್ದಾರೆ.
ಈ ಸಮಸ್ಯೆಗಳ ಬಗ್ಗೆ ಹಲವು ಬಾರಿ ನಗರಸಭೆ ಮತ್ತು ಜಿಲ್ಲಾಡಳಿತದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ವ್ಯಾಪಾರವಿಲ್ಲದೆ ವರ್ತಕರು ಗೋಳಾಡುತ್ತಾ ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಹಿಡಿಶಾಪ ಹಾಕಿಕೊಂಡು ನರಕಯಾತನೆ ಅನುಭವಿಸುತ್ತಿದ್ದಾರೆ. ಈ ರಸ್ತೆ ಅಭಿವೃದ್ಧಿಗೆ ಚಾಲನೆ ನೀಡಲು ಒಂದು ವಾರ ಗಡುವು ನೀಡಲಾಗುವುದು. ಇಲ್ಲದಿದ್ದಲ್ಲಿ ಮಾರ್ಕೆಟ್ ರಸ್ತೆ ಬಂದ್ ಮಾಡಿ ಪ್ರತಿಭಟಿಸಬೇಕಾಗುತ್ತದೆ ಹೇಳಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement